ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿವೆ. ಸಂಪರ್ಕದಿಂದ ಹರಡುವ ಸೋಂಕುಗಳಿಂದ ಆತಂಕ ಉಲ್ಬಣಗೊಳ್ಳುತ್ತಿದೆ. ತಿರುವನಂತಪುರ ಮತ್ತು ಎರ್ನಾಕುಳಂ ಜಿಲ್ಲೆಗಳಲ್ಲಿ ಅತಿ ಹೆಚ್ಚು ರೋಗಮೂಲದ ಪತ್ತೆಯಾಗದ ಪ್ರಕರಣಗಳು ಕಂಡುಬಂದಿವೆ. ಸೋಂಕಿತರ ಸಂಖ್ಯೆಯು ಹೆಚ್ಚಾದಂತೆ, ಕ್ವಾರಂಟೈನ್ ನಲ್ಲಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಒಟ್ಟು ರಾಜ್ಯಾದ್ಯಂತ ಆತಂಕಕಾರಿ ಪರಿಸ್ಥಿತಿ ಮುಂದುವರೆದಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ಪಷ್ಟಪಡಿಸಿರುವರು. ಸೋಮವಾರದ ಕೋವಿಡ್ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ನಿನ್ನೆಯ ಕೋವಿಡ್ ಮಾಹಿತಿ:
ರಾಜ್ಯದಲ್ಲಿ ಸೋಮವಾರ 449 ಸೋಂಕಿತರನ್ನು ಪತ್ತೆಹಚ್ಚಲಾಗಿದೆ. ಗುಣಪಡಿಸಿದ 162 ರೋಗಿಗಳಲ್ಲಿ 144 ಮಂದಿ ಸಂಪರ್ಕದ ಮೂಲಕ ಸೋಂಕಿಗೆ ಒಳಗಾದವರಾಗಿದ್ದಾರೆ. ಕೋವಿಡ್ ಪ್ರಕರಣಗಳ ಹೆಚ್ಚಳದೊಂದಿಗೆ, ರಾಜ್ಯದಲ್ಲಿ ಹಾಟ್‍ಸ್ಪಾಟ್‍ಗಳ ಸಂಖ್ಯೆಯು ಹೆಚ್ಚಳಗೊಂಡಿದೆ. ಪ್ರಸ್ತುತ 223 ಹಾಟ್‍ಸ್ಪಾಟ್‍ಗಳಿವೆ. ಸಂಪರ್ಕ ಪ್ರಕರಣಗಳ ಹೆಚ್ಚಳ ಮತ್ತು ಐದು ಆರೋಗ್ಯ ಕಾರ್ಯಕರ್ತರಲ್ಲಿ ಕೋವಿಡ್ ಸೋಂಕು ದೃಢಗೊಂಡಿರುವುದರಿಂದ ಕಳವಳಗಳು ಹೆಚ್ಚಾಗುತ್ತಿವೆ.
ಕ್ವಾರಂಟೈನ್ ಮಾಹಿತಿ:
ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕ್ವಾರಂಟೈನ್ ನಲ್ಲಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ನಾಲ್ಕನೇ ದಿನ, ಕೋವಿಡ್ ರಾಜ್ಯದಲ್ಲಿ 400 ಕ್ಕೂ ಹೆಚ್ಚು ದೃಢಪಟ್ಟಿದ್ದು ಇದರೊಂದಿಗೆ, ಕ್ವಾರಂಟೈನ್ ನಲ್ಲಿರುವವರ ಸಂಖ್ಯೆ ವಿವಿಧ ಜಿಲ್ಲೆಗಳಳ್ಲಾಗಿ 1,80,594 ಬಾಧಿತರಿದ್ದಾರೆ. ಆಸ್ಪತ್ರೆಗಳಲ್ಲಿ 4376 ಜನರು ನಿರೀಕ್ಷಣೆಯಲ್ಲಿದ್ದಾರೆ. ನಿನ್ನೆಯೊಂದೇ ದಿನ 713 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 24 ಗಂಟೆಗಳ ಒಳಗೆ 12230 ಮಾದರಿಗಳನ್ನು ಪರೀಕ್ಷಿಸಲಾಯಿತು. ಈವರೆಗೆ 2,44,388 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ 5407 ಮಾದರಿಗಳನ್ನು ಇನ್ನೂ ಪರೀಕ್ಷಿಸಬೇಕಿದೆ ಎಂದು ಸಿಎಂ ಹೇಳಿರುವರು.
