ತಿರುವನಂತಪುರ: ಕೋವಿಡ್ ಮಹಾಮಾರಿಯ ಕಾರಣದಿಂದ ಅಸ್ತವ್ಯಸ್ಥಗೊಂಡಿರುವ ಶೈಕ್ಷಣಿಕ ವ್ಯವಸ್ಥೆಯ ಕಾರಣ ಈ ಬಾರಿ ಓಣಂ ಮತ್ತು ಕ್ರಿಸ್‍ಮಸ್ ಪರೀಕ್ಷೆಗಳು ಇರುವುದಿಲ್ಲ ಎಂದು ವಿದ್ಯಾಭ್ಯಾಸ ಇಲಾಖೆ ತಿಳಿಸಿದೆ. ಪರೀಕ್ಷೆಗಳನ್ನು ರದ್ದುಗೊಳಿಸುವ ಜೊತೆಗೆ ವಿವಿಧ ಸಲಹೆಗಳೊಂದಿಗೆ ವಿಭಿನ್ನ ರೀತಿಯ ಶೈಕ್ಷಣಿಕ ಕ್ಯಾಲೆಂಡರ್ ನ್ನು ರಚಿಸಲು ರಾಜ್ಯ ಶಿಕ್ಷಣ ಇಲಾಖೆ ಕಾರ್ಯೋನ್ಮುಖವಾಗಿದೆಯೆಂದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಶಿಫಾರಸುಗಳನ್ನು ಮಾಡಲು ಎಸ್.ಸಿ.ಇ.ಆರ್.ಟಿ. ನಿರ್ದೇಶಕರಿಗೆ ನಿರ್ದೇಶಿಸಲಾಗಿದೆ. ಸಾರ್ವಜನಿಕ ಶಿಕ್ಷಣ ಕಾರ್ಯದರ್ಶಿ ಎ ಶಹಜಹಾನ್ ಎರಡು ವಾರಗಳಲ್ಲಿ ವರದಿ ಸಲ್ಲಿಸಲು ತಿಳಿಸಿದ್ದಾರೆ.
ಕೋವಿಡ್ ವ್ಯಾಪಕತೆಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರಸ್ತುತ ಸಾಲಿನಲ್ಲಿ ತರಗತಿಗಳನ್ನು ನಡೆಸುತ್ತಿಲ್ಲ. ಆದರೆ ಆನ್‍ಲೈನ್ ತರಗತಿಗಳು ನಡೆಯುತ್ತಿದೆ. ದೈನಂದಿನ ತರಗತಿಗಳು ಹೈಸ್ಕೂಲು, ಪ್ಲಸ್ ಟು ವಿದ್ಯಾರ್ಥಿಗಳಿಗೆ ಎರಡೂವರೆ ಗಂಟೆಗಳವರೆಗೆ ಮತ್ತು ಕಿರಿಯ-ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಅರ್ಧ ಘಂಟೆಗಳ ಆನ್‍ಲೈನ್ ತರಗತಿಗಳು ಚಾಲ್ತಿಯಲ್ಲಿದೆ. ಆನ್‍ಲೈನ್ ಅಧ್ಯಯನವನ್ನು ಪಠ್ಯಕ್ರಮ ಸಮಿತಿಯು ಮೌಲ್ಯಮಾಪನ ಮಾಡಿದೆ.
ಇದೇ ವೇಳೆ ಶೈಕ್ಷಣಿಕ ವರ್ಷವನ್ನು ವಿಸ್ತರಿಸಲು ಇಲಾಖೆ ಚಿಂತನೆ ನಡೆಸಿದೆ. ಪ್ರಸ್ತುತ ಮಾರ್ಚ್ ಅಂತ್ಯವನ್ನು ಏಪ್ರಿಲ್ ಮತ್ತು ಮೇ ವರೆಗೆ ವಿಸ್ತರಿಸುವ ಪ್ರಸ್ತಾಪವಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ಡಿಸೆಂಬರ್ ವರೆಗೆ ಶಾಲೆಗಳನ್ನು ತೆರೆಯಲು ಸಾಧ್ಯವಿಲ್ಲ ಎಂದು ಸರ್ಕಾರ ತೀರ್ಮಾನಿಸಿದೆ. ತರಗತಿಗಳು ಪ್ರಾರಂಭವಾದ ತಕ್ಷಣ ರಜಾದಿನಗಳನ್ನು ಮೊಟಕುಗೊಳಿಸುವ ಸೂಚನೆ ಈಗಾಗಲೇ ನೀಡಲಾಗಿದೆ.
ಇದರೊಂದಿಗೆ ಹಾಲಿ ವರ್ಷ ಯಾವ ಕಾರಣಕ್ಕೂ ಪಠ್ಯಗಳನ್ನು ಕಡಿತಗೊಳಿಸಬಾರದೆಂದು ಸರ್ಕಾರ ತಿಳಿಸಿದೆ. ಆದ್ದರಿಂದ, ವಾರ್ಷಿಕ ಪರೀಕ್ಷೆಯನ್ನು ಮೇ ತಿಂಗಳಲ್ಲಿ ನಡೆಸಬೇಕೆಂದು ಸೂಚಿಸಲಾಗಿದೆ. ಈಗ ನಡೆಯುತ್ತಿರುವ ಹೆಚ್ಚಿನ ಆನ್‍ಲೈನ್ ತರಗತಿಗಳು ಉತ್ತಮ ಗುಣಮಟ್ಟದ್ದಾಗಿವೆ. ಆದರೆ ಕೆಲವು ತರಗತಿಗಳ ಬಗ್ಗೆ ವಿಭಿನ್ನ ಅಭಿಪ್ರಾಯಗಳಿಂದಾಗಿ, ತಜ್ಞರು ಮೌಲ್ಯಮಾಪನ ಮಾಡಿದ ನಂತರವೇ ರೆಕಾರ್ಡ್ ಮಾಡಲಾದ ತರಗತಿಗಳು ಇನ್ನು ಮುಂದೆ ಪ್ರಸಾರವಾಗಲಿರುವುದೆಂದು ತಿಳಿದುಬಂದಿದೆ.


