ಕಾಸರಗೋಡು: ಜಿಲ್ಲಾಧಿಕಾರಿ ಕಚೇರಿ(ಕಲೆಕ್ಟರೇಟ್) ಯ ಎದುರು ಗಾಂಧಿಯ ಪ್ರತಿಮೆಯನ್ನು ನಿರ್ಮಿಸುವ ಪ್ರಯತ್ನ ಎರಡು ದಶಕಗಳ ನಂತರ ಕೊನೆಗೂ ಸಾಕಾರಗೊಂಡಿದ್ದು ಮೊನ್ನೆ ಗಾಂಧಿ ಜಯಂತಿಯಂದು ಲೋಕಾರ್ಪಣೆಗೊಂಡಿತು. ಆದರೆ ಕೊನೆಗೂ ಕಂಚಿನ ಪ್ರತಿಮೆ ನಿರ್ಮಿಸಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ.
ಈ ಪ್ರತಿಮೆಯನ್ನು ಖ್ಯಾತ ಶಿಲ್ಪಿ ಉಣ್ಣಿ ಕಾನಾಯಿ ಅವರು 22 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುತ್ತಿದ್ದಾರೆ. ಕಂಚಿನ ಪ್ರತಿಮೆಯನ್ನು ಪಯ್ಯನ್ನೂರಿನ ಉಣ್ಣಿ ಕಾನಾಯಿ ಅವರ ಮನೆಯಲ್ಲಿ ಪೂರ್ಣಗೊಳಿಸಲಾಗಿದೆ. 12 ಅಡಿ ಎತ್ತರದ ಪ್ರತಿಮೆಯಲ್ಲಿ ನಾಲ್ಕು ಅಡಿ ಪೀಠವಿದೆ. ಇದು ರಾಜ್ಯದ ಅತಿ ಎತ್ತರದ ಪ್ರತಿಮೆಯಾಗಿದೆ.
ಎರಡು ದಶಕಗಳ ಕನಸು!:
1997 ರಲ್ಲಿ ಕಾಸರಗೋಡು ಕಲೆಕ್ಟರೇಟ್‍ನಲ್ಲಿ ಗಾಂಧಿಯವರ ಕಂಚಿನ ಪ್ರತಿಮೆಯನ್ನು ನಿರ್ಮಿಸಲು ನಿರ್ಧರಿಸಲಾಗಿತ್ತು. ಸ್ವಾತಂತ್ರ್ಯದ ಸುವರ್ಣ ಮಹೋತ್ಸವವನ್ನು ಆಚರಿಸಲು ಕರೆಯಲಾದ ಸಭೆಯಲ್ಲಿ ಅಂದಿನ ಉದುಮ ಶಾಸಕ ಮತ್ತು ಕಾಂಗ್ರೆಸ್ ಮುಖಂಡ ಕೆ.ಪಿ.ಕುಂಞÂ ಕಣ್ಣನ್ ಅವರು ಈ ವಿಚಾರವನ್ನು ಮಂಡಿಸಿದ್ದರು. ಜಾತ್ಯತೀತತೆಯನ್ನು ಕಾಪಾಡಿಕೊಳ್ಳಲು ಹೋರಾಡಿದ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ನಿರ್ಮಿಸಬೇಕೆಂದು ಸೂಚಿಸಲಾಯಿತು. ಸಭೆಯ ಅನುಮೋದನೆಯೊಂದಿಗೆ ಮುಖ್ಯಮಂತ್ರಿ ಎ.ಕೆ.ಆಂಟನಿ ಇದಕ್ಕಾಗಿ ಕಲೆಕ್ಟರೇಟ್‍ನಲ್ಲಿ ಭೂಮಿ ಮಂಜೂರು ಮಾಡಿದರು. ಪ್ರತಿಮೆಗೆ ಜಿಲ್ಲೆಯವರೇ ಆದ, ವಿಶ್ವಪ್ರಸಿದ್ಧ ಶಿಲ್ಪಿ ಕಾನಾಯಿ ಕುಂಞÂ ರಾಮನ್ ಅವರನ್ನು ಮೊದಲು ಸಂಪರ್ಕಿಸಲಾಯಿತು. ಒಪ್ಪಂದವು 50 ಲಕ್ಷ ರೂ.ಗಳಾಗಿದ್ದರೂ, ಮೊತ್ತ ವಿಳಂಬವಾಗಿದ್ದರಿಂದ ನಿರ್ಮಾಣವು ತಡವಾಗತೊಡಗಿತ್ತು. ಪ್ರತಿಮೆಯ ನಿರ್ಮಾಣದ ಬಗ್ಗೆ ಕೆಲಸ ಮಾಡಲು ಸಮಿತಿ ರಚಿಸಲಾಯಿತು. ಉದ್ಯಾನ ಸೇರಿದಂತೆ ಆರು ಅಡಿ ಎತ್ತರದ ಪ್ಲಾಟ್‍ಫಾರ್ಮ್ ನಿರ್ಮಿಸಲಾಯಿತು. ಬಳಿಕ ಬಂದ ಎಲ್.ಡಿ.ಎಫ್ ಸರ್ಕಾರ ಪ್ರತಿಮೆಗೆ ಧನಸಹಾಯವನ್ನು ಮಂಜೂರುಗೊಳಿಸುವ ಫೈಲ್ ಅನ್ನು ಸ್ವೀಕರಿಸಿತು. ಆದರೆ ತಾಂತ್ರಿಕ ದೋಷದಿಂದ ಮೊಟಕುಗೊಂಡಿತು.
