ಕಾಸರಗೋಡು: ಅಂತರ್ ರಾಜ್ಯ ತೆರವಿಗೆ ಸಂಬಂಧಿಸಿ ರಾಜ್ಯ ಹೈಕೋರ್ಟ್ ಗೆ ಕಾಸರಗೋಡು ಜಿಲ್ಲಾ ಬಿಜೆಪಿ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಸಲ್ಲಿಸಿದ್ದ ಅರ್ಜಿಯ ಆಧಾರದಲ್ಲಿ ಇಂದು ಗೇಟ್ ತೆರೆದು ಮುಕ್ತ ಸಂಚಾರಕ್ಕೆ ಆದೇಶ ನೀಡಿದ್ದರೂ ಕಾಸರಗೋಡು ಜಿಲ್ಲಾಧಿಕಾರಿ ಒಂದು ಹೆಜ್ಜೆ ಮುಂದೆ ಎಂಬಂತೆ ಆಂಟಿಜನ್ ಟೆಸ್ಟ್ ಮಾಡಬೇಕೆಂದಿರುವುದು ಹಲವು ಸಂಶಯಗಳಿಗಳಿಗೆ ಎಡೆಮಾಡಿದೆ.
ಅನ್ ಲಾಕ್ 3ರ ಆರಂಭದಲ್ಲಿ ಕೇಂದ್ರ ಸರ್ಕಾರವು ದೇಶಾದ್ಯಂತ ಮುಕ್ತ ಸಂಚಾರಕ್ಕೆ ಅನುಮತಿ ನೀಡಿ, ಮಿಕ್ಕುಳಿದ ನಿರ್ಧಾರಗಳು ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟದ್ದು ಎಂಬ ಅಡ್ಡಗೋಡೆಯ ಮೇಲಿನ ದೀಪದಂತ ನಿರ್ಧಾರದಿಂದ ಕೇರಳ ಸಹಿತ ಕೆಲವು ರಾಜ್ಯಗಳು ಇನ್ನಿಲ್ಲವೆಂಬಂತೆ ಜನರಲ್ಲಿ ಭೀತಿ ಹುಟ್ಟಿಸಲೆತ್ನಿಸಿರುವುದು ಬಯಲಾಗುತ್ತಿದ್ದು ರಾಜಕೀಯ, ಆಡಳಿತಾತ್ಮಕ ಪ್ರತಿಷ್ಠೆಗಳನ್ನು ಮುಂದಿರಿಸಿ ಅಂತರ್ ರಾಜ್ಯ ಗಡಿ ಗಳನ್ನು ತೆರೆಯದಿರುವುದನ್ನು ಈವರೆಗೆ ಕಾಣುತ್ತಿದ್ದೇವೆ. ಈ ಮಧ್ಯೆ ಕೇಂದ್ರವು ಮೊನ್ನೆಯಷ್ಟೇ ಅಂತರ್ ರಾಜ್ಯ ಸಂಚಾರ ನಿರ್ಬಂಧ ಮಾಡಬಾರದೆಂದು ರಾಜ್ಯಕ್ಕೆ ಸೂಚನೆ ನೀಡಿದ್ದಿ ಉಲ್ಲೇಖಾರ್ಹ.
ಇಂದು ರಾಜ್ಯ ಉಚ್ಚ ನ್ಯಾಯಾಲಯ ನೀಡಿದ ತೀರ್ಪು ಸಂಜೆಯಾದರೂ ರಾಜ್ಯಮಟ್ಟದಲ್ಲಿ ಸದ್ದು ಮಾಡದಿರುವುದರ ಹಿಂದೆ ದುರೂಹತೆ ಅಡಗಿದೆಯೆಂದು ಪ್ರಜ್ಞಾವಂತ ನಾಗರಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಂಜೆ ಆಗುತ್ತಿರುವಂತೆ ದೈನಂದಿನ ಕೋವಿಡ್ ಮರಣ ಸಂಖ್ಯೆಯನ್ನು ಒಮ್ಮಿಂದೊಮ್ಮೆಗೆ ಹೆಚ್ಚಿಸಿ(13) ನಿರ್ಬಂಧ ತೆರವು ಜಾರಿಗೊಳಿಸುವಿಕೆಗೆ ಹಿನ್ನಡೆಯಾಗುವಂತೆ ನೋಡಲಾಯಿತೆಂದು ದೂರಲಾಗುತ್ತಿದೆ.
ಇದೀಗ ಗಡಿ ಮುಚ್ಚುಗಡೆ ತೆರವುಗೊಳಿಸಿರುವ ಜಿಲ್ಲಾಧಿಕಾರಿಗಳ ಆದೇಶದ ಹಿಂದೆ ಹಲವು ಪ್ರಶ್ನೆಗಳು ಬಾಕಿ ಉಳಿದಿದೆ. ಆಂಟಿಜನ್ ಪರೀಕ್ಷೆ ಮಾಡಬೇಕೆಂದಿದ್ದರೆ ಅದರ ಬೆಲೆ ನಿಗದಿ ಯಾರು, ಹೇಗೆ ಎಂಬ ಬಗ್ಗೆ ವಿಶದಪಡಿಸಿಲ್ಲ. ಜೊತೆಗೆ ಸಾಮಾನ್ಯ ಅಲರ್ಜಿಕ್ ನಂತಹ ಜನರಿಗೂ ಆಂಟಿಜನ್ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ನೀಡುವ ಸಾಧ್ಯತೆಯಿದೆಯೆಂಬ ತಜ್ಞರ ಅಂಬೋಣದಂತೆ ಬಹುತೇಕವಾಗಿ ಈ ಆದೇಶ ಪ್ರಯೋಜನಕರವಾಗದೆಂದೇ ಹೇಳಲಾಗಿದೆ.
ಕೋವಿಡ್ ಹೊಸ ಮಾರ್ಗಸೂಚಿ:ಅಂಗಡಿಗಳು, ವ್ಯಾಪಾರ ಸಂಸ್ಥೆಗಳು ರಾತ್ರಿ 9 ಗಂಟೆ ವರೆಗೆ ಕಾರ್ಯಾಚರಿಸಬಹುದು:
ರಾಜ್ಯ ಸರಕಾರದ ನೂತನ ಆದೇಶ ಪ್ರಕಾರ ಬುಧವಾರದಿಂದ(ಆ.26) ಸೆ.2 ವರೆಗೆ ಅಂಗಡಿಗಳು, ವ್ಯಾಪಾರ ಸಂಸ್ಥೆಗಳೂ ರಾತ್ರಿ 9 ಗಂಟೆ ವರೆಗೆ ತೆರೆದು ಚಟುವಟಿಕೆ ನಡೆಸಬಹುದು ಎಂಬ ಆಶ್ಚರ್ಯಕರ ಸೂಚನೆ ನೀಡಿದೆ.
ಓಣಂ ಹಬ್ಬಾಚರಣೆಯ ಹಿನ್ನೆಲೆಯಲ್ಲಿ ಆದೇಶ ನೀಡಿದೆ ಎಂಬ ಮಾತುಗಳು ಕೇಳಿಬಂದಿದ್ದು, ವ್ಯಾಪಾರ ವ್ಯವಹಾರಗಳ ಸುಗಮ ನಿರ್ವಹಣೆಗೆ ಸರ್ಕಾರ ಈ ಮೂಲಕ ಬೆಂಬಲ ನೀಡಿದೆ ಎನ್ನಲಾಗಿದೆ.


