ತಿರುವನಂತಪುರ: ಗಂಭೀರ ಅಸ್ವಸ್ಥ ಕೋವಿಡ್ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ರಾಜ್ಯದ ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ಸೌಲಭ್ಯವಿದೆ ಎಂದು ಆರೋಗ್ಯ ಸಚಿವ ಕೆ.ಕೆ.ಶೈಲಜಾ ಮಂಗಳವಾರ ಘೋಷಿಸಿದರು. ಚಿಕಿತ್ಸೆಗಾಗಿ ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ಪ್ಲಾಸ್ಮಾ ಬ್ಯಾಂಕ್‍ಗಳನ್ನು ಸ್ಥಾಪಿಸಲಾಗುವುದು ಎಂದು ವರದಿಯಾಗಿದೆ.
ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ಯಶಸ್ವಿಯಾಗಿದೆ ಎಂದು ಆರೋಗ್ಯ ಸಚಿವರು ಹೇಳಿದರು. ಈವರೆಗೆ ಪ್ಲಾಸ್ಮಾ ಚಿಕಿತ್ಸೆ ಪಡೆದ ಶೇಕಡಾ 90 ರಷ್ಟು ರೋಗಿಗಳನ್ನು ರಕ್ಷಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಕೋವಿಡ್ ರೋಗ ಮುಕ್ತರಾದವರ ರಕ್ತದಿಂದ ಪ್ಲಾಸ್ಮಾವನ್ನು ಬೇರ್ಪಡಿಸಿ ತೀವ್ರ ಕೋವಿಡ್ ಬಾಧಿತರಾದವರಿಗೆ ಚುಚ್ಚುಮದ್ದಿನ ರೂಪದಲ್ಲಿ ನೀಡುವ ಚಿಕಿತ್ಸೆ ಇದಾಗಿದೆ. ಈಗಾಗಲೇ ಸೋಂಕಿಗೊಳಗಾಗಿ ಗುಣಮುಖರಾದವರ ರಕ್ತದಲ್ಲಿ ನೋವಲ್ ಕೊರೊನಾ ವೈರಸ್ 19 ಆಂಟಿಜನ್ ಗಳು ಉತ್ಪಾದನೆಯಾಗಿರುವುದರಿಂದ ಅಂತವರ ಪ್ಲಾಸ್ಮಾ ತೀವ್ರ ಕೊರೊನಾ ರೋಗಿಗಳಲಲಿ ಆಂಟಿಜನ್ ಉತ್ಪಾದನೆ ನೆರವಾಗುವಲ್ಲಿ ಪ್ಲಾಸ್ಮಾ ಥೆರಪಿ ಬಹು ಪ್ರಯೋಜನಕಾರಿಯಾಗಿ ಯಶ್ವಿಯಾಗಿದೆ. ಮಲಪ್ಪುರಂ ಜಿಲ್ಲೆಯಲ್ಲಿ ರಾಜ್ಯದ ಮೊದಲ ಕಾನ್ವೆಲೆಸೆಂಟ್ ಪ್ಲಾಸ್ಮಾ ಬ್ಯಾಂಕ್ ಪ್ರಾರಂಭಿಸಲಾಗಿದೆ ಎಂದು ಸಚಿವೆ ತಿಳಿಸಿರುವರು.
ಕೋವಿಡ್ ರೋಗ ಮುಕ್ತರಾದ ಇಪ್ಪತ್ತೊಂದು ಮಂದಿಗಳು ಮಂಜೇರಿ ವೈದ್ಯಕೀಯ ಕಾಲೇಜಿಗೆ ಈಗಾಗಲೇ ಪ್ಲಾಸ್ಮಾ ದಾನಗೈದಿದ್ದಾರೆ. ಸೋಮವಾರ ವಯನಾಡಿನ ಮಾನಂದವಾಡಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ಲಾಸ್ಮಾ ದಾನಗೈಯ್ಯಲು ಸ್ವಯಂ ಸ್ಪೂರ್ತಿಯಿಂದ 9 ಮಂದಿ ಮುಂದೆಬಂದಿದ್ದರು ಎಂದು ಸಚಿವೆ ಮಾಹಿತಿ ನೀಡಿದರು.


