HEALTH TIPS

ಆಟಿ ತಿಂಗಳು ಆರಂಭಗೊಂಡಿದೆ-ಸಾಮಾಜಿಕ ಪಿಡುಗು, ಸಂಕಷ್ಟಗಳಿಗೆ ಪರಿಹಾರವೊದಗಿಸುವ ಕಳಂಜನಿಗೂ ಲಾಕ್ ಈ ಬಾರಿ!


       ಬದಿಯಡ್ಕ: ಕರ್ಕಟಕ ಅಥವಾ ಆಟಿ ತಿಂಗಳ ವ್ಯಾದಿ-ಸಂಕಷ್ಟಗಳನ್ನು ನಿವಾರಿಸುವ ಆಟಿ ಕಳಂಜ ಅಥವಾ ಆದಿ ಬೇಡನ್ ನಾಡಿಗಿಳಿಯುವ ಕಾಲ ಇದು. ಆದರೆ ಈ ಬಾರಿ ಮಹಾಮಾರಿ ಕೋವಿಡ್ ನ ಹಿನ್ನೆಲೆಯಲ್ಲಿ ಕಳಂಜನೂ ಹೊರಗಿಳಿಯದಿರುವುದು ದುರ್ದೈವ ಎನ್ನದೆ ವಿಧಿಯಿಲ್ಲ. ಉತ್ತರ ಮಲಬಾರ್-ತುಳುನಾಡಿನಾದ್ಯಂತ ಕಳಂಜ ವಿವಿಧ ಹೆಸರು, ರೂಪಗಳಲ್ಲಿ ಏಕ ಪರಿಕಲ್ಪನೆಯಡಿ ಸಾಮಾಜಿಕ ಜನಜೀವನದೊಂದಿಗೆ ಹಾಸುಹೊಕ್ಕಾಗಿರುವ ಜಾನಪದ ಆಚರಣೆಯೂ, ಕಲೆಯೂ ಆಗಿ ನಡೆದುಬಂದಿದೆ. ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಸಹಿತ ಕೇರಳದ ಮಲಬಾರ್  ಪ್ರದೇಶಗಳಲ್ಲೂ ಈ ಕಲಾಪ್ರಕಾರ ಸಮಗ್ರವಾಗಿ ಬೆಳೆದುಬಂದಿದೆ.
    ತುಳುನಾಡಿನಲ್ಲಿ ನಲಿಕೆ ಸಮುದಾಯದವರು ಕಳಂಜ ಕುಣಿತವನ್ನು ಅನುಸರಿಸುವ ವಿಭಾಗಳಾಗಿದ್ದರೆ, ಕಾಸರಗೋಡಿನಾಚೆಗಿನ ಮಲಬಾರ್ ವಲಯದಲ್ಲಿ ಮಲಯ ಮತ್ತು ಪಾಣಾರರು ಆದಿ ಬೇಡನ್ ನಾಡಿಗಿಳಿದು ಮನೆಮನೆಗಳಿಗೆ ತೆರಳಿ ದುರಿತ ನಿವಾರಿಸುವ ಪುಟ್ಟ ದೈವಗಳೆಂದೇ(ಕುಟ್ಟಿ ತೈಯ್ಯಂ)ಪ್ರತೀತಿ. ಮಹಾಭಾರತದ ಪಾಂಡವರಲ್ಲಿ ಓರ್ವನಾದ ಅರ್ಜುನ ಪಾಶುಪತಾಸ್ತ್ರ ಪಡೆಯಲು ಶಿವಪರಮಾತ್ಮನನ್ನು ಸಂಸ್ತುತಿಸಿ ತಪಗೈದ ಪ್ರಕರಣಗಳ ಸುತ್ತ ಹಣೆದ ಕತೆಯ ಪ್ರತೀಕವಾಗಿ ಕಳಂಜ ಬಹುವಿಸ್ತಾರದ ಜಾನಪದೀಯ ಮಹತ್ವ ಹೊಂದಿದೆ.
         ಪಾಶುಪತಾಸ್ತ್ರಕ್ಕಾಗಿ ಅರ್ಜುನನ ತಪಸ್ಸು ಮತ್ತು ಅರ್ಜುನನನ್ನು ಪರೀಕ್ಷಿಸಲು ಶಿವನು ಬೇಟೆಗಾರನಾಗಿ ಯುದ್ದ ಮಾಡಿದ ದಂತಕಥೆಗಳಿಂದ ಸುತ್ತುವರಿದಿರುವ ಆದಿಬೇಡನ್ ಪುರಾಣದ ಥಳುಕುಗಳೊಂದಿಗೆ ಜನಜೀವನದ ಮೇಲೆ ಗಾಢ ಪರಿಣಾಮ ಬೀರಿರುವುದು ಹೌದು. ಆದಿಬೇಡನ್ ಎಂಬುದು ಶಿವನ ಪರಿಕಲ್ಪನೆ. ಇದು ವೇಷಭೂಷಣಗಳು ಮತ್ತು ವಸ್ತ್ರಾಲಂಕಾರ ಹೊಂದಿದೆ. ಕರ್ಕಟಕ ಆರಂಭ ದಿನದಿಂದ ಕುಟ್ಟಿ ಥೈಯಂ ಗಳು ಊರೂರು ಸಂಚರಿಸುತ್ತವೆ. ಜೊತೆಯಲ್ಲಿ ವಯಸ್ಕರು ಅರ್ಜುನ ಮತ್ತು ಬೇಡ ರೂಪದ ಶಿವ ಮಹಾನುಭಾವನ ಯುದ್ದ ಕಥಾನಕವನ್ನು ಹಾಡುತ್ತಾರೆ. ಚೆಂಡೆಯ ನಾದದೊಂದಿಗೆ ಕೈಯಲ್ಲಿರುವ ಗಂಟೆಯ ಲಯಕ್ಕೆ ಕುಟ್ಟಿ ಥೈಯಂ ಲಯಬದ್ದನಾಗಿ ನರ್ತಿಸುವುದು ಅಪ್ರತಿಮವಾಗಿ ಪ್ರತ್ಯೇಕ ವಾತಾವರಣ ನಿರ್ಮಾಣದಲ್ಲಿ ಸಾಫಲ್ಯಗೊಳ್ಳುತ್ತದೆ.
