ತಿರುವನಂತಪುರ: ಪ್ರಸ್ತುತ ವರ್ಷ ಶಾಲಾ ಪಠ್ಯಕ್ರಮವನ್ನು ಕಡಿಮೆ ಮಾಡದಿರಲು ನಿರ್ಧರಿಸಲಾಗಿದ್ದರೂ, ಹೆಚ್ಚಿನ ಅಧ್ಯಯನಕ್ಕಾಗಿ ವಿವಿಧ ಸಲಹೆಗಳನ್ನು ಪರಿಗಣಿಸಲಾಗುತ್ತಿದೆ. ಕೋವಿಡ್ ನಿಯಂತ್ರಣಕ್ಕೆ ಬಂದಲ್ಲಿ ಡಿಸೆಂಬರ್ ತಿಂಗಳಲ್ಲಿ ಶಾಲಾರಂಭಗೊಳಿಸಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಪ್ರಸ್ತುತ ವರ್ಷದ ಅಧ್ಯಯನವನ್ನು ಮುಕ್ತಾಯಗೊಳಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಆದರೆ ಈ ನಿಟ್ಟಿನಲ್ಲಿ ಅಂತಿಮ ನಿರ್ಧಾರವು ಕೇಂದ್ರದ ನಿರ್ಧಾರವನ್ನು ಅವಲಂಬಿಸಿರುತ್ತದೆ. ಬುಧವಾರ ತಿರುವನಂತಪುರದಲ್ಲಿ ನಡೆದ ರಾಜ್ಯ ಶಾಲಾ ಪಠ್ಯಪುಸ್ತಕ ಸಮಿತಿಯ ಸಭೆ ಪಠ್ಯವನ್ನು ಕಡಿಮೆ ಮಾಡದಿರಲು ನಿರ್ಧರಿಸಿತು.
ಈಗಾಗಲೇ ವಿದ್ಯಾರ್ಥಿಗಳಿಗೆ ಜೂನ್-ಜುಲೈ ಅಧ್ಯಯನ ತಪ್ಪಿದೆ. ಈ ಹಿಂದೆ ಅಂದಾಜಿಸಿದಂತೆ ಆಗಸ್ಟ್ ತಿಂಗಳಲ್ಲಿ ತರಗತಿ ಆರಂಭಿಸಲು ಚಿಂತನೆ ನಡೆಸಿದ್ದಾದರೂ ಹೆಚ್ಚಳಗೊಂಡಿರುವ ಕೋವಿಡ್ ಹಿನ್ನೆಲೆಯಲ್ಲಿ ತರಗತಿ ಆರಂಭಿಸುವುದು ಅಸಾಧ್ಯವಾಗಿದೆ. ಮುಂದಿನ ವರ್ಷದ ಅಧ್ಯಯನ ನಿರಂತರತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ಪಠ್ಯಗಳನ್ನು ಮೊಟಕುಗೊಳಿಸದಿರಲು ತಜ್ಞ ಸಮಿತಿ ನಿರ್ಧರಿಸಿದೆ. ಪಠ್ಯಕ್ರಮ ಸಮಿತಿಯ ಬಹುಪಾಲು ಸದಸ್ಯರು ಈ ನಿರ್ಧಾರವನ್ನು ಒಪ್ಪಿಕೊಂಡರೂ, ಅಧ್ಯಯನವನ್ನು ಹೇಗೆ ಮುಂದುವರಿಸುವುದು ಎಂಬ ಬಗ್ಗೆ ಚರ್ಚೆಗಳು ಇನ್ನೂ ನಡೆಯುತ್ತಿವೆ.
ಪಠ್ಯಗಳಲ್ಲಿ ಯಾವ ಬದಲಾವಣೆಗಳನ್ನು ಮಾಡಬೇಕೆಂಬುದನ್ನು ಒಳಗೊಂಡಂತೆ ಈ ವಿಷಯವನ್ನು ಅಧ್ಯಯನ ಮಾಡಲು ಎಸ್.ಇ.ಆರ್.ಟಿ ನಿರ್ದೇಶಕರ ನೇತೃತ್ವದಲ್ಲಿ ವಿಶೇಷ ಸಮಿತಿಯನ್ನು ರಚಿಸಲಾಯಿತು. ಸದ್ಯಕ್ಕೆ ಆನ್‍ಲೈನ್ ಶಿಕ್ಷಣವನ್ನು ಮುಂದುವರಿಸಲು ಮತ್ತು ಡಿಸೆಂಬರ್ ವೇಳೆಗೆ ಶಾಲೆಗಳನ್ನು ತೆರೆಯಲು ಸರ್ಕಾರ ಆಶಿಸಿದೆ. ಅಂತಹ ಸಂದರ್ಭದಲ್ಲಿ, ಶಾಲಾ-ವರ್ಷವು ನಷ್ಟವಾಗದಂತೆ ಏಪ್ರಿಲ್-ಮೇ ರಜಾದಿನಗಳನ್ನು ರದ್ದುಗೊಳಿಸಿ ಶನಿವಾರದಂದು ತರಗತಿಗಳನ್ನು ನಡೆಸಬೇಕೆಂದು ಸೂಚಿಸಲಾಗಿದೆ.
ಈಗಾಗಲೇ ಕಳೆದ ಏಪ್ರಿಲ್, ಮೇ ತಿಂಗಳ ಬೇಸಿಗೆ ರಜಾ ಅವಧಿಯಲ್ಲೇ ಲಾಕ್ ಡೌನ್ ಇದ್ದುದರಿಂದ ಇನ್ನು ಹೆಚ್ಚಿನ ರಜೆ ಇರಬಾರದು ಎಂಬ ಸಲಹೆಯೂ ಇದೆ. ಹಾಗಿದ್ದಲ್ಲಿ, ಅಂತಿಮ ಪರೀಕ್ಷೆಯನ್ನು ಜೂನ್‍ನಲ್ಲಿ ನಡೆಸಬಹುದು. ಆದರೆ ಅಂತಹ ಕ್ರಮಗಳನ್ನು ಕೇಂದ್ರ ಸರ್ಕಾರದ ಸೂಚನೆಗಳಿಗೆ ಅನುಗುಣವಾಗಿ ಕಾರ್ಯಗತಗೊಳಿಸಲು ಸಭೆಯಲ್ಲಿ ನಿರ್ಧಋಇಸಲಾಗಿದೆ. ಕೇಂದ್ರದ ನಿರ್ದೇಶನದಂತೆ ಮಾತ್ರ ಶಾಲೆಯನ್ನು ತೆರೆಯಬಹುದಾಗಿರುವುದರಿಂದ ಅನಿಶ್ಚಿತತೆಗಳು ಮುಂದುವರಿದಿದೆ.