ರಾಜ್ಯಕ್ಕೆ ಹೊರಗಿಂದ ಬಂದವರ ವಿವರಗಳು:
ನಿನ್ನೆ ಕೋವಿಡ್ ದೃಢಪಟ್ಟವರಲ್ಲಿ 140 ಮಂದಿ ವಿದೇಶದಿಂದ ಬಂದವರು. ಇತರ ರಾಜ್ಯಗಳ ಅರವತ್ತನಾಲ್ಕು ಜನರೂ ಕೋವಿಡ್ ಸೋಂಕಿಗೊಳಗಾಗಿರುವುದು ದೃಢಪಟ್ಟಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕೇರಳದ ಕೋವಿಡ್ ಪರೀಕ್ಷಾ ಸಕಾರಾತ್ಮಕ ದರ ವಿಶ್ವ ಮಟ್ಟದಲ್ಲೇ ಅತ್ಯುತ್ತಮವಾಗಿದೆ. ಪ್ರಸ್ತುತ ಇದು ಶೇಕಡಾ 2.27 ಆಗಿದೆ. ಕೆಲವು ದಿನಗಳ ಹಿಂದೆ, ಇದು ಶೇಕಡಾ 2 ಕ್ಕಿಂತ ಕಡಿಮೆಯಿತ್ತು. ಆದಾಗ್ಯೂ, ಭಾರತದಲ್ಲಿ ಸರಾಸರಿ ಟೆಸ್ಟ್ ಸಕಾರಾತ್ಮಕ ದರವು ಶೇಕಡಾ 7.46 ರಷ್ಟಿದೆ ಎಂದು ಕೋವಿಡ್ ಪರಿಶೀಲನಾ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಹೇಳಿದರು.
ರಾಜ್ಯದಲ್ಲಿ ಎರಡು ಕೋವಿಡ್ ಸಾವುಗಳು:
ರಾಜ್ಯದಲ್ಲಿ ನಿನ್ನೆ ಎರಡು ಕೋವಿಡ್ ಸಾವುಗಳು ವರದಿಯಾಗಿವೆ. ಕೊಲ್ಲಂ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಸಾವು ಉಂಟಾಗಿದೆ. ಮೃತರನ್ನು ಕೊಲ್ಲಂ ಜಿಲ್ಲೆಯ ತ್ಯಾಗರಾಜನ್ (74) ಮತ್ತು ಕಣ್ಣೂರು ಜಿಲ್ಲೆಯ ಆಯಿಷಾ (64) ಎಂದು ಗುರುತಿಸಲಾಗಿದೆ. ಆಯಿಷಾ ಅವರು ಕಣ್ಣೂರು ಜಿಲ್ಲೆಯ ಗ್ರಾ.ಪಂ. ವೊಂದರ ಮಾಜಿ ಅಧ್ಯಕ್ಷೆಯೂ ಆಗಿದ್ದಾರೆ. ಆಯಿಷಾ ಕೋವಿಡ್ ನಿರೀಕ್ಷಣೆಯಲ್ಲಿರುವಂತೆ ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಹೆಚ್ಚಿನ ರೋಗಿಗಳು ಆಲಪ್ಪುಳ ಜಿಲ್ಲೆಯವರು:
ಸೋಮವಾರ ಕೋವಿಡ್ ಸೋಂಕು ದೃಢಪಟ್ಟವರಲ್ಲಿ 449 ಮಂದಿಗಳಲ್ಲಿ ಆಲಪ್ಪುಳ ಜಿಲ್ಲೆಯಲ್ಲಿ 119 ಪ್ರಕರಣಗಳು ವರದಿಯಾಗಿವೆ. ತಿರುವನಂತಪುರ 63, ಮಲಪ್ಪುರಂ 47, ಪತ್ತನಂತಿಟ್ಟು 47, ಕಣ್ಣೂರು 44, ಕೊಲ್ಲಂ 33, ಪಾಲಕ್ಕಾಡ್ 19, ಕೋಝಿಕ್ಕೋಡು 16, ಎರ್ನಾಕುಳಂ 15, ವಯನಾಡ್ 14, ಕೊಟ್ಟಾಯಂ 10, ತ್ರಿಶೂರ್ 9, ಕಾಸರಗೋಡು 9, ಇಡುಕ್ಕಿ 4 ಪ್ರಕರಣಗಳು ಜಿಲ್ಲಾವಾರು ಮಟ್ಟದಲ್ಲಿ ದೃಢಪಟ್ಟವುಗಳಾಗಿವೆ. ನಿನ್ನೆ ರಾಜ್ಯದಲ್ಲಿ 162 ಸೋಂಕಿತರು ಗುಣಮುಖರಾಗಿರುವರು. ಮಲಪ್ಪುರಂ ಜಿಲ್ಲೆಯಲ್ಲಿ 32 ಅತಿ ಹೆಚ್ಚು ಮಂದಿ ಗುಣಮುಖರಾದರು. ತಿರುವನಂತಪುರಂ 3, ಕೊಲ್ಲಂ 10, ಪಥನಮತ್ತಟ್ಟ 2, ಆಲಪ್ಪುಳ 7, ಕೊಟ್ಟಾಯಂ 12, ಎರ್ನಾಕುಲಂ 12, ತ್ರಿಶೂರ್ 14, ಪಾಲಕ್ಕಾಡ್ 25, ಕೋಝಿಕ್ಕೋಡ್ 8, ವಯನಾಡ್ 16, ಕಣ್ಣೂರು 20 ಮತ್ತು ಕಾಸರಗೋಡು 5 ಮಂದಿ ರೋಗದಿಂದ ಚೇತರಿಸಿಕೊಂಡರು.