               ಕೊರೊನಾ ಭಯ:
     ಕರ್ಕಟಕದ ಈ ಥೈಯಂ ಮನೆಗಳಿಗೆ ಆಗಮಿಸಿದಾಗ ಮನೆಯ ಹಿರಿಯ ಮಹಿಳೆ ಭಸ್ಮ ಬೆರೆಸಿದ ನೀರು ಮತ್ತು ಬೆಳಗುವ ಆರತಿಗಳೊಂದಿಗೆ  ಅಂಗಳಕ್ಕೆ ಬರುತ್ತಾಳೆ. ಹರಿವಾಣ ಮತ್ತು ದೀಪವನ್ನು ಮೂರು ಬಾರಿ ಉತ್ತರಾಭಿಮುಖವಾಗಿ  ತಿರುಗಿಸಿ ಭಸ್ಮ ಬೆರೆಸಿದ ನೀರನ್ನು ಕೃಷಿ ತೋಟ-ಹೊಲದತ್ತ ಚೆಲ್ಲಲಾಗುತ್ತದೆ. ಈ ಕಲ್ಪನೆಯ ಹಿಂದೆ ದುರಿತ ನಿವಾರಿಸುವ ಶಕ್ತಿ ಅಡಗಿದೆ ಎಂದೇ ನಂಬಲಾಗಿದೆ. ಸಮನಾಜದ ಕಲ್ಯಾಣಕ್ಕಾಗಿ, ಸ್ವತಃ ಶಿವ ಪರಮಾತ್ಮನೇ ಬೇಟೆಗಾರನಾಗಿ ಸಂಕಷ್ಟ ನಿವಾರಿಸುತ್ತಾನೆಂದು ನಂಬಲಾಗುತ್ತದೆ. ಪ್ರಸ್ತುತ ಕೊರೋನದ ಭಯದಿಂದ ಥೈಯಂ ಅಥವಾ ಬೇಡನನ್ನು ಬಂಧಿಸಲಾಗಿದೆ. ಎಂದರೆ ಮನೆಮನೆಗಳಿಗೆ ತೆರಳಲು ಅನುಮತಿ ಇಲ್ಲದಿರುವುದರಿಂದ ತಿರುಗಾಟ ಮೊಟಕುಗೊಳಿಸಲಾಗಿದೆ. ಕಳೆದ ಐದು ತಿಂಗಳಿನಿಂದ ದೈವ ಕಲಾವಿದರು ಸಮಾಜದ ಎಲ್ಲಾ ವಿಭಾಗದವರಂತೆ ಕೋವಿಡ್ ನೆರಳಲ್ಲಿ ಸಂಕಷಟಕ್ಕೊಳಗಾಗಿದ್ದು ಏಪ್ರಿಲ್-ಮೇ ತಿಂಗಳುಗಳ ಭೂತಾರಾಧನೆಯ ಋತುವಲ್ಲಿ ಆಚರಣೆಗಳಿಲ್ಲದೆ ಬದುಕು ಕತ್ತಲೆಯಾಗಿದೆ ಎಂದು ಭೂತ ನರ್ತನ ಕಲಾವಿದರೊಬ್ಬರು ಬೇಗುದಿ ವ್ಯಕ್ತಪಡಿಸಿದ್ದಾರೆ. ಆದರೆ ಮುಂದಿನ ತುಲಾ 10 ರಂದು ಮತ್ತೆ ದೈವಗಳ ಆರಾಧನೆ ಪರ್ವ ಕಾಲಕ್ಕಾಗುವಾಗ ಕೊರೊನಾದ ಅಟ್ಟಹಾಸ  ನಿಯಂತ್ರಣಕ್ಕೆ ಬಂದೀತೆಂಬ ಭರವಸೆ ಭೂತಾರಾಧಕ ಕಲಾವಿದರಲ್ಲಿ ಬದುಕನ್ನು ಪ್ರೀತಿಸಲು ಪ್ರೇರೇಪಿಸುತ್ತಿದೆ. ಹಾಗಾಗಲೆಂಬುದೇ ಸಜ್ಜನರ ಪ್ರಾರ್ಥನೆ ಕೂಡಾ ಹೌದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries