HEALTH TIPS

ರಾಜ್ಯಸಭೆಯಲ್ಲಿ ಕೋಲಾಹಲ: 8 ಸದಸ್ಯರನ್ನು ಒಂದು ವಾರ ಅಮಾನತು ಮಾಡಿದ ರಾಜ್ಯಸಭೆ ಚೇರ್ಮನ್ ವೆಂಕಯ್ಯನಾಯ್ಡು

      ನವದೆಹಲಿ: ಕೃಷಿ ಮಸೂದೆ ವಿಚಾರವಾಗಿ ರಾಜ್ಯಸಭೆಯಲ್ಲಿ ಉಂಟಾದ ಕೋಲಾಹಲಕ್ಕೆ ಸಂಬಂಧಿಸಿದಂತೆ ರಾಜ್ಯಸಭೆ ಅಧ್ಯಕ್ಷ ವೆಂಕಯ್ಯನಾಯ್ಡು ಅವರು 8 ಮಂದಿ ರಾಜ್ಯಸಭಾ ಸದಸ್ಯರನ್ನು ಅಮಾನತು ಮಾಡಿದ್ದಾರೆ.

      ಕೃಷಿ ಮಸೂದೆ ಅಂಗೀಕಾರದ ವೇಳೆ ಕೋಲಾಹಲ ಸೃಷ್ಟಿಸಿ ಕಲಾಪಕ್ಕೆ ಅಡ್ಡಿ ಪಡಿಸಿದ ಹಿನ್ನಲೆ ಮತ್ತು ಉಪ ಸಭಾಪತಿ ಅವರನ್ನು ಅನುಚಿತವಾಗಿ ನಡೆಸಿಕೊಂಡ ಆರೋಪ ಮತ್ತು ಅಶಿಸ್ತಿನ ವರ್ತನೆ ಮೇರೆಗೆ ರಾಜ್ಯಸಭಾ ಸದಸ್ಯರಾದ ಡೆರೆಕ್ ಒ ಬ್ರಿಯಾನ್, ಸಂಜಯ್ ಸಿಂಗ್, ರಾಜು ಸತವ್, ಕೆ.ಕೆ.ರಾಗೇಶ್, ರಿಪೂನ್  ಬೋರಾ, ಡೋಲಾ ಸೇನ್, ಸೈಯದ್ ನಜೀರ್ ಹುಸೇನ್ ಮತ್ತು ಎಲಮರನ್ ಕರೀಮ್ ಅವರನ್ನು ಒಂದು ವಾರ ಅಮಾನತುಗೊಳಿಸಲಾಗಿದೆ ಎಂದು ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು ಹೇಳಿದ್ದಾರೆ.

       ನಿನ್ನೆ ಕೃಷಿ ಮಸೂದೆಯನ್ನು ಮತಕ್ಕಾಗಿ ಹಾಕಿದ ವಿಚಾರ ವಿಪಕ್ಷ ಸದಸ್ಯರ ಕೋಲಾಹಲಕ್ಕೆ ಕಾರಣವಾಗಿತ್ತು. ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರು ಮಸೂದೆಗಳನ್ನು ಮಂಡಿಸಿದಾಗ ರಾಜ್ಯಸಭೆಯಲ್ಲಿ ಜೋರು ಗಲಾಟೆ ಆರಂಭವಾಯಿತು. ರೈತರ ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ ಮತ್ತು ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕುರಿತಂತೆ ರೈತರ ಜತೆ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಂದ ಮಸೂದೆಗಳನ್ನು ಪರಿಶೀಲನಾ ಸಮಿತಿಗೆ ಕಳಿಸುವಂತೆ ವಿರೋಧ ಪಕ್ಷಗಳ ಸದಸ್ಯರು ಪಟ್ಟು ಹಿಡಿದರು. ಮಸೂದೆಗಳನ್ನು ಪರಿಶೀಲನಾ ಸಮಿತಿಗೆ ಕಳಿಸುವ ನಿರ್ಣಯವನ್ನು ಧ್ವನಿಮತಕ್ಕೆ ಹಾಕುವುದಾಗಿ ಉಪ ಸಭಾಪತಿ ಹರಿವಂಶ ಸಿಂಗ್‌ ಪ್ರಕಟಿಸಿದಾಗ ವಿರೋಧ ಪಕ್ಷಗಳ ಆಕ್ರೋಶ ಕಟ್ಟೆಯೊಡೆಯಿತು.

