ತಿರುವನಂತಪುರ: ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವಚಿನ್ನ ಸಾಗಾಣಿಕೆ ಪ್ರಕರಣದ ನಾಟಕೀಯ ಬೆಳವಣಿಗೆಯೊಂದರಲ್ಲಿ ರಾಜ್ಯ ಸರ್ಕಾರವು ನಿಕಟಪೂರ್ವ ರಾಜ್ಯ ಕಾರ್ಯದರ್ಶ ಎಂ.ಶಿವಶಂಕರ್ ಅವರನ್ನು ತನಿಖಾ ಕಾರಣಗಳಿಗೆ ಸಸ್ಪೆಂಡ್ ಗೊಳಿಸಿದೆ.
ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದ ಪ್ರಧಾನ ಆರೋಪಿಯೊಡನೆ ನಿಕಟ ಸಂಬಂಧ ಹೊಂದಿರುವುದು ಖಾತ್ರಿಯಾದ ಬೆನ್ನಿಗೆ ಮುಂದಿನ ನಡೆಗಾಗಿ ಗುರುವಾರ ಸಂಜೆ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಹಣಕಾಸು ವಿಭಾಗದ ಸಹಾಯಕ ಕಾರ್ಯದರ್ಶಿಗಳೊಂದಿಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಡೆಸಿದ ಸುಧೀರ್ಘ ಚರ್ಚೆಯ ತರುವಾಯ ಶಿವಶಂಕರ್ ಅವರನ್ನು ತಕ್ಷಣದಿಂದ ಸಸ್ಪೆಂಡ್ ಮಾಡುವ ನಿರ್ಧಾರಕ್ಕೆ ಬರಲಾಯಿತೆಂದು ಸಿ.ಎಂ. ತಿಳಿಸಿರುವರು. ಶಿವಶಂಕರ್ ಅವರ ಕರ್ತವ್ಯ ಲೋಕ, ದುರುಪಯೋಗದ ಬಗೆಗೆ ಎದ್ದಿರುವ ಗುಲ್ಲಿನ ತನಿಖೆಗೆ ಇಂತಹ ಕ್ರಮ ಅನಿವಾರ್ಯವೆಂದು ಮುಖ್ಯಮಂತ್ರಿ ಮಾಧ್ಯಮಗಳಿಗೆ ತಿಳಿಸಿರುವರು.ಜೊತೆಗೆ ಇಲಾಖಾ ಮಟ್ಟದ ತನಿಖೆ ಈ ಮೂಲಕ ನಡೆಯಲಿದೆ ಎಂದೂ ಪಿಣರಾಯಿ ವಿಜಯನ್ ತಿಳಿಸಿರುವರು.
ರಾಜ್ಯ ಐಟಿ ವಿಭಾಗದ ವಿವಿಧ ಹುದ್ದೆಗಳಲ್ಲಿ ಈಗಿರುವ ನೇಮಕಾತಿಗಳ ನೈಜತೆಗಳ ಬಗ್ಗೆ ತನಿಖೆ ನಡೆಸಲಾಗುವುದು. ಸ್ವಪ್ನಾ ಸುರೇಶ್ ಳ ನಕಲಿ ಸರ್ಟಿಫಿಕೇಟ್ ಬಗ್ಗೆ ಕೇಳಿಬಂದಿರುವ ಆರೋಪಗಳ ಸತ್ಯಾಸತ್ಯೆಗಳ ಬಯಲುಗೊಳಿಸಲೂ ಸರ್ಕಾರ ಪ್ರತ್ಯೇಕ ತನಿಖೆ ನಡೆಸಲಿದೆ ಎಂದು ಪಿಣರಾಯಿ ವಿಜಯನ್ ತಿಳಿಸಿರುವರು. ರಾಜ್ಯ ಪೋಲೀಸರು ಈ ನಿಟ್ಟಿನಲ್ಲಿ ತನಿಖೆ ನಡೆಸುವುದು ನಿಷ್ಪ್ರಯೋಜಕ. ಎನ್ ಐ ಎ ಸಮಗ್ರ ತನಿಖೆ ಈಗಾಗಲೇ ನಡೆಸುತ್ತಿದೆ. ಸಿಬಿಐ ತನಿಖೆ ಈ ನಿಟ್ಟಿನಲ್ಲಿ ಅನಗತ್ಯ ಎಂದೂ ಮುಖ್ಯಮಂತ್ರಿ ವಿವರಿಸಿದರು.


