ಕೊಚ್ಚಿ: ತಿರುವನಂತಪುರ ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಮತ್ತು ಸಂದೀಪ್ ನಾಯರ್ ಅವರ ಕಸ್ಟಡಿ ವಿಸ್ತರಿಸಲಾಗಿದೆ. ಕಸ್ಟಡಿಯನ್ನು ನಾಲ್ಕು ದಿನಗಳವರೆಗೆ ವಿಸ್ತರಿಸಲಾಗಿದೆ. ನ್ಯಾಯಾಲಯವು ಶುಕ್ರವಾರ ಆರೋಪಿಗಳ ಜಾಮೀನು ಅರ್ಜಿಯನ್ನು ಆಲಿಸಲಿದೆ. ಕಸ್ಟಡಿ ಅವಧಿ ಮುಗಿದ ನಂತರ ಆರೋಪಿಗಳನ್ನು ಕೊಚ್ಚಿಯಲ್ಲಿ ರಿಮಾಂಡ್ ಮಾಡಲಾಗುವುದು. ಅವರನ್ನು ಮಂಗಳವಾರ ಎನ್ ಐ ಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ತಿರುವನಂತಪುರ ವಿಮಾನ ನಿಲ್ದಾಣದ ಮೂಲಕ ರಾಜತಾಂತ್ರಿಕ ಸಾಮಾನುಗಳ ಬ್ಯಾರೀಗೇಜ್ ಒಳಗೆ ಚಿನ್ನ ಕಳ್ಳಸಾಗಣೆ ಮಾಡಿದ ಪ್ರಕರಣದಲ್ಲಿ ಸ್ವಪ್ನಾ ಸುರೇಶ್ ಎರಡನೇ ಆರೋಪಿ. ಸಂದೀಪ್ ನಾಯರ್ ನಾಲ್ಕನೇ ಆರೋಪಿ. ಪ್ರಕರಣದ ಮೊದಲ ಆರೋಪಿ ಸರಿತ್ ಕೂಡ ಎನ್ ಐ ಎ ವಶದಲ್ಲಿದ್ದಾನೆ. ತನಿಖಾ ತಂಡ ಈ ಮೂವರನ್ನು ಪ್ರಶ್ನಿಸಿ ತಿರುವನಂತಪುರದ ವಿವಿಧ ಸ್ಥಳಗಳಿಗೆ ಕರೆದೊಯ್ದು ಕಳೆದ ಕೆಲವು ದಿನಗಳಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಸ್ಟಮ್ಸ್ ಗೆ ಇನ್ನೂ ಆರೋಪಿಗಳನ್ನು ಪ್ರಶ್ನಿಸಲು ಸಾಧ್ಯವಾಗಿಲ್ಲ. ಸ್ವಪ್ನಾ ಮತ್ತು ಸಂದೀಪ್ ಎನ್ ಐ ಎ ವಶದಲ್ಲಿದ್ದು, ಕಸ್ಟಮ್ಸ್ ನೋಂದಾಯಿಸಿದ ಪ್ರಕರಣದಲ್ಲಿ ಇನ್ನೂ ಬಂಧನವಾಗಿಲ್ಲ. ಮುಖ್ಯ ಆರೋಪಿಗಳಲ್ಲಿ ಪಿಎಸ್ ಸರಿತ್ ನನ್ನು ಮಾತ್ರ ಕಸ್ಟಮ್ಸ್ ಪ್ರಶ್ನಿಸಿದೆ.
ಚಿನ್ನ ಕಳ್ಳಸಾಗಣೆಗೆ ಸಂಬಂಧಿಸಿದಂತೆ ಒಂದು ಡಜನಿಗೂ ಹೆಚ್ಚು ಜನರನ್ನು ಕಸ್ಟಮ್ಸ್ ಬಂಧಿಸಿದೆ ಎಂದು ತಿಳಿದುಬಂದಿದೆ. ಏತನ್ಮಧ್ಯೆ, ಎನ್ ಐ ಎ ಸಾಕ್ಷಿಗಾಗಿ ಸರಿತ್ ಅನ್ನು ತಿರುವನಂತಪುರಕ್ಕೆ ಕರೆತಂದಿದೆ. ತಂಡವು ನಿನ್ನೆ ಮುಂಜಾನೆ ಕೊಚ್ಚಿಯಿಂದ ಹಿಂದಿರುಗಿ ತಿರುವನಂತಪುರ ಪೆÇಲೀಸ್ ಕ್ಲಬ್‍ಗೆ ತಲುಪಿತು. ಅಲ್ಲಿಂದ ಸಾಕ್ಷ್ಯ ಸಂಗ್ರಹ ನಡೆಸಿತು.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐ ಎ) ಚಿನ್ನದ ಕಳ್ಳಸಾಗಣೆ ಪ್ರಕರಣವನ್ನು ರಾಷ್ಟ್ರೀಯ ಭದ್ರತೆಗೆ ಧಕ್ಕೆ ಎಂದು ಪರಿಗಣಿಸಿದೆ. ವಿಮಾನ ನಿಲ್ದಾಣ ಸರಕು ಘಟಕ ಸೇರಿದಂತೆ ಇತರ ಸ್ಥಳಗಳಿಂದ ಸಾಕ್ಷ್ಯಗಳನ್ನು ಪಡೆಯುತ್ತಿದೆ.


