ಕಾಸರಗೋಡು: ಕಾಸರಗೋಡು ಜಿಲ್ಲೆಯ ಕ್ರೀಡಾ ವಲಯದ ಪುನಶ್ಚೇತನಕ್ಕಾಗಿ ಪಳ್ಳಿಕ್ಕರೆ ಚೇರ್ಕಪ್ಪಾರೆ ಮುಕ್ತ ಕ್ರೀಡಾಂಗಣ ಲೋಕಾರ್ಪಣೆಗೊಂಡಿದೆ.
ಕೇರಳೋತ್ಸವ ಸಹಿತ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ನಡೆಸುವಲ್ಲಿ ತಲೆದೋರುತ್ತಿರುವ ಜಾಗಗಳ ಕೊರತೆಗೆ ಶಾಶ್ವತ ಪರಿಹಾರವಾಗಿ ಈ ಕ್ರೀಡಾಂಗ ಸಜ್ಜುಗೊಂಡಿದೆ. ಫುಟ್ ಬಾಲ್, ವಾಲಿಬಾಲ್, ಅತ್ಲೆಟಿಕ್ಸ್, ಕಬಡ್ಡಿ ಸಹಿತ ಕ್ರೀಡೆಗಳಿಗೆ ಅನುಕೂಲಕರವಾಗಿ ಈ ಕ್ರೀಡಾಂಗಣವಿದೆ. 2 ಎಕ್ರೆ ಜಾಗದಲ್ಲಿ ನಿರ್ಮಾಣಗೊಂಡಿರುವ ಈ ಕ್ರೀಡಾಂಗಣದಲ್ಲಿ ಕೋವಿಡ್ ನಂತರದ ಅವಧಿಯಲ್ಲಿ ಹೆಚ್ಚುವರಿ ಸೌಲಭ್ಯ ಒದಗಿಬರಲಿದೆ.
ಕಾಞಂಗಾಡ್ ಬ್ಲಾಕ್ ಪಂಚಾಯತ್ ನ ಅಭಿಮಾನ ಪುರಸ್ಸರವಾದ ಯೋಜನೆ ಇದಾಗಿದೆ. 2018-19 ವಾರ್ಷಿಕ ಯೋಜನೆಯಲ್ಲಿ ಅಳವಡಿಸಿ ಸ್ಟೇಡಿಯಂನಿರ್ಮಾಣಗೊಂಡಿದೆ. ಈ ವರ್ಷ ಫೆಬ್ರವರಿ ಕೊನೆಯ ವಾರದಲ್ಲೇ ನಿರ್ಮಾಣ ಕಾಮಗಾರಿ ಪೂಋಣಗೊಂಡಿದ್ದು, ಏಪ್ರಿಲ್ ತಿಂಗಳಲ್ಲಿ ಉದ್ಘಾಟನೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಕೋವಿಡ್ ಸೋಂಕು ಹಾವಳಿಯ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು ಎಂದು ಕಾಞಂಗಾಡ್ ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಎಂ.ಗೌರಿ ತಿಳಿಸಿದರು.
ಬ್ಲಾಕ್ ಪಂಚಾಯತ್ ವತಿಯಿಂದ 40 ಲಕ್ಷ ರೂ., ಪಳ್ಳಿಕ್ಕರೆ ಗ್ರಾಮ ಪಂಚಾಯತ್ ವತಿಯಿಂದ 6 ಲಕ್ಷ ರೂ. ಮೀಸಲಿರಿಸಿ ಈ ಕ್ರೀಡಾಂಗಣ ನಿರ್ಮಿಸಲಾಗಿದೆ. 700 ಮಂದಿ ಏಕಕಾಲಕ್ಕೆ ಕ್ರೀಡೆಗಳನ್ನು ಈಕ್ಷಿಸಬಹುದಾದ ಸೌಲಭ್ಯ ಇಲ್ಲಿದೆ. ಮುಂದಿನವರ್ಷದ ಬಜೆಟ್ ನಲ್ಲಿ ಪವಿಲಿಯನ್ ನಿರ್ಮಾಣ ಸಹಿತ ಸೌಲಭ್ಯಕ್ಕಾಗಿ ನಿಧಿ ಮೀಸಲಿರಿಸಲು ಗ್ರಾಮಪಂಚಾಯತ್ ಪದಾಧಿಕಾರಿಗಳು ನಿರ್ಧರಿಸಿದ್ದಾರೆ.
ಉದ್ಘಾಟನೆ ಸಮಾರಂಭ:
ಶುಕ್ರವಾರ ಈ ಸಂಬಂಧ ನಡೆದ ಸಮಾರಂಭದಲ್ಲಿ ಶಾಸಕ ಕೆ.ಕುಂಞ ರಾಮನ್ ಉದ್ಘಾಟನೆ ನಡೆಸಿದರು. ಕಾಞಂಗಾಡ್ ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಎಂ.ಗೌರಿ ಅಧ್ಯಕ್ಷತೆ ವಹಿಸಿದ್ದರು. ಪಳ್ಳಿಕ್ಕರೆ ಗ್ರಾಪಂಚಾಯತ್ ಅಧ್ಯಕ್ಷೆ ಪಿ.ಇಂದಿರಾ ಮುಖ್ಯ ಅತಿಥಿಯಾಗಿದ್ದರು. ಬ್ಲಾಕ್ ಪಂಚಾಯತ್ ಉಪಾಧ್ಯಕ್ಷ ಕರುಣಾಕರನ್ ಕುನ್ನತ್, ಡಿವಿಝನ್ ಮೆಂಬರ್ ಕೆ.ಭಾನುಮತಿ, ವಾರ್ಡ್ ಸದಸ್ಯ ಕೆ.ರವೀಂದ್ರನ್, ಪಂಚಾಯತ್ ಮಾಜಿ ಸ್ಥಾಯೀ ಸಮಿತಿ ಅಧ್ಯಕ್ಷ ರಾಘವನ್ ವೆಳುತ್ತೋಳಿ, ಕ್ಲಬ್ ಪದಾಧಿಕಾರಿ ಟಿ.ಅಶೋಕನ್ ಮೊದಲಾದವರು ಉಪಸ್ಥಿತರಿದ್ದರು. ಕಾಞಂಗಾಡ್ ಬ್ಲಾಕ್ ಪಂಚಾಯತ್ ಕಾರ್ಯದರ್ಶಿ ಬಿ.ಸೋಲಮನ್ ಸ್ವಾಗತಿಸಿದರು. ಬ್ಲೋಕ್ ಪಂಚಾಯತ್ ಮಹಿಳಾ ಕಲ್ಯಾಣ ಅಧಿಕಾರಿ ಸುರೇಶ್ ಕಸ್ತೂರಿ ವಂದಿಸಿದರು.


