ಕಾಸರಗೋಡು: ಸಿವಿಲ್ ಸಪ್ಲೈಸ್ ಇಲಾಖೆ ಜನತೆಗಾಗಿ ನಡೆಸುತ್ತಿರುವ ಕಾಸರಗೋಡು ಜಿಲ್ಲಾ ಮಟ್ಟದ ಓಣಂ ಫೇರ್ ಶುಕ್ರವಾರ ಆರಂಭಗೊಂಡಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವೀಡೀಯೋ ಕಾನ್ಪರೆನ್ಸ್ ಮೂಲಕ ಓಣಂ ಫೇರ್ ಉದ್ಘಾಟಿಸಿದರು. ರಾಜ್ಯದ 14 ಜಿಲ್ಲೆಗಳಲ್ಲೂ ಚಟುವಟಿಕೆ ಆರಂಭಿಸುರುವ ಓಣಂ ಫೇರ್ ಗಳಿಗೆ ಅವರು ಈ ಮೂಲಕ ಚಾಲನೆ ನೀಡಿದ್ದಾರೆ.
ಈ ಸಂದರ್ಭ ಮಾತನಾಡಿದ ಮುಖ್ಯಮಂತ್ರಿ ಅವರು ರಾಜ್ಯದ ಎಲ್ಲ ಕುಟುಂಬಗಳಿಗೂ ಓಣಂ ಹಬ್ಬಕ್ಕೆ ಮುಂಚಿತವಾಗಿ ಓಣಂ ಕಿಟ್ ವಿತರಿಸಲು ರಾಜ್ಯ ಸರಕಾರ ಯತ್ನಿಸುತ್ತಿದೆ. ಜಗತ್ತಿನಾದ್ಯಂತ ಕೋವಿಡ್ ವಿರುದ್ಧ ಸತತ ಹೋರಾಟ ನಡೆಯುತ್ತಿದೆ. ಹೀಗಿದ್ದರೂ, ಅತ್ಯಂತ ಸಮಾಧಾನಕರ ಓಣಂ ಹಬ್ಬ ಆಚರಣೆಗೆ ಬೇಕಾದ ಎಲ್ಲ ವ್ಯವಸ್ಥೆಯನ್ನೂ ರಾಜ್ಯ ದಲ್ಲಿ ನಡೆಸಲಾಗಿದೆ. ಉತ್ಸವ ಅವಧಿಗಳಲ್ಲಿ ಮಾರುಕಟ್ಟೆಯಲ್ಲಿ ತಲೆದೊರುವ ಬೆಲೆ ಏರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಿವಿಲ್ ಸಪ್ಲೈಸ್ ಇಲಾಖೆ ತೀವ್ರ ಯತ್ನಗಳನ್ನು ನಡೆಸುತ್ತಿದೆ. ಇದಕ್ಕೊಂದು ಉತ್ತಮ ನಿರ್ದಶನ ಓಣಂ ಫೇರ್ ಆಗಿದೆ ಎಂದರು.
ಹಬ್ಬವನ್ನು ಆಚರಿಸುವ ವೇಳೆ ಕೋವಿಡ್ ಪ್ರತಿರೋಧ ಸಂಹಿತೆಗಳನ್ನು ಪಾಲಿಸಲು ಜನ ಮರೆಯಕೂಡದು. ಕುಟುಂಬದ ಸದಸ್ಯರ ಸಂದರ್ಶನ, ಗೆಳೆಯರ ಭೇಟಿ ಇತ್ಯಾದಿಗಳನ್ನು ಕೈಬಿಡಬೇಕು. ತಮ್ಮ ಮನೆಯೊಳಗಿದ್ದೇ ಓಣಂ ಹಬ್ಬವನ್ನು ಆಚರಿಸಬೇಕು ಎಂದವರು ಆಗ್ರಹಿಸಿದರು.
ಆಹಾರ ಸಚಿವ ಪಿ.ತಿಲೋತ್ತಮನ್ ಅಧ್ಯಕ್ಷತೆ ವಹಿಸಿದ್ದರು.
