ತಿರುವನಂತಪುರ: ಚಿನ್ನ ಕಳ್ಳಸಾಗಣೆ ಪ್ರಕರಣದ ಬಗ್ಗೆ ಎನ್‍ಐಎ ತನಿಖೆ ಮುಂದುವರಿಸುತ್ತಿರುವಂತೆ ಯುಎಇ ಅಧಿಕಾರಿಯೋರ್ವರು ದೇಶವನ್ನು ತೊರೆದಿರುವುದಾಗಿ ತಿಳಿದುಬಂದಿದೆ. ಯುಎಇ ಕಾನ್ಸುಲೇಟ್ ಜನರಲ್ ಉಸ್ತುವಾರಿ ವಹಿಸಿರುವ ಅಟಾಚೆ ರಶೀದ್ ಖಮಿಸ್ ಅಲ್ ಅಶ್ಮಿ ಭಾರತದಿಂದ ಯುಎಇಗೆ ಮರಳಿದ್ದಾರೆ.
ಭಾನುವಾರ ತಿರುವನಂತಪುರಂನಿಂದ ದೆಹಲಿಗೆ ತೆರಳಿದ್ದ ಅಟಾಚೆ ಮಂಗಳವಾರ ಯುಎಇಗೆ ತೆರಳಿದ್ದಾರೆಂದು ತಿಳಿದುಬಂದಿದೆ. ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಹೇಳಿಕೆಗಳ ಬಳಿಕ ಯುಎಇ ಅಧಿಕಾರಿ ದೇಶ ತೊರೆದಿರುವರು. ರಾಜತಾಂತ್ರಿಕ ವಿಷಯಗಳಲ್ಲಿ ಸಂಪೂರ್ಣ ತಿಳುವಳಿಕೆ ಇರುವ ಈ ಅಧಿಕಾರಿಯನ್ನು ಪ್ರಶ್ನಿಸಲು ಎನ್ ಐ ಎ ತಂಡ ಯೋಜಿಸಿತ್ತು. ಈ ಬಗ್ಗೆ ಕೇಂದ್ರ ಸರ್ಕಾರವು ಎನ್ ಐ ಎ ಗೆ ಸೂಚನೆ ನೀಡಿತ್ತು. ಈ ಮಧ್ಯೆ ಯು ಎ ಇ ರಾಜತಾಂತ್ರಿಕ ವ್ಯಕ್ತಿ ತೆರಳಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.
ಜುಲೈ 5 ರಂದು ಕಸ್ಟಮ್ಸ್ ವಶಪಡಿಸಿಕೊಂಡ ಚಿನ್ನದ ಸರಕು ಯುಎಇಯ ಇದೇ ರಾಜತಾಂತ್ರಿಕ ವ್ಯಕ್ತಿಯ ಹೆಸರಲ್ಲಿ ತಿರುವನಂತಪುರಕ್ಕೆ ಬಂದಿತ್ತು. ರಾಜತಾಂತ್ರಿಕ ವ್ಯವಸ್ಥೆಯಡಿ ಬಂದಿದ್ದ ಚೀಲವನ್ನು ತಪಾಸಣೆಗಾಗಿ ವಶಕ್ಕೆ ತೆಗೆದುಕೊಂಡಾಗ, ಚೀಲವನ್ನು ತೆರೆಯದಂತೆ ಇದೇ ರಾಜತಾಂತ್ರಿಕ ವ್ಯಕ್ತಿಯ ಕಡೆಯಿಂದ ಸಾಕಷ್ಟು ಒತ್ತಡವಿತ್ತು ಎಂದು ಎನ್ ಐ ಎ ತಿಳಿಸಿದೆ. ಅವರು ತಮ್ಮ ಅಧಿಕೃತ ರಾಜತಾಂತ್ರಿಕ ಸಮವಸ್ತ್ರದಲ್ಲಿ ಕಸ್ಟಮ್ಸ್ ಕಚೇರಿಗೆ ತೆರಳಿ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಲು ಯತ್ನಿಸಿರುವುದಾಗಿ ತಿಳಿದುಬಂದಿದೆ.
ಈ ಹಿಂದೆ ಕೇಂದ್ರ ಸರ್ಕಾರವು ಯುಎಇ ರಾಯಭಾರ ಕಚೇರಿಯಲ್ಲಿ ಇದೇ ಅಧಿಕಾರಿಯ ಜೊತೆ ಸಭೆ ನಡೆಸಲು ವ್ಯವಸ್ಥೆ ಮಾಡುವಂತೆ ಕೇಳಿಕೊಂಡಿತ್ತು. ಇದರ ಬೆನ್ನಲ್ಲೇ ರಶೀದ್ ಖಮಿಸ್ ಅಲ್ ಅಶ್ಮಿಯಾ ಯುಎಇಗೆ ಮರಳಿರುವರು. ಯುಎಇ ಸರ್ಕಾರವು ಭಾರತ ಸರ್ಕಾರದ ಅನುಮತಿಯೊಂದಿಗೆ ಈ ಅಧಿಕಾರಿಯನ್ನು ಮರಳಿ ಕರೆಸಿಕೊಂಡಿರಬಹುದೆಂದೂ ಹೇಳಲಾಗುತ್ತಿದೆ.


