ಕಾಸರಗೋಡು: "ಸುಭಿಕ್ಷ ಕೇರಳಂ" ಯೋಜನೆ ಕಾಸರಗೋಡು ಜಿಲ್ಲೆಯಲ್ಲಿ ಹೈಟೆಕ್ ಆಗಿದೆ. ಮೊಬೈಲ್ ಆಪ್ ಮೂಲಕ ಯೋಜನೆ ಸಂಬಂಧ ಮಾಹಿತಿ ಸಂಗ್ರಹ-ಕೃಷಿ ಉತ್ಪನ್ನ ಮಾರಾಟ ಎಲ್ಲವೂ ನಡೆಯುತ್ತಿದೆ.
ಕೋವಿಡ್ ತದನಂತರದ ಕಾಲಾವಧಿಯಲ್ಲಿ ಆಹಾರ ಸುರಕ್ಷೆ ಖಚಿತಪಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಜಾರಿಗೊಳಿಸಿರುವ ಜನಪರ ಯೋಜನೆಯೇ ಸುಭಿಕ್ಷ ಕೇರಳಂ. ಈ ಯೋಜನೆ ಜಾರಿಯಲ್ಲಿ ಇಡೀ ರಾಜ್ಯಕ್ಕೆ ಮಾದರಿಯಾಗಿರುವ ಜೊತೆಗೆ ಯೋಜನೆಗೆ ಸಂಬಂಧಪಟ್ಟ ಚಟುವಟಿಕೆಗಳನ್ನು ಹೈಟೆಕ್ ಗೊಳಿಸುವ ಮೂಲಕ ಕಾಸರಗೋಡು ಜಿಲ್ಲೆ ಮುಂಚೂಣಿಯಲ್ಲಿದೆ.
ಯೋಜನೆ ಸಂಬಂಧ ಮಾಹಿತಿ ಸಂಗ್ರಹ ಈಗಾಗಲೇ ಮೊಬೈಲ್ ಆಪ್ ಮೂಲಕ ನಡೆಯುತ್ತಿದ್ದರೆ, ಈ ಮೂಲಕ ನಡೆಸಲಾದ ಕೃಷಿಯ ಉತ್ಪನ್ನಗಳ ಮಾರಾಟ ನಡೆಸಲೂ ಬಳಸಬಹುದಾದ ಮೊಬೈಲ್ ಆಪ್ ಸಿದ್ಧತೆ ತ್ವರಿತಗತಿಯಲ್ಲಿದೆ. ಯೋಜನೆ ಜಾರಿಗೊಳ್ಳುವ ಜಾಗದ ಮಾಹಿತಿಗಳನ್ನು ಕೃಷಿಕರು ಈ ಮೊಬೈಲ್ ಆಪ್ ನಲ್ಲಿ ಅಪ್ ಲೋಡ್ ನಡೆಸುತ್ತಿದ್ದಾರೆ. ಇದಕ್ಕಾಗಿ ಕಾಸರಗೋಡು ಜಿಲ್ಲೆಯಲ್ಲಿ ನವೀನರೀತಿ ಸಿದ್ಧಪಡಿಸಲಾದ "ಸುಭಿಕ್ಷ ಕೇರಳಂ" ಆಪ್ ಈಗಾಗಲೇ ಜನಜನಿತವಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ ಒಟ್ಟು 2917 ಎಕ್ರೆ ಜಾಗ ಈ ಯೋಜನೆಗಾಗಿ ವಹಿಸಿಕೊಳ್ಳಲಾಗಿದೆ. 1908 ಎಕ್ರೆಯಲ್ಲಿ ಕೃಷಿ ಆರಂಭಿಸಲಾಗಿದೆ ಎಂದು ಹರಿತ ಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ತಿಳಿಸಿದರು. ಕಳೆದ 5 ವರ್ಷಗಳಿಂದ ಕೃಷಿ ನಡೆಸದೇ ಬಂಜರಾಗಿರುವ ಜಾಗಗಳಲ್ಲಿ ಈ ಯೋಜನೆಯ ಜಾರಿ ನಡೆಯುತ್ತಿದೆ. ಈಗಾಗಲೇ ಕೃಷಿ ನಡೆಸಲಾಗುತ್ತಿರುವ ಜಾಗಗಳನ್ನೂ ಅಗತ್ಯವಿದ್ದರೆ ಬಳಸಿಕೊಳ್ಳಲಾಗುವುದು ಎಂದವರು ನುಡಿದರು. ಖಾಸಗಿ ವ್ಯಕ್ತಿಗಳು, ಸ್ವಯಂ ಸೇವಾ ಸಂಘಟನೆಗಳು, ರಾಜಕೀಯ ಪಕ್ಷಗಳು, ಗ್ರಾಮಪಂಚಾಯತ್ ಗಳು, ಸ್ಥಳೀಯಾಡಳಿತ ಸಂಸ್ಥೆಗಳು, ಕಂದಾಯ ವಿಭಾಗ ಮೊದಲಾದವರ ಸ್ವಾಮ್ಯದಲ್ಲಿರುವ ಬಂಜರು ಜಾಗಗಳನ್ನು ಈಗಾಗಲೇ ಯೋಜನೆಗಾಗಿ ವಹಿಸಿಕೊಳ್ಳಲಾಗಿದೆ.
ಮಧ್ಯವರ್ತಿಗಳ ಅಗತ್ಯವಿಲ್ಲ:
ಯೋಜನೆ ಪ್ರಕಾರ ನಡೆಸಿದ ಕೃಷಿಯ ಉತ್ಪನ್ನಗಳ ಮಾರಾಟ ಮೊಬೈಲ್ ಆಪ್ ಮೂಲಕ ನಡೆಸುವ ಉದ್ದೇಶ ಹೊಂದಿರುವ ಹಿನ್ನೆಲೆಯಲ್ಲಿ ಮಧ್ಯವರ್ತಿಗಳ ಅಗತ್ಯವಿರುವುದಿಲ್ಲ. ಕೃಷಿಕರು ಬೆಳೆಯುವ ಉತ್ಪನ್ನಗಳನ್ನು ಗ್ರಾಹಕರು ಆಪ್ ಮೂಲಕ ನೇರವಾಗಿ ಪಡದುಕೊಳ್ಳುವ ವ್ಯವಸ್ಥೆ ಆಪ್ ನಲ್ಲಿರುವುದು. ತಮ್ಮ ಸಮೀಪ ಪ್ರದೇಶಗಳಲ್ಲಿರುವ ಕೃಷಿಕರನ್ನು ಗ್ರಾಹಕರು ಸಂಪರ್ಕಿಸುವ ಅವಕಾಶವೂ ಇರುತ್ತದೆ. ದೂರವಾಣಿ ಮೂಲಕ ಕರೆಮಾಡಿ ಉತ್ಪನ್ನಗಳನ್ನು ಖರೀದಿ ನಡೆಸಬಹುದು. ಕೃಷಿಕರಿಗೂ ಉತ್ತಮ ಆದಾಯ ಲಭಿಸಲಿದೆ.
ಇದರ ಜೊತೆಗೆ ಮೀನುಗಾರಿಕೆ, ಪಶುಸಂಗೋಪನೆ, ಹಾಲು ಉತ್ಪಾದನೆ ಇತ್ಯಾದಿ ವಲಯಗಳ ಅಭಿವೃದ್ಧಿ ಗೂ ಯೋಜನೆಯಲ್ಲಿ ಆದ್ಯತೆ ನೀಡಲಾಗುತ್ತಿದೆ.