       ಈ ವೇಳೆ ಘೋಷಣೆ ಕೂಗುತ್ತ ಸಭಾಪತಿ ಪೀಠದತ್ತ ನುಗ್ಗಿದ ತೃಣಮೂಲ ಕಾಂಗ್ರೆಸ್‌(ಟಿಎಂಸಿ) ನಾಯಕ ಡೆರೆಕ್‌ ಒಬ್ರಿಯಾನ್,  ರೂಲ್‌ ಬುಕ್‌ ಎತ್ತಿಕೊಂಡರು. ಅವರನ್ನು ಸೇರಿಕೊಂಡ ವಿರೋಧ ಪಕ್ಷಗಳ ಸದಸ್ಯರು ಕೈಗೆ ಸಿಕ್ಕ ಮೈಕ್ರೊಫೋನ್‌ಗಳನ್ನು ಮುರಿದು ಹಾಕಿದರು. ಕಾಗದದ ಚೂರುಗಳನ್ನು ಹರಿದು ತೂರಿದರು. ಟೇಬಲ್‌ಗಳ ಮೇಲೆ ಹತ್ತಿ ನಿಂತು ಘೋಷಣೆ ಕೂಗತೊಗಿದರು. ಕೊನೆಗೆ ಸಭಾಪತಿ ಪೀಠದ ಮುಂದೆ ಧರಣಿ ಕುಳಿತರು. ಗದ್ದಲ ನಿಯಂತ್ರಣಕ್ಕೆ ಬಾರದ ಕಾರಣ ಸದನವನ್ನು ಮಧ್ಯಾಹ್ನ ಎರಡು ಗಂಟೆಗೆ ಮುಂದೂಡಲಾಯಿತು. ಆದರೂ ಪ್ರತಿಭಟನಾನಿರತ ಸದಸ್ಯರು ಸದನದಿಂದ ಕದಲಲಿಲ್ಲ. ಗದ್ದಲ ಮತ್ತು ವಿರೋಧದ ನಡುವೆಯೇ ಉಪ ಸಭಾಪತಿ ಹರಿವಂಶ‌ ಅವರು ಮಸೂದೆಗಳನ್ನು ಧ್ವನಿಮತಕ್ಕೆ ಹಾಕಿದರು.

     ಉಪ ಸಭಾಪತಿಗಳ ವಿರುದ್ಧವೇ ಅವಿಶ್ವಾಸ
     ವಿರೋಧದ ನಡುವೆಯೇ ಆತುರದಲ್ಲಿ ಮಸೂದೆಯನ್ನು ಧ್ವನಿ ಮತಕ್ಕೆ ಹಾಕಿದ ಉಪ ಸಭಾಪತಿ ಹರಿವಂಶ‌ ವಿರುದ್ಧ ಅವಿಶ್ವಾಸ ಮಂಡಿಸುವುದಾಗಿ ವಿರೋಧ ಪಕ್ಷಗಳು ಹೇಳಿದವು. ಮಸೂದೆಗಳಿಗೆ ಅಂಗೀಕಾರ ನೀಡುವ ಉದ್ದೇಶದಿಂದ ಉಪ ಸಭಾಪತಿಯವರು ಮಧ್ಯಾಹ್ನ ಒಂದು ಗಂಟೆಯ ನಂತರವೂ ಕಲಾಪ ನಡೆಸಲು ಅವಕಾಶ ನೀಡಿದ್ದಾರೆ ಎಂದು ಕಾಂಗ್ರೆಸ್‌ ಮುಖ್ಯ ಸಚೇತಕ ಜೈರಾಂ ರಮೇಶ್‌ ಆರೋಪಿಸಿದ್ದಾರೆ. 

            ಬಿಜೆಪಿ ಕಿಡಿ
     ರಾಜ್ಯಸಭೆಯ ಕಲಾಪಗಳಿಗೆ ಅಡ್ಡಿಪಡಿಸಿದ ವಿರೋಧ ಪಕ್ಷಗಳ ನಡೆಯನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ. ಮಸೂದೆ ವಿರೋಧಿಸಲು ಅಗತ್ಯ ಸಂಖ್ಯಾಬಲ ಇಲ್ಲ ಎಂದು ಗೊತ್ತಿದ್ದ ವಿರೋಧ ಪಕ್ಷಗಳು ‘ಗೂಂಡಾಗಿರಿ’ ಮೂಲಕ ‘ಪ್ರಜಾತಂತ್ರದ ಕಗ್ಗೊಲೆ’ ಮಾಡಿವೆ ಎಂದು ಕೃಷಿ ಸಚಿವ ತೋಮರ್‌ ಟೀಕಿಸಿದ್ದಾರೆ. ಸರ್ಕಾರದ ಸರ್ವಾಧಿಕಾರಿ ಧೋರಣೆ ಸದನದಲ್ಲೂ ಮುಂದುವರಿದಿದೆ ಎಂದು ವಿರೋಧ ಪಕ್ಷಗಳು ತಮ್ಮ ಪ್ರತಿಭಟನೆಯನ್ನು ಸಮರ್ಥಿಸಿಕೊಂಡಿವೆ. ಈ ಮಸೂದೆಗಳು ರೈತರ ಮರಣಶಾಸನ ಎಂದು ಕಾಂಗ್ರೆಸ್‌ ಸಂಸದ ಪ್ರತಾಪ್‌ ಸಿಂಗ್‌ ಆರೋಪಿಸಿದರು. ಅಲ್ಲದೆ ಸದನದಲ್ಲಿ ಅಶಿಸ್ತು ಪ್ರದರ್ಶಿಸಿದ ಸದಸ್ಯರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries