ತಿರುವನಂತಪುರ: ಕೋವಿಡ್ ಮಹಾಮಾರಿಯ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕೆಂಬ ಆದೇಶ ಆರಂಭದ ದಿನಗಳಿಂದಲೂ ಪ್ರಚಾರದಲ್ಲಿದ್ದರೂ ದೊಡ್ಡ ಮಟ್ಟಿನ ಪರಿಣಾಮಗಳನ್ನು ಜನಸಾಮಾನ್ಯರೆಡೆಯಲ್ಲಿ ಇದು ಬೀರದಿರುವುದು ಕಂಡುಬಂದಿದೆ. ಆದರೆ ತಿರುಮನಂತಪುರದ ರಾಜಾಜಿ ನಗರದಲ್ಲಿ ಒಬ್ಬ ವ್ಯಕ್ತಿಯಲ್ಲೂ ಈವರೆಗೆ ಕೋವಿಡ್ ರೋಗ ಪತ್ತೆಯಾಗಿಲ್ಲ ಮತ್ತು ಯಾರೂ ಯಾವುದೇ ರೋಗಲಕ್ಷಣಗಳನ್ನು ಸಹ ಇದುವರೆಗೆ ತೋರಿಸದಿರುವುದು ಚಕಿತಗೊಳಿಸುತ್ತಿದೆ. ಮಾಸ್ಕ್ ಗಳ ಕಡ್ಡಾಯ ಧಾರಣೆ, ಸಾಮಾಜಿಕ ಅಂತರಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಈವರೆಗೆ ಕೋವಿಡ್ ಗೆ ಇಲ್ಲಿ ನೋ ಎಂಟ್ರಿ ವಲಯವಾಗಿ ರೂಪಿಸಿರುವುದು ಸೋಂಕು ಬಾರದಿರಲು ಮಹತ್ವದ ಹೆಜ್ಜೆಯಾಗಿ ಪರಿಣಾಮಕಾರಿಯಾಯಿತು.
5 ಸಾವಿರ ಜನರು ವಾಸಿಸುವ ದೊಡ್ಡ ವಲಯವಿದು:
11 ಎಕ್ರೆಗಳಷ್ಟು ವಿಸ್ತಾರವಾಗಿ ಹರಡಿರುವ ರಾಜಾಜಿ ನಗರ ಕಾಲೊನಿಯಲ್ಲಿ 1500ಕ್ಕಿಂತಲೂ ಹೆಚ್ಚು ಕುಟುಂಬಗಳು ನಿಬಿಡತೆಯಿಂದ ಬದುಕು ಸಾಗಿಸುತ್ತಿದ್ದಾರೆ. ಬಡವ-ಬಲ್ಲಿದನೆನ್ನದೆ ಪ್ರತಿ ಕುಟುಂಬದಲ್ಲೂ ಕನಿಷ್ಠ ನಾಲ್ವರಂತೆ ಸುಮಾರು 5 ಸಾವಿರ ಜನರಿರುವ ಕಾಲನಿ ಇದಾಗಿದೆ. ಹೆಚ್ಚಿನ ಜನರೂ ಬಡತನ ರೇಖೆಗಿಂತ ಕೆಳಗಿನವರು. ಮಾರುಕಟ್ಟೆಗಳಲ್ಲಿ ಪುಟ್ಟ ವ್ಯಾಪಾರ, ಕೂಲಿ ನಡೆಸಿ ಬದುಕು ಕಟ್ಟಿಕೊಳ್ಳುತ್ತಿರುವ ಇಲ್ಲಿನ ನಿವಾಸಿಗಳಲ್ಲಿ ಅನ್ಯ ಜಿಲ್ಲೆಗಳಿಗೂ ತೆರಳಿ ವಿವಿಧ ವಲಯಗಲಲ್ಲಿ ವೃತ್ತಿಗೈಯುವವರೂ ಇದ್ದಾರೆ.
