ತಿರುವನಂತಪುರ: ಕೋವಿಡ್ ನಿಯಮ-ನಿಬಂಧನೆಗಳಿಗೆ ಅನುಗುಣವಾಗಿ ರಾಜ್ಯದ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಯಾವುದೇ ಅಡ್ಡಿಯಿಲ್ಲ ಎಂದು ಆರೋಗ್ಯ ಇಲಾಖೆ ನಿರ್ದೇಶಕರು ಹೇಳಿದ್ದಾರೆ. ಆರೋಗ್ಯ ಇಲಾಖೆಯ ನಿರ್ದೇಶಕರು ಈ ಬಗ್ಗೆ ಸಂಪೂರ್ಣ ಸಹಕಾರ ವ್ಯಕ್ತಪಡಿಸಿರುವುದಾಗಿ ರಾಜ್ಯ ಚುನಾವಣಾ ಆಯುಕ್ತ ವಿ.ಭಾಸ್ಕರನ್ ಹೇಳಿದ್ದಾರೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆಸುವ ಕುರಿತು ಆಯೋಗವು ಆರೋಗ್ಯ ಇಲಾಖೆಯ ತಜ್ಞರ ಸಲಹೆ ಕೇಳಿತ್ತು.
ಚುನಾವಣೆಯ ವಿವಿಧ ಚಟುವಟಿಕೆಗಳನ್ನು ನಡೆಸಲು ಕೋವಿಡ್ ನಿಬಂಧನೆಗಳು ಆರೋಗ್ಯ ಇಲಾಖೆಯಿಂದ ಲಭ್ಯವಾಗಲಿದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳಿಗೆ ಕೋವಿಡ್ ಸೋಂಕಿಗೊಳಗಾಗದಂತೆ ಮತದಾರರನ್ನು ಜಾಗೃತಗೊಳಿಸುವ ಕ್ರಮಗಳ ಕುರಿತು ಆಯೋಗವು ಆರೋಗ್ಯ ಇಲಾಖೆ ಸಹಾಯ ಪಡೆಯಲಿದೆ. ಮತ್ತು ಅಧಿಕಾರಿಗಳು, ರಾಜಕೀಯ ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರಿಗೆ ಈ ನಿಟ್ಟಿನ ತರಬೇತಿ ನೀಡಲು ಕ್ರಮ ತೆಗೆದುಕೊಳ್ಳಲಿದೆ.
ಚುನಾವಣೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ತರಬೇತಿಗಳು ಕೋವಿಡ್ ಮಾನದಂಡಗಳನ್ನು ಅನುಸರಿಸಿ ಆಗಸ್ಟ್ ಕೊನೆ ವಾರದಲ್ಲಿ ಪ್ರಾರಂಭವಾಗಲಿದೆ. ಮಾಸ್ಟರ್ ತರಬೇತುದಾರರಿಗೆ ಆನ್‍ಲೈನ್ ತರಬೇತಿ ಇರಲಿದೆ. ಇತರ ಅಧಿಕಾರಿಗಳಿಗೆ 30 ಜನರ ಬ್ಯಾಚ್‍ಗಳಲ್ಲಿ ನೇರವಾಗಿ ಬ್ಲಾಕ್ ಮಟ್ಟದಲ್ಲಿ ತರಬೇತಿ ನೀಡಲಾಗುವುದು. ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು.
ಈ ವರ್ಷ ರಾಜ್ಯ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗಳು ಮಟ್ಟಣ್ಣೂರು ಪುರಸಭೆ ಹೊರತುಪಡಿಸಿ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ನಡೆಯಲಿದೆ. ಹಾಲಿ ಸ್ಥಳೀಯ ಸಂಸ್ಥೆಗಳ ಅಧಿಕಾರಾವಧಿ ನವೆಂಬರ್ 11 ಕ್ಕೆ ಕೊನೆಗೊಳ್ಳಲಿದೆ. ಸಮಯಕ್ಕೆ ಸರಿಯಾಗಿ ಚುನಾವಣೆ ನಡೆಸುವುದು ತನ್ನ ಸಾಂವಿಧಾನಿಕ ಬಾಧ್ಯತೆಯಾಗಿರುವುದರಿಂದ ಚುನಾವಣಾ ಪ್ರಕ್ರಿಯೆಯೊಂದಿಗೆ ಮುಂದುವರಿಯಲಾಗುವುದೆಂದು ಆಯೋಗ ಹೇಳಿದೆ. ಎಲ್ಲಾ ಅಂಶಗಳನ್ನು ಪರಿಶೀಲಿಸಿದ ನಂತರ ಚುನಾವಣಾ ದಿನಾಂಕವನ್ನು ನಿರ್ಧರಿಸಲಾಗುವುದು ಎಂದು ಆಯೋಗ ತಿಳಿಸಿದೆ.


