ಮಂಜೇಶ್ವರ: ದೇಶದ ಎಲ್ಲಾ ಗಡಿಗಳನ್ನು ತೆರೆಯುವಂತೆ ಕೇಂದ್ರ ಸರಕಾರ ಸುತ್ತೋಲೆ ಹೊರಡಿಸಿದರೂ ತಲಪಾಡಿ ಗಡಿ ತೆರೆಯದ ಸರಕಾರದ ಜನವಿರೋಧಿ ನಿಲುವನ್ನು ಖಂಡಿಸಿ ತಲಪಾಡಿ ಗಡಿಯಲ್ಲಿ ಪ್ರತಿಭಟನೆ ನಡೆಯಿತು.
ಕೋವಿಡ್ ಮಾನದಂಡಗಳನ್ನು ಪಾಲಿಸಿಕೊಂಡು ಕಾಸರಗೋಡು ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಮಂಜೇಶ್ವರ ಬ್ಲಾಕ್ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಮುಸ್ತಫಾ ಉದ್ಯಾವರ, ಇಲ್ಯಾಸ್ ತೂಮಿನಾಡು, ಮೂಸಾ, ರೌಫ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಹೆದ್ದಾರಿ ತಡೆ ಮಾಡಿ ಗಡಿ ತೆರೆಯುವಂತೆ ಘೋಷಣೆಗಳನ್ನು ಕೂಗಿದರು. ಮಂಜೇಶ್ವರ ಠಾಣಾಧಿಕಾರಿ ರಾಘವನ್ ನೇತೃತ್ವದ ಪೋಲೀಸರು ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರನ್ನು ಬಂಧಿಸಿದರು. ಗಡಿಯನ್ನು ತೆರೆಯದಿದ್ದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರ ನೇತೃತ್ವದಲ್ಲಿ ತಲಪಾಡಿಯಲ್ಲಿ ಮುತ್ತಿಗೆ ಹಾಕಲಾಗುವುದೆಂದು ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಎಚ್ಚರಿಸಿದರು.
ಗಡಿಪ್ರದೇಶದಲ್ಲಿ ತಪಾಸಣೆ ನಡೆಸಬಾರದೆಂಬುದಾಗಿ ಕಠಿಣವಾದ ಬಾಷೆಯಲ್ಲಿ ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ಆದೇಶವನ್ನು ನೀಡಿದ್ದರೂ ಈ ಆದೇಶಕ್ಕೆ ಕಿಂಚತ್ತೂ ಸ್ಪಂಧಿಸದ ರಾಜ್ಯ ಸರಕಾರದ ವಿರುದ್ಧ ವ್ಯಾಪಕ ಜನಾಕ್ರೋಶ ವ್ಯಕ್ತವಾಗುತ್ತಿದೆ. ಕೋವಿಡ್ ಆರಂಭದಲ್ಲಿ ಕರ್ನಾಟಕ ಸರಕಾರ ತಲಪಾಡಿ ಗಡಿಯಲ್ಲಿ ನಿರ್ಬಂಧವನ್ನು ಹೇರಿರುವ ಹಿನ್ನೆಲೆಯಲ್ಲಿ ಹಲವಾರು ಅಮಾಯಕರ ಸಾವುಗಳು ಸಂಭವಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಆದರೆ ಇದೀಗ ಕೇರಳ ಸರಕಾರ ದಿನದಿಂದ ದಿನಕ್ಕೆ ಗಡಿ ತೆರೆಯಲು ಅವಕಾಶವನ್ನು ನೀಡದ ರೀತಿಯಲ್ಲಿ ಮುಂದುವರಿಯುತ್ತಿರುವುದು ಸಾಮಾನ್ಯ ಜನರ ಮಧ್ಯೆ ಭಾರಿ ತಳಮಳವನ್ನು ಸೃಷ್ಟಿಸಿದೆ.

