ಕಾಸರಗೋಡು: ಕನ್ನಡ ಬಾರದ ವಿಜ್ಞಾನ ಶಿಕ್ಷಕನನ್ನು ಕನ್ನಡ ಬರುತ್ತಿಲ್ಲ ಎಂಬ ಕಾರಣಕ್ಕಾಗಿ ಕಾಸರಗೋಡು ಶಿಕ್ಷಣ ಉಪನಿರ್ದೇಶಕರು ನೇಮಕಾತಿಯಿಂದ ಹಿಂದೆ ಕಳಿಸಿದ ಕ್ರಮ ನ್ಯಾಯಯುತ ಅಲ್ಲ ಎಮದು ರಾಜ್ಯ ಮಾನವ ಹಕ್ಕುಗಳ ಆಯೋಗ (ಎಸ್.ಎಚ್.ಆರ್.ಸಿ) ಆಘಾತಕಾರಿ ಹೇಳಿಕೆ ನೀಡಿದೆ.
ರಾಜ್ಯ ಲೋಕಸೇವಾ ಆಯೋಗ(ಪಿಎಸ್‍ಸಿ) ಮೂಲಕ ನೇಮಕಾತಿಗೊಂಡ ಕನ್ನಡ ಬಾರದ ವಿಜ್ಞಾನ ಶಿಕ್ಷಕರನ್ನು ಆ ಕಾರಣಕ್ಕಾಗಿ ಹಿಂದೆ ಕಳಿಸಿರುವುದು ಹಕ್ಕಿನ ಉಲ್ಲಂಘನೆ ಎಂದು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಆಂಥೋನಿ ಡೊಮಿನಿಕ್ ತಿಳಿಸಿದ್ದು ಎರಡು ತಿಂಗಳೊಳಗೆ ಶಿಕ್ಷಕರನ್ನು ನೇಮಿಸುವಂತೆ ಕಾಸರಗೋಡು ಶಿಕ್ಷಣ ಉಪನಿರ್ದೇಶಕರಿಗೆ ಆದೇಶಿಸಿರುವರು.
ತಿರುವನಂತಪುರದ ಆಲಂಕೋಡ್ ಮೂಲದ ಎಸ್ ಮೊಹಮ್ಮದ್ ಶಿಜಿರ್ ಅವರು ನೀಡಿದ ದೂರಿನ ಮೇರೆಗೆ ಈ ಆದೇಶ ಹೊರಡಿಸಲಾಗಿದೆ. ಅವರನ್ನು ಮಂಜೇಶ್ವರ ತಾಲೂಕು ವ್ಯಾಪ್ತಿಯ ಮೂಡಂಬೈಲು ಸರ್ಕಾರಿ ಶಾಲೆಗೆ ವರ್ಗಾಯಿಸಲಾಗಿತ್ತು. ಪ್ರೌಢಶಾಲೆಯ ಕನ್ನಡ ಮಾಧ್ಯಮ ವಿಜ್ಞಾನ ಶಿಕ್ಷಕರಾಗಿ 2019 ರ ಅಕ್ಟೋಬರ್ 30 ರಂದು ನೇಮಕಗೊಂಡಿದ್ದರು. ಮಕ್ಕಳು, ಶಿಕ್ಷಕರು ಮತ್ತು ಸ್ಥಳೀಯ ಮುಖಂಡರು ಆ ಶಿಕ್ಷಕನ ನೇಮಕಾತಿಯ ವಿರುದ್ದ ಧ್ವನಿಯೆತ್ತಿ ಪ್ರತಿಭಟಿಸಿದ್ದರು.
ಆಯೋಗವು ಶಿಕ್ಷಣ ಉಪನಿರ್ದೇಶಕರಿಂದ ಈ ಬಗ್ಗೆ ವರದಿಯನ್ನು ಕೇಳಿತ್ತು. ವರದಿಯ ಆಧಾರದಂತೆ ಇದೇ ಶಾಲೆಯಲ್ಲಿ ಈ ಹಿಂದೆಯೂ ಕನ್ನಡ ಬಾರದ ಶಿಕ್ಷಕರಿಬ್ಬರ ನೇಮಕಾತಿ ಸಂಬಂಧ ಇದೇ ರೀತಿಯ ಪ್ರತಿಬಟನೆ ನಡೆದಿತ್ತು ಎಂದು ಉಲ್ಲೇಖಿಸಲಾಗಿದೆ. ಕರ್ತವ್ಯಕ್ಕೆ ಹಾಜರಾಗಲು ಪ್ರತಿಭಟನಕಾರರು ಆಸ್ಪದನೀಡದ್ದರಿಂದ ಶಿಕ್ಷಕ ಸಾರ್ವಜನಿಕ ಶಿಕ್ಷಣ ನಿರ್ದೇಶಕರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ. ಕನ್ನಡ ಬಾರದ ಇತರ ಶಿಕ್ಷಕರನ್ನೂ ಇದೇ ಶಾಲೆಯಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಿಸಲು ಆಸ್ಪದ ನೀಡಿದ ಶಿಕ್ಷಣ ಉಪನಿರ್ದೇಶಕರ ಕ್ರಮವನ್ನು ಆಯೋಗವು ಇದು ಹೇಗೆ ಸಾಧ್ಯವಾಯಿತೆಂದು ಪ್ರಶ್ನಿಸಿದೆ.
ದೂರುದಾರನಿಗೆ ಕೆಲಸಕ್ಕೆ ಪ್ರವೇಶಿಸಲು ಎಲ್ಲ ಅರ್ಹತೆಗಳಿವೆ ಎಂದು ಆಯೋಗ ಗಮನಸೆಳೆದಿದೆ. ಏಳು ತಿಂಗಳು ಉದ್ಯೋಗ ನಿರ್ವಹಿಸಲು ಏನೊಂದು ಕ್ರಮಗಳನ್ನೂ ಕೈಗೊಳ್ಳದ ಶಿಕ್ಷಣ ಉಪನಿರ್ದೇಶಕರ ಕ್ರಮ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆಯೋಗ ಗಮನಸೆಳೆದಿದೆ ಮತ್ತು ದೂರುದಾರರ ಜೀವನ ಹಕ್ಕನ್ನು ಪ್ರಶ್ನಿಸಿದಂತಾಗಿದೆ ಎಂದು ಆಯೋಗವು ಟೀಕಿಸಿದೆ.