ಒಳಗೆ ಪ್ರವೇಶವಿಲ್ಲ!:
ನಗರದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ, ಕಾಲನಿ ನಿವಾಸಿಗಳು ತಮಗೂ ಈ ಕಾಯಿಲೆ ಬರುವ ಅಪಾಯವಿದೆ ಎಂದು ಅರಿತುಕೊಂಡರು. ಇದರೊಂದಿಗೆ ಯುವಕರ ಗುಂಪು ನಿಯಂತ್ರಣ ಮತ್ತು ಜಾಗೃತಿ ಚಟುವಟಿಕೆಗಳಿಗೆ ಮುಂದಾಯಿತು. ಇದರಂಗವಾಗಿ ಮೊದಲನೆಯದಾಗಿ ಕಾಲನಿಯೊಳಗೆ ಹೊರಗಿನವರಿಗೆ ಪ್ರವೇಶವನ್ನು ನಿರಾಕರಿಸಲಾಯಿತು. ಈ ಬಗ್ಗೆ ಸೂಚನೆ ನೀಡುವ ನಿಷೇಧಿಸಿರುವ ನಾಮಫಲಕಗಳನ್ನು ಎಲ್ಲಾ ಗೇಟ್‍ಗಳಲ್ಲಿ ಇರಿಸಲಾಯಿತು. ಹೊರಗೆ ಕೆಲಸಕ್ಕೆ ಹೋಗುವ ಜನರನ್ನು ಹುಡುಕಿ ಕೋವಿಡ್ ತಡೆಗಟ್ಟುವ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ಮಾಸ್ಕ್ ಧರಿಸುವುದು, ಆಗಾಗ್ಗೆ ಕೈ ತೊಳೆಯುವ ಅಗತ್ಯವನ್ನು ಅವರು ಮನವರಿಕೆ ಮಾಡಿದರು.
'ಬ್ರೇಕ್ ದಿ ಚೈನ್" ಇಲ್ಲಿಯ ಮೂಲಮಂತ್ರ:
ಕೋವಿಡ್ ತಡೆಗಟ್ಟುವಿಕೆಯ ಪ್ರಧಾನ ಘೋಷಣೆಯಾದ ಬ್ರೇಕ್ ದಿ ಚೈನ್ ಯೋಜನೆಯನ್ನು ಕಾರ್ಯಗತಗೊಳಿಸಲು ಕಾಲನಿಯ ಮುಖ್ಯ ದ್ವಾರದ ಬಳಿ ನೀರು ಮತ್ತು ಕೈ ತೊಳೆಯುವ ವ್ಯವಸ್ಥೆ ಏರ್ಪಡಿಸಲಾಯಿತು. ಇದರೊಂದಿಗೆ, ಮೊದಲ ಹಂತದ ಚಟುವಟಿಕೆಗಳು ಪೂರ್ಣಗೊಂಡವು. ಆದರೆ ಯುವಕರು ಸುಮ್ಮನೆ ಇರಲಿಲ್ಲ. ಕೌನ್ಸಿಲರ್ ಜಯಲಕ್ಷ್ಮಿ ಅವರ ನೇತೃತ್ವದಲ್ಲಿ ನಗರ ಪಾಲಿಕೆಯಿಂದ ಬ್ಲೀಚಿಂಗ್ ಪೌಡರ್ ಸಂಗ್ರಹಿಸಿ ಸೋಂಕು ನಿವಾರಣೆಗಾಗಿ ಎಲ್ಲಾ ಮನೆಗಳಿಗೆ ಉಚಿತವಾಗಿ ವಿರಿಸಲಾಯಿತು. ಕ್ರಮಾಗತ ಜಾಗೃತಿಯನ್ನೂ ನಡೆಸಲಾಯಿತು.
ಗರಿಷ್ಠ 5 ಜನರು:
ಕಾಲನಿಯಲ್ಲಿ ನಡೆಯುವ ಯಾವುದೇ ಸಮಾರಂಭದಲ್ಲಿ ಆರೋಗ್ಯ ಇಲಾಖೆ ಮತ್ತು ಕೌನ್ಸಿಲರ್ ಅವರನ್ನು ಸಂಪರ್ಕಿಸಲಾಗುತ್ತದೆ. ಮತ್ತು ಗರಿಷ್ಠ 5 ಮಂದಿ ಮಾತ್ರ ಭಾಗವಹಿಸುವ ವ್ಯವಸ್ಥೆ ಕಡ್ಡಾಯಗೊಳಿಸಲಾಗಿದೆ. ಕಾಲನಿ ನಿವಾಸಿಗಳ ವೆಚ್ಚದಲ್ಲಿ ಮುಖ್ಯ ದ್ವಾರಗಳಲ್ಲಿ ಬ್ರೇಕ್ ಚೈನ್ ಕಿಯೋಸ್ಕ್ಗಳನ್ನು ಸಹ ಸ್ಥಾಪಿಸಲಾಯಿತು. ಲಾಕ್ ಡೌನ್ ನಿಂದ ಕಾಲನಿ ನಿವಾಸಿಗರು ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಮತ್ತು ವೃದ್ಧರಿಗೆ ಸಹಾಯಕ್ಕಾಗಿ ಯುವಕರ ತಂಡ ಕಾರ್ಯಪ್ರವೃತ್ತರಾಗಿದ್ದರು. ಯುವ ಸಂಘಟನೆಯ ನೇತೃತ್ವದಲ್ಲಿ ಮನೆಗಳಿಗೆ ಔಷಧಿ ಮತ್ತು ಆಹಾರವನ್ನು ತಲುಪಿಸಲಾಗಿದೆ.