ಕಾಸರಗೋಡು ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೆÇೀ ಸಂಕೀರ್ಣ ಬಳಿಯ ಕಟ್ಟಡದಲ್ಲಿ ಜಿಲ್ಲಾ ಮಟ್ಟದ ಓಣಂ ಫೇರ್ ಆರಂಭಗೊಂಡಿದೆ. ಜಿಲ್ಲಾ ಮಟ್ಟದ ಚಟುವಟಿಕೆಗಳಿಗೆ ಸಂಸದ ರಾಜ್ ಮೋಹನ್ ಉಣ್ಣಿತ್ತನ್ ಚಾಲನೆ ನೀಡಿದರು. ಶಾಸಕ ಎನ್.ಎ.ನೆಲ್ಲಿಕುನ್ನು ಮೊದಲ ಮಾರಾಟ ನಿರ್ವಹಿಸಿದರು. ಕಾಸರಗೋಡು ನಗರಸಭೆ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ ಮುಖ್ಯ ಅತಿಥಿಯಾಗಿದ್ದರು. ಸಪ್ಲೈ-ಕೋ ಡಿಪೆÇೀ ಪ್ರಬಂಧಕ ಎಂ.ಎಂ.ಪ್ರವೀಣ್ ಲಾಲ್, ಫೇರ್ ಆಫೀಸರ್ ಇ.ಪ್ರಭಾಕರನ್, ಸಿಬ್ಬಂದಿ ಉಪಸ್ಥಿತರಿದ್ದರು. ಕೋವಿಡ್ ಪ್ರತಿರೋಧ ಸಂಹಿತೆಗಳನ್ನು ಕಡ್ಡಾಯವಾಗಿ ಪಾಲಿಸಿ ಸಮಾರಂಭ ಜರುಗಿತು.
ಆ.30 ವರೆಗೆ ಓಣಂ ಫೇರ್ ಇಲ್ಲಿ ಚಟುವಟಿಕೆ ನಡೆಸಲಿದೆ.
ಹಬ್ಬಾಚರಣೆಯ ಸಂದರ್ಭ ಕಡಿಮೆ ಬೆಲೆಗೆ, ಅತ್ಯುತ್ತ ಗುಣಮಟ್ಟದ ಸಾಮಾಗ್ರಿಗಳನ್ನು, ಸೂಕ್ತ ಅಳತೆಯೊಂದಿಗೆ ಜನತೆಗೆ ಒದಗಿಸುವ ನಿಟ್ಟಿನಲ್ಲಿ ಓಣಂ ಫೇರ್ ನಡೆಸಲಾಗುತ್ತಿದೆ.
ರಾಜ್ಯದ ಜನಪರ ಸಂಸ್ಥೆಗಳಾದ ಮಾವೇಲಿ ಸ್ಟೋರ್ ಗಳಲ್ಲಿ ಲಭಿಸುವ ಸಾಮಾಗ್ರಿಗಳು ಇಲ್ಲೂ ದೊರೆಯುತ್ತವೆ. ಶಬರಿ ಸಂಸ್ಥೆ, ಇನ್ನಿತರ ಬ್ರಾಂಡೆಡ್ ಸಂಸ್ಥೆಗಳ ಉತ್ಪನ್ನಗಳು ಇಲ್ಲಿ ಶೇ 5ರಿಂದ ಶೇ 30 ವರೆಗಿನ ರಿಯಾಯಿತಿ ದರದಲ್ಲಿ ಲಭ್ಯವಿವೆ. ವೈವಿಧ್ಯಮಯ ಪಾಯಸಕ್ಕಿರುವ ಸುಮಾರು 45 ಉತ್ಪನ್ನಗಳು ಇಲ್ಲಿವೆ.
ವಿವಿಧ ಸಂಸ್ಥೆಗಳ ಸ್ಟಾಲ್ ಗಳೂ ಇಲ್ಲಿ ಗ್ರಾಹಕರನ್ನು ಸೆಳೆಯುತ್ತವೆ. ಮಿಲ್ಮಾ ಸ್ಟಾಲ್ ಗಳಲ್ಲಿ ಶೇ 5ರಿಂದ ಶೇ 10 ವರೆಗಿನ ದರಕಡಿತವಿದೆ. ಕುಟುಂಬಶ್ರೀ ಸ್ಟಾಲ್ ನಳನಳಿಸುವ ಜೈವಿಕ ತರಕಾರಿ ಇತ್ಯಾದಿಗಳೊಂದಿಗೆ ಆಕರ್ಷಣೀಯವಾಗಿವೆ.
ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ಓಣಂ ಫೇರ್ ಚಟುವಟಿಕೆ ನಡೆಸುತ್ತದೆ. ಕೋವಿಡ್ ಪ್ರತಿರೋಧ ಸಂಹಿತೆಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಓಣಂ ಫೇರ್ ನ ಚಟುವಟಿಕೆಗಳು ಇರುವುವು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್, ಸಾನಿಟೈಸರ್ ಬಳಕೆ ಇತ್ಯಾದಿಗಳು ಅನಿವಾರ್ಯ. ಏಕಕಾಲಕ್ಕೆ 5 ಮಂದಿಗೆ ಮಾತ್ರ ಪ್ರವೇಶ ಇರುವುದು. ಪ್ರವೇಶ ದ್ವಾರದಲ್ಲೇ ಸಾನಿಟೈಸರ್ ನೀಡಲಾಗುತ್ತದೆ.



