ಪೆರ್ಲ: ಕೋವಿಡ್ ನಿಯಂತ್ರಣದ ನೆಪದಲ್ಲಿ ಮುಚ್ಚಲ್ಪಟ್ಟ ಸಾರಡ್ಕ ಚೆಕ್ ಪೋಸ್ಟ್ ಮೂಲಕ ಜನರಿಗೆ ಸಂಚರಿಸಲು ಮುಕ್ತ ಅವಕಾಶ ಕಲ್ಪಿಸಬೇಕೆಂದು ಕೋರಿ ರಾಧಾಕೃಷ್ಣ ನಾಯಕ್ ಶೇಣಿ,ಎಣ್ಮಕಜೆ ಪಂಚಾಯತ್ ಮಾಜಿ ಅಧ್ಯಕ್ಷ ಸೋಮಶೇಖರ್ ಜೆ ಎಸ್, ವಾರ್ಡ್ ಸದಸ್ಯ ಐತ್ತಪ್ಪ ಕುಲಾಲ್ ಎಂಬಿವರು ಕರ್ನಾಟಕ ಹೈಕೋರ್ಟ್ ಗೆ ನೀಡಿದ ಅರ್ಜಿಯಲ್ಲಿ ವಾದ ಮುಂದುವರಿದಿದ್ದು, ದಕ್ಷಿಣ ಕನ್ನಡ ಜಿಲ್ಲಾಡಳಿತ ಇಂದು ನೀಡಿದ ವರದಿಯನ್ನು ಹೈಕೋರ್ಟ್ ತಿರಸ್ಕರಿಸಿ, ಜನರ ಸಂಚಾರಕ್ಕೆ ನಿರ್ಬಂಧವೇರುವ ದ.ಕ ಜಿಲ್ಲಾಡಳಿತದ ನಿಲುವನ್ನು ತರಾಟೆಗೆ ತೆಗೆದುಕೊಂಡಿದೆ. ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್ ಒಕಾ ಒಳಗೊಂಡ ವಿಭಾಗೀಯ ಪೀಠ ಅರ್ಜಿಯ ವಿಚಾರಣೆ ನಡೆಸಿದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಸಾರಡ್ಕ ಚೆಕ್ ಪೋಸ್ಟ್ ಮೂಲಕ ನಿಬಂಧನೆಗಳಿಗೆ ಅನುಗುಣವಾಗಿ ಸಂಚಾರಕ್ಕೆ ಅವಕಾಶವನ್ನು ನೀಡಿದೆಯೆಂದು ತನ್ನ ವಾದವನ್ನು ಮಂಡಿಸಿದೆ. ಇದರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ವಕೀಲರಾದ ನ್ಯಾಯವಾದಿ ನಾಗೇಂದ್ರ ನಾಯಕ್ ಅವರು ಯಾವುದೇ ನಿಬಂಧನೆಗಳನ್ನು ಹೇರದೆ ಜನರಿಗೆ ಸಂಚಾರಕ್ಕೆ ಮುಕ್ತ ಅವಕಾಶ ನೀಡಬೇಕೆಂದು ವಾದಿಸಿದರು. ಈ ಸಂದರ್ಭದಲ್ಲಿ ಹಸ್ತಕ್ಷೇಪ ನಡೆಸಿದ ವಿಭಾಗೀಯ ಪೀಠವು ಕೇಂದ್ರ ಸರಕಾರವು ಅನ್ ಲಾಕ್ ಪ್ರಕ್ರಿಯೆಯ ಭಾಗವಾಗಿ ಅಂತರಾಜ್ಯ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಿರುವಾಗ ಜಿಲ್ಲಾಡಳಿತವು ಸಂಚಾರಕ್ಕೆ ನಿಯಂತ್ರಣ ಹೇರುವುದು ಸರಿಯಲ್ಲ. ಪ್ರಾಯೋಗಿಕ ಕ್ರಮ ಕೈಗೊಂಡು ಅಂತಿಮ ವರದಿ ನೀಡಲು ಸೂಚನೆ ನೀಡಿಯೂ ಪೂರಕವಾದ ನಿಲುವನ್ನು ಕೈಗೊಳ್ಳದ ದಕ್ಷಿಣ ಕನ್ನಡ ಜಿಲ್ಲಾಡಳಿತದ ಕ್ರಮವನ್ನು ತರಾಟೆಗೆ ತೆಗೆದುಕೊಂಡಿದೆ. ರಾಜಕೀಯ ಹಿತಾಸಕ್ತಿಯನ್ನು ತೋರುವ ಸಮಯವಲ್ಲವೆಂದು ಜನರ ಹಿತ ಕಾಪಾಡುವುದು ಜವಾಬ್ದಾರಿಯೆಂದು ರಾಜಕೀಯ ಕಸರತ್ತು ನ್ಯಾಯಾಲಯದಲ್ಲಿ ಬೇಡವೆಂದು ವಿಭಾಗೀಯ ಪೀಠ ಅಸಮಾಧಾನವನ್ನು ವ್ಯಕ್ತಪಡಿಸಿದೆ.