ಬದಿಯಡ್ಕ:ಕೇರಳ ಪ್ರದೇಶ ಸ್ಕೂಲ್ ಟೀಚರ್ಸ್ ಅಸೋಸಿಯೇಷನ್ ಪ್ರಾಂತೀಯ ಸಮಿತಿ ನೇತೃತ್ವದಲ್ಲಿ ಕೋವಿದ್ 19 ಸಂಕಷ್ಟ ಸಂದರ್ಭದಲ್ಲಿ ಬಡ ಶಾಲಾ ವಿದ್ಯಾರ್ಥಿಗಳಿಗೆ ಸುಮಾರು 3 ಕೋಟಿಯಷ್ಟು ಮೊತ್ತದ ಕಲಿಕೋಪಕರಣ ಕಿಟ್ ವಿತರಣೆ ಯೋಜನೆಯ ಭಾಗವಾಗಿ ಕುಂಬಳೆ ಉಪಜಿಲ್ಲಾ ಮಟ್ಟದ ಕಲಿಕೋಪಕರಣ ಕಿಟ್ ವಿತರಣೆ ಕಾರ್ಯಕ್ರಮ ನವಜೀವನ ಹೈಯರ್ ಸೆಕೆಂಡರಿ ಶಾಲೆ ಪೆರಡಾಲದಲ್ಲಿ ಇತ್ತೀಚೆಗೆ ಜರಗಿತು.
ಕಾರ್ಯಕ್ರಮವನ್ನು ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ.ಎಸ್. ದೀಪ ಬೆಳಗಿಸಿ ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ ಕೆ.ಪಿ.ಎಸ್.ಟಿ.ಎ. ಸಂಘಟನೆಯು ಕೇರಳದ ಅತಿದೊಡ್ಡ ಸಮಾಜಮುಖಿ ಸಂಘಟನೆಯಾಗಿದೆ. ಸಂಘಟನೆ ಜನಪರ ಸಂಘಟನೆಯಾಗಿ ಹಲವು ಹೋರಾಟಗಳ ಮೂಲಕ ಅಧ್ಯಾಪಕರ ಬೇಡಿಕೆಯನ್ನು ಸಂರಕ್ಷಿಸಿದ ಮಹತ್ವಿಕೆ ಹೊಂದಿದೆ ಎಂದು ತಿಳಿಸಿದರು.
ಕಲಿಕೋಪಕರಣ ಕಿಟ್ ವಿತರಣೆಯ ಉದ್ಘಾಟನೆಯನ್ನು ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಯತೀಶ್ ಕುಮಾರ್ ರೈ ಉದ್ಘಾಟಿಸಿದರು. ಕುಂಬಳೆ ಉಪಜಿಲ್ಲಾ ಅಧ್ಯಕ್ಷೆ ಜಲಜಾಕ್ಷಿ ಟೀಚರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೆ.ಪಿ.ಎಸ್.ಟಿ.ಎ ನೇತಾರರಾದ ಪ್ರಶಾಂತ್, ಕಾನತ್ತೂರ್ ಗೋಪಾಲಕೃಷ್ಣನ್, ರಾಧಾಕೃಷ್ಣ, ಯೂಸುಫ್ ಮಾಸ್ತರ್, ಪ್ರದೀಪ್ ಮಾನ್ಯ, ನಿವೃತ್ತ ಅಧ್ಯಾಪಕ ತಂಬಾನ್ ಮಾಸ್ತರ್ ಶುಭಾಶಂಸನೆಗೈದರು. ಕುಂಬಳೆ ಉಪಜಿಲ್ಲಾ ಕೋಶಾಧಿಕಾರಿ ನಿರಂಜನ್ ರೈ ಪೆರಡಾಲ ಸ್ವಾಗತಿಸಿ, ಉಪಾಧ್ಯಕ್ಷ ರಾಮಕೃಷ್ಣ ವಂದಿಸಿದರು.


