ಕಾಸರಗೋಡು: ಕೋವಿಡ್ ನಿಯಂತ್ರಣದ ಹೆಸರಿನಲ್ಲಿ ಮುಚ್ಚಲಾಗಿದ್ದ ತಲಪಾಡಿ ಸಹಿತ ಜಿಲ್ಲೆಯ ಎಲ್ಲಾ ಗಡಿಗಳನ್ನು ಕೂಡಲೇ ತೆರೆಯಬೇಕೆಂದು ಆಗ್ರಹಿಸಿ ಕಾಸರಗೋಡು ಜಿಲ್ಲಾ ಪಂಚಾಯತು ಠರಾವು ಅಂಗೀಕರಿಸಿದೆ.
ಬುಧವಾರ ಜಿ.ಪಂ.ಅಧ್ಯಕ್ಷ ಎಜಿಸಿ ಬಶೀರ್ ಅಧ್ಯಕ್ಷತೆಯಲ್ಲಿ ಜರಗಿದ ಜಿ.ಪಂ.ಸಾಮಾನ್ಯಸಭೆಯಲ್ಲಿ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಮಂಡಿಸಿದ ಠರಾವು ಸರ್ವಾನುಮತದಿಂದ ಅಂಗಿಕರಿಸಲಾಯಿತು.
ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷೆ ಫರಿದಾ ಝಾಕೀರ್ ಅನುಮೋದಿಸಿದರು. ಸಭೆಯಲ್ಲಿ ಠರಾವು ಮಂಡಿಸಿ ಮಾತನಾಡಿದ ಹರ್ಷಾದ್ ವರ್ಕಾಡಿಯವರು ಗಡಿ ಮುಚ್ಚಿದ ಹಿನ್ನೆಲೆಯಲ್ಲಿ ಜಿಲ್ಲೆಯ ಜನಸಾಮಾನ್ಯರು ಅತಂತ್ರರಾಗಿದ್ದಾರೆ, ದ.ಕ.ಜಿಲ್ಲೆಯಲ್ಲಿ ಉದ್ಯೋಗ ಹೊಂದಿರುವ ಸಹಸ್ರಾರು ಮಂದಿ ಸಂಕಷ್ಟಕ್ಕೀಡಾಗಿದ್ದಾರೆ, ಹಲವಾರು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ, ಚಿಕಿತ್ಸೆಗೆ ತೆರಳುವ ರೋಗಿಗಳು ಸಮಸ್ಯೆಗೀಡಾಗಿದ್ದಾರೆ, ಎಣ್ಮಕಜೆ ಪಂ.ಸಾರಡ್ಕದಲ್ಲಿ ಪಂಚಾಯತು ಪರಿಧಿಯೊಳಗಿನ ಜನರಿಗೆ ಸಂಚಾರ ಅಡ್ಡಿಯಾಗಿದೆ, ದೇಶದ ಎಲ್ಲಾ ಗಡಿ ತೆರೆಯುವಂತೆ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿದ್ದು ಕೂಡಲೇ ಇದನ್ನು ಕಾಸರಗೋಡು ಅನುಷ್ಠಾನಗೊಳಿಸುವಂತೆ ರಾಜ್ಯ ಸರ್ಕಾರವು ಕೂಡಲೇ ಮಧ್ಯಸ್ಥಿಕೆ ವಹಿಸುವಂತೆ ಬೇಡಿಕೆಯಿಟ್ಟರು. ಸಭೆಯಲ್ಲಿ ಜಿ.ಪಂ.ಉಪಾಧ್ಯಕ್ಷೆ ಶಾಂತಮ್ಮ ಫಿಲಿಪ್, ಸ್ಥಾಯೀ ಸಮಿತಿ ಅಧ್ಯಕ್ಷರಾದ ನ್ಯಾಯವಾದಿ ಉಷಾ, ಶಾನವಾಸ್ ಪಾದೂರ್, ಸದಸ್ಯರಾದ ಪುಷ್ಪ ಅಮೆಕ್ಕಳ, ಸುಫೈಜಾ ಟೀಚರ್, ಇ.ಪದ್ಮಾವತಿ, ಕೇಳು ಪಣಿಕ್ಕರ್, ನಾರಾಯಣನ್, ಝುಬೈದಾ, ಬ್ಲಾಕ್ ಪಂಚಾಯತು ಅಧ್ಯಕ್ಷರಾದ ಚಾಯಿಂಡಡಿ ಮೊಹಮ್ಮದ್, ಗೌರಿ, ಎಕೆಎಂ ಅಶ್ರಫ್, ಓಮನಾ ರಾಮಚಂದ್ರನ್ ಮುಂತಾದವರು ಉಪಸ್ಥಿತರಿದ್ದರು.