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಈ ಕುರಿತು ತೀರ್ಮಾನ ತೆಗೆದುಕೊಳ್ಳಲು ಸಮಯಾವಕಾಶ ಬೇಕೆಂದು ಮನವಿ ಮಾಡಿತ್ತು. ಇದನ್ನು ಅಂಗೀಕರಿಸಿದ ನ್ಯಾಯಪೀಠವು ಹತ್ತು ದಿನಗಳೊಳಗೆ ತೀರ್ಮಾನ ಕೈಗೊಂಡು ಆಗಸ್ಟ್ 28 ರಂದು ಅಂತಿಮ ವರದಿ ನೀಡಬೇಕೆಂದು ಗಡವು ವನ್ನು ನೀಡಿದೆ.
ಇದೇ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ತಲಪ್ಪಾಡಿ ಚೆಕ್ ಪೋಸ್ಟ್ ಹಾಗೂ ಜಾಲ್ಸೂರು ಚೆಕ್ ಪೋಸ್ಟ್ ಮೂಲಕ ಕೇರಳಕ್ಕೆ ಸಂಚಾರಕ್ಕೆ ಅವಕಾಶ ಕಲ್ಪಿಸಿದೆಯೆಂದು ಆದ್ದರಿಂದ ಕೋವಿಡ್ ಹಿನ್ನೆಲೆಯಲ್ಲಿ ಸಾರಡ್ಕ ಚೆಕ್ ಪೋಸ್ಟ್ ತೆರೆಯಲು ಸಾಧ್ಯವಿಲ್ಲವೆಂದು ದ.ಕ ಜಿಲ್ಲಾಡಳಿತ ನಿಲುವು ತಾಳಿದಾಗಲೂ ಹೈಕೋರ್ಟ್ ಜಿಲ್ಲಾಡಳಿತದ ನಿಲುವು ವನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸಾರಡ್ಕ ಮೂಲಕ ನಿರ್ಬಂಧಿತ ಸಂಚಾರಕ್ಕೆ ಅವಕಾಶ ಕಲ್ಪಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಚಾಣಾಕ್ಷತನದ ಕ್ರಮಕೈಗೊಂಡು ಹೈಕೋರ್ಟ್ ನಲ್ಲಿ ಜನರಿಗೆ ಸಂಚಾರಕ್ಕೆ ಅವಕಾಶ ನೀಡಿದೆಯೆಂದು ವರದಿ ನೀಡಲು ಪ್ರಯತ್ನಿಸಿ ಮತ್ತೊಮ್ಮೆ ಹಿನ್ನಡೆ ಅನುಭವಿಸಿದೆ. ಅಂತಿಮ ವರದಿ ನೀಡಲು ಹೈಕೋರ್ಟ್ ಗಡುವು ನೀಡಿದ ಕಾರಣ ಯಾವುದೇ ನಿಬಂಧನೆಗಳಿಲ್ಲದೆ ಚೆಕ್ ಪೋಸ್ಟ್ ಮೂಲಕ ಸಂಚಾರಕ್ಕೆ ಮುಕ್ತ ಅವಕಾಶ ನೀಡಲು ದಕ್ಷಿಣ ಕನ್ನಡ ಜಿಲ್ಲಾಡಳಿತದ ಮೇಲೆ ಒತ್ತಡ ಹೆಚ್ಚಿದಂತಾಗಿದೆ.ಮುಂದಿನ ವಿಚಾರಣೆಯೊಂದಿಗೆ ಅರ್ಜಿಯಲ್ಲಿ ಅಂತಿಮ ತೀರ್ಪು ಹೊರಬೀಳಲಿದೆಯೆಂದು ನಿರೀಕ್ಷಿಸಲಾಗಿದೆ.

