ಮಂಗಳೂರು: ಇಲ್ಲಿನ ಬಜ್ಪೆಯಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬುಧವಾರ ಹುಸಿ ಬಾಂಬ್ ಕರೆ ಬಂದ ಹಿನ್ನೆಲೆಯಲ್ಲಿ ತೀವ್ರ ತಪಾಸಣೆ ನಡೆಸಲಾಗಿದೆ.
ಯಾರೋ ಕಿಡಿಗೇಡಿಗಳು ವಿಮಾನ ನಿಲ್ದಾಣಕ್ಕೆ ಕರೆ ಮಾಡಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದಾರೆ. ಸಿಐಎಸ್‌ಎಫ್ ಸಹಿತ ಪೊಲೀಸರು ವಿಮಾನ ನಿಲ್ದಾಣ ಹಾಗು ಪರಿಸರದಲ್ಲಿ ತೀವ್ರ ತಪಾಸಣೆ ನಡೆಸಿದ್ದಾರೆ.
ಮಧ್ಯಾಹ್ನದ ವೇಳೆಗೆ ಟರ್ಮಿನಲ್ ವಿಭಾಗಕ್ಕೆ ಕರೆ ಬಂದಿದ್ದು, ತಪಾಸಣೆ ವೇಳೆ ಯಾವುದೇ ಸೊತ್ತು ಪತ್ತೆಯಾಗಿಲ್ಲ. ಯಾರೋ ಕಿಡಿಗೇಡಿಗಳು ಕರೆ ಮಾಡಿರುವ ಸಾಧ್ಯತೆ ಇದೆ. ಜನವರಿ ತಿಂಗಳಿನಲ್ಲಿ ಸಜೀವ ಬಾಂಬ್ ಪತ್ತೆಯಾದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಹಾಗೂ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ತಪಾಸಣೆ ನಡೆಸಿದ್ದರು. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


