ಕೊಚ್ಚಿ: ತಾಯಿ ಬೆಳಿಗ್ಗೆ ಇತರರ ಮನೆಗೆ ಕೆಲಸಕ್ಕೆ ಹೋಗುತ್ತಾರೆ. ಕೂಡಲೇ ಅವರ 10 ವರ್ಷದ ಅಮೀಶ್ ಕೂಡ ತನ್ನ ಚೀಲವನ್ನು ಹೊತ್ತುಕೊಂಡು ಅದರಲ್ಲಿ ಅಕ್ಕ ಅಭಿರಾಮಿ ತುಂಬಿಸಿದ ಹಪ್ಪಳವನ್ನು ಮಾರಲು ಹೋಗುತ್ತಾನೆ. ತನ್ನ ಸೈಕಲ್ ನಲ್ಲಿ ಹಪ್ಪಳ ಹಪ್ಪಳ ಎಂದು ಹೇಳಿ ಜನರಿಗೆ ಒಂದಿಷ್ಟು ಹಪ್ಪಳ ವನ್ನು ಮಾರಿ ಮಧ್ಯಾರ್ಹ್ನ ಮನೆಗೆ ಮರಳಿ ಸ್ವಲ್ಪ ಸಮಯ ವಿಶ್ರಾಂತಿ ಪಡೆದು ಬಳಿಕ ಒಂದು ಗಂಟೆ ಆನ್ಲೈನ್ ತರಗತಿಗೆ ಹಾಜರಾಗುತ್ತಾನೆ. ಮತ್ತೆ ಉಚಿತ ಸಮಯ ಸಿಕ್ಕರೆ ತನ್ನ ಸೈಕಲ್ ತೆಗೆದು ಪುನಃ ಸಂಜೆಯವರೆಗೆ ಹಪ್ಪಳ ಮಾರಾಟ ಮಾಡಲು ತೊಡಗುತ್ತಾನೆ.
ಈ ಕೋಮಲ ವಯಸ್ಸಿನಲ್ಲಿ ಯಾಕೆ ಇಷ್ಟೊಂದು ಕಷ್ಟ ಪಟ್ಟು ಕೆಲಸ ಮಾಡುತ್ತಿ ಎಂದು ಅವನೊಡನೆ ಕೇಳಿದಾಗ "ಅಪ್ಪ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ ಮತ್ತು ಅವರಿಗೆ ಹಾಸಿಗೆ ಖರೀದಿ ಮಾಡಬೇಕು, ಅವರ ಸಾಲವನ್ನು ತೀರಿಸಬೇಕಾಗಿದೆ ಎಂದು ಉತ್ತರಿಸಿದ.
ಪರವೂರ್ ಮೂಲದ ಶಾಜಿ ಮತ್ತು ಪ್ರಮೀಲಾ ಅವರ ಪುತ್ರ ಅಮೀಶ್ ತನ್ನ ತಂದೆ ಸೈಕಲ್‌ನಿಂದ ಬಿದ್ದು ಹಾಸಿಗೆ ಹಿಡಿದ ನಂತರ ಹಪ್ಪಳ ಮಾರಾಟ ಮಾಡಲು ಪ್ರಾರಂಭಿಸಿದ. ಶಾಜಿ ತೆಂಗಿನ ಮರ ಹತ್ತುವವನು. ಒಂದು ವರ್ಷದ ಹಿಂದೆ ಅಪಘಾತದಲ್ಲಿ ಬೆನ್ನುಮೂಳೆಯ ಗಾಯವಾಗಿತ್ತು. ಅಮೀಶ್ ಪೋಷಕರಿಗೆ ತಿಳಿಸದೆ ಹಪ್ಪಳ ಮಾರಾಟ ಮಾಡಲು ಪ್ರಾರಂಭಿಸಿದ.
ಅಮೀಶ್ ತನ್ನ ತಂದೆಗೆ ಹಾಸಿಗೆ ಖರೀದಿಸಲು ಹಪ್ಪಳ ಮಾರಾಟ ಮಾಡಲು ಪ್ರಾರಂಭಿಸಿದ. ಹುಡುಗನ ಆಸೆ ತಿಳಿದ ಮೇಲೆ, ದಾನಿಗಳು ಅವರಿಗೆ ಹಾಸಿಗೆಯನ್ನು ತೆಗೆದು ಕೊಟ್ಟಿದ್ದಾರೆ ಎಂದು ತಾಯಿ ಪ್ರಮೀಳಾ ಹೇಳಿದರು.
ಅಮ್ಮ ನೆರೆ ಹೊರೆಯವರೊಂದಿಗೆ ಸ್ವಲ್ಪ ಹಣಸಾಲ ಪಡೆದಿದ್ದಾರೆ. ಹಣ ನೀಡದೆ ಯಾರೂ ನಮಗೆ ಏನನ್ನೂ ಕೊಡುವುದಿಲ್ಲ. ಅಂಗಡಿಯವರ ಸಾಲ ಮರು ಪಾವತಿಸದೇ ಹೋದರೆ ಅವರು ಹಿಂದೆ ಕಳುಹಿಸುತ್ತಾರೆ. ಅದಕ್ಕಾಗಿ ಹಣ ಬೇಕೇ ಬೇಕು. ಅದಕ್ಕಾಗಿ ನಾನು ಈ ಕೆಲಸಕ್ಕೆ ಇಳಿದೆ ಎಂದು ನಗು ಮುಖದೊಂದಿಗೆ ಮುಗ್ದವಾಗಿ ಅಮೀಶ್ ಹೇಳುತ್ತಾನೆ.
ಮಗನ ಈ ಕಷ್ಟ ನೋಡಿ ತಂದೆ ಶಾಜಿ ದುಃಖ ಪಡುತ್ತಾರೆ. ನಾನು ಸಂಪೂರ್ಣ ಕುಸಿದು ಹೋಗಿದ್ದೇನೆ. ನನಗೆ ದುಡಿಯಲು ಸಾಧ್ಯವಿಲ್ಲ. ನನ್ನ ಮಗನ ಕೆಲಸ ಹೃದಯಸ್ಪರ್ಶಿಯಾಗಿದೆ. ಅಪ್ಪ ಚಿಂತಿಸಬೇಡಿ, ಹಪ್ಪಳ ಮಾರಿಯೂ ನಾನು ಚೆನ್ನಾಗಿ ಕಲಿಯುತ್ತೇನೆ ಎಂದು ಅವನು ಹೇಳುತ್ತಾನೆ ಎನ್ನುತ್ತಾರೆ ಶಾಜಿ.





