ಪೆರ್ಲ: ಎಂಡೋಸಲ್ಫಾನ್ ದುಷ್ಪರಿಣಾಮದಿಂದ ದೈಹಿಕ, ಶಾರೀರಿಕ ಸಮಸ್ಯೆ ಅನುಭವಿಸುತ್ತಿರುವ ಮಕ್ಕಳಿಗೆ ಅಗತ್ಯದ ಸೌಲಭ್ಯಗಳ ಸಹಿತ ಶಿಕ್ಷಣ ಒದಗಿಸುವ ಉದ್ದೇಶದಿಂದ ಎಣ್ಮಕಜೆ ಗ್ರಾಮ ಪಂಚಾಯತ್‍ನಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಬಡ್ಸ್ ಶಾಲೆ ನಿರ್ಮಾಣಗೊಳ್ಳಲಿದೆ. ಪೆರ್ಲದಿಂದ 3 ಕಿ.ಮೀ. ದೂರದಲ್ಲಿರುವ ಕನ್ನಟಿಕ್ಕಾನ ಎಂಬಲ್ಲಿ 2011ರಲ್ಲಿ ಆರಂಭ ಗೊಂಡಿರುವ ಬಡ್ಸ್ ಶಾಲೆ ಅನೇಕ ಸಮಸ್ಯೆಗಳಿಂದ ಕೂಡಿರುವ ಹಿನ್ನೆಲೆಯಲ್ಲಿ ಈ ಮೂಲಕ ನೂತನ ಕಟ್ಟಡ ನಿರ್ಮಾಣಗೊಳ್ಳುತ್ತಿದೆ. 26 ವಿದ್ಯಾರ್ಥಿಗಳೂ, 26 ವಿದ್ಯಾರ್ಥಿನಿಯರೂ(ಒಟ್ಟು 52 ಮಂದಿ) ಇಲ್ಲಿ ಕಲಿಕೆ ನಡೆಸುತ್ತಿದ್ದಾರೆ.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷರಾಗಿ, ವಿಶೇಷ ಅಧಿಕಾರಿ ಸಂಚಾಲಕರಾಗಿರುವ ಸಮಿತಿಯು ರಾಜ್ಯ ಪ್ಲಾನಿಂಗ್ ಬೋರ್ಡ್‍ನ ಅಂಗೀಕಾರದೊಂದಿಗೆ 2 ಕೋಟಿ ರೂ. ವೆಚ್ಚದಲ್ಲಿ ಶಾಲೆಯ ನೂತನ ಕಟ್ಟಡ ನಿರ್ಮಿಸುತ್ತಿದೆ. 5 ತರಗತಿ ಕೊಠಡಿಗಳು, ಶಿಕ್ಷಕರ ಕೊಠಡಿ, ಕಾರ್ಯಾಲಯ, ಅಡುಗೆಮನೆ, ವೊಕೇಶಲ್ ತರಬೇತಿ ಘಟಕ, ಫಿಸಿಯೋಥೆರಪಿ ರೂಂ, ಆಟದ ತಾಣ, ಪ್ರತ್ಯೇಕ ಶೌಚಾಲಯಗಳು (ವಿದ್ಯಾರ್ಥಿಗಳಿಗೆ 4, ವಿದ್ಯಾರ್ಥಿನಿಯರಿಗೆ 4) ಸಹಿತ ಎಲ್ಲ ಸೌಲಭ್ಯಗಳನ್ನೂ ಈ ಕಟ್ಟಡ ಹೊಂದಿದೆ. ಈ ಬಡ್ಸ್ ಶಾಲೆಯ ನೂತನ ಕಟ್ಟಡದ ನಿರ್ಮಾಣ ಶಿಲಾನ್ಯಾಸ ಜು.4 ರಂದು ನಡೆಯಲಿದೆ.




