ಕಾಸರಗೋಡು: ಓಣಂ ಹಬ್ಬಾಚರಣೆ ವೇಳೆ ಸಾರ್ವಜನಿಕರು ಜಾಗರೂಕತೆ ಪಾಲಿಸಬೇಕು ಎಂದು ಕಾಸರಗೋಡು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಕೋವಿಡ್ ಸೋಂಕು ಅತ್ಯಧಿಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷ ಹಬ್ಬಗಳ ಆಚರಣೆ ವೇಳೆ ಅತೀವ ಜಾಗ್ರತೆ ಪಾಲಿಸಬೇಕಾದುದು ಅನಿವಾರ್ಯ ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಜನ ಸಂಪರ್ಕ ವಿರುವ ಎಲ್ಲ ಆಚರಣೆಗಳನ್ನೂ ಸಾರ್ವಜನಿಕರು ಕೈಬಿಡಬೇಕು. ರಂಗೋಲಿ ರಚಿಸುವ ವೇಳೆ ಹಿತ್ತಿಲಲ್ಲಿ ಬೆಳೆದ ಹೂವುಗಳನ್ನು ಮಾತ್ರ ಬಳಸಬೇಕು. ಓಣಂ ಭೋಜನ ಮನೆಗಳಲ್ಲೇ ನಡೆಸಬೇಕು. ಎಲ್ಲರೂ ಜತೆಗೂಡಿ ಭೋಜನ ನಡೆಸಕೂಡದು. ನೆರೆಮನೆಗೂ ತೆರಳುವ, ಅಲ್ಲಿ ಆಹಾರ ಸೇವಿಸುವ ಕಾರ್ಯಕ್ರ ಕೈಬಿಡಬೇಕು. ಸಂಬಂಧಿಕರು ಮನೆಗೆ ಸಂದರ್ಶನ ನಡೆಸುವ ಪ್ರಮೇಯ ಬೇಡ. ಹಬ್ಬಕ್ಕೆ ಅಗತ್ಯವಿರುವ ಶಾಪಿಂಗ್ ಗೆ ಮನೆಯ ಸದಸ್ಯರಲ್ಲಿ ಒಬ್ಬರು ಯಾ ಇಬ್ಬರು ಮಾತ್ರ ತೆರಳಬೇಕು. ವಯೋವೃದ್ಧರು, ಮಕ್ಕಳು ಶಾಪಿಂಗ್ ಗೆ ತೆರಳಕೂಡದು.
ವ್ಯಾಪಾರ ಸಂಸ್ಥೆಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕು. ಮಾಸ್ಕ್ ಧರಿಸಿದವರು ಮಾತ್ರ ವ್ಯಾಪಾರ ಸಂಸ್ಥೇಗಳ ಒಳ ಪ್ರವೇಶಿಸಬೇಕು. ಖರೀದಿಸಬೇಕಾದ ಸಾಮಾಗ್ರಿಗಳ ಪಟ್ಟಿಯನ್ನು ಮೊದಲೇ ಸಿದ್ಧಪಡಿಸಿಕೊಳ್ಳಬೇಕು. ಸಾನಿಟೈಸರ್ ಬಳಿಯಲ್ಲೇ ಇರಿಸಿಕೊಳ್ಳಬೇಕು. ವ್ಯಾಪರಿಗಳು ತಮ್ಮ ಸಂಸ್ಥೆಗಳಲ್ಲಿ ಜನನಿಬಿಢತೆ ತಲೆದೋರದಂತೆ ನೋಡಿಕೊಳ್ಳಬೇಕು. ಸಾಮಾಜಿಕ ಅಂತರ ಪಾಲಿಸಿ ಸಾಲಾಗಿ ಬಂದು ಸಾಮಾಗ್ರಿ ಖರೀದಿಸುವ ವ್ಯವಸ್ಥೆಯನ್ನು ಗ್ರಾಹಕರಿಗೆ ಒದಗಿಸಬೇಕು. ಏಕಕಾಲಕ್ಕೆ 5ಕ್ಕಿಂತ ಅಧಿಕ ಗ್ರಾಹಕರು ಅಂಗಡಿಯೊಳಕ್ಕೆ ಪ್ರವೇಶಿಸಕೂಡದು. ಸೂಕ್ತ ರೀತಿಯಲ್ಲಿ ಮಾಸ್ಕ್ಧರಿಸಿದವರು ಮಾತ್ರ ಪ್ರವೇಶ ನಡೆಸಬೇಕು. ಅಂಗಡಿಗಳಲ್ಲಿ ಮಾಲೀಕ, ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್, ಗ್ಲೌಸ್ ಧರಿಸಬೇಕು. ಗ್ರಾಹಕರು ಶಾಪಿಂಗ್ ನಡೆಸುವಮುನ್ನ ಮತ್ತು ನಂತರ ಕೈಗಳನ್ನು ರೋಗನಾಶಕ ದ್ರಾವಕ ಬಳಸಿ ಶುಚಿಗೊಳಿಸಬೇಕು.
ಹಾಸುಗೆ ಹಿಡಿದ ರೋಗಿಗಳ, ಇತರ ಗಂಭೀರ ಸ್ಥಿತಿಯ ರೋಗಿಗಳ ಸಂಪರ್ಕ ನಡೆಸಕೂಡದು ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿರುವರು.