ಗಾಂಧಿಯ 150 ನೇ ವಾರ್ಷಿಕೋತ್ಸವದಂದು ನಿರ್ಮಾಣ ಪುನರಾರಂಭ:
ಕಳೆದ ವರ್ಷ, ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆಗೆ ಸಂಬಂಧಿಸಿದಂತೆ, ಕಂಚಿನ ಪ್ರತಿಮೆಯ ನಿರ್ಮಾಣಕ್ಕೆ ಚಿಂತನೆ ನಡೆಸಲಾಯಿತು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ಆಸಕ್ತಿಯೊಂದಿಗೆ ನೂತನ ಯೋಜನೆಯೊಂದು ಸಿದ್ದಪಡಿಸಿ ಮರು ಚಾಲನೆ ನೀಡಲಾಯಿತು. ಕಳೆದ ನವೆಂಬರ್ ನಲ್ಲಿ ಸ್ವೀಕರಿಸಿದ ಎರಡು ಗುತ್ತಿಗೆಯಲ್ಲಿ ಬಿಡ್ ಗೆದ್ದ ಉಣ್ಣಿ ಕಾನಾಯಿ ಅತಿ ಕಡಿಮೆ ಬಿಡ್ಡುದಾರರಾಗಿ ಪ್ರತಿಮೆ ಸಾಕಾರಕ್ಕೆ ಮುಂದಾದರು. ಹೀಗಾಗಿ 22 ಲಕ್ಷ ರೂ.ಗಳಿಗೆ ನಿರ್ಮಾಣ ಅನುಮತಿ ನೀಡಲಾಯಿತು. ಪಂಚಾಯಿತಿಗಳ ಸ್ವಂತ ನಿಧಿಯಿಂದ ದೇಣಿಗೆ ಸ್ವೀಕರಿಸುವ ಮೂಲಕ ಈ ಮೊತ್ತವನ್ನು ಶೇಖರಿಸಲಾಯಿತು. ಆದರೆ ಕಂಚಿನ ಪ್ರತಿಮೆಯಾಗಿರುವುದರಿಂದ ನಿರ್ಮಾಣಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಶಿಲ್ಪಿ ನಿರ್ಮಾಣ ಸಮಿತಿಗೆ ತಿಳಿಸಿದ್ದರು. ಶಿಲ್ಪಿ ಕೋರಿದಂತೆ ಕಲೆಕ್ಟರ್ ಮಾರ್ಚ್ 12 ರವರೆಗೆ ಸಮಯವನ್ನು ವಿಸ್ತರಿಸಿದರು.
ಕಂಚಿನ ಬದಲು ಫೈಬರ್ ಗ್ಲಾಸ್!:
ಕಂಚಿನ ಪ್ರತಿಮೆ ಬರಲು ತಿಂಗಳುಗಳು ಬೇಕಾಗಬಹುದು ಎಂದು ಶಿಲ್ಪಿ ತಿಳಿಸಿದ್ದರಿಂದ ನಿರ್ಮಾಣ ಸಮಿತಿಯು ಸದ್ಯಕ್ಕೆ ಕಂಚಿನ ಪ್ರತಿಮೆಯ ಬದಲು ಫೈಬರ್ ಪ್ರತಿಮೆಯನ್ನು ಮಾಡಲು ನಿರ್ಧರಿಸಿತು. ಪ್ರತಿಮೆಯ ನಿರ್ಮಾಣವನ್ನು ಜನವರಿ 30 ರಂದು ಪೂರ್ಣಗೊಳಿಸಲು ಶಿಲ್ಪಿಗೆ ಒಪ್ಪಂದ ಮಾಡಿಕೊಳ್ಳಲಾಯಿತು. ಮುಂದಿನ ಮೂರು ತಿಂಗಳಲ್ಲಿ ಶಿಲ್ಪಿ ಉಣ್ಣಿ ಕಾನಾಯಿ ಅವರು 2.5 ಲಕ್ಷ ರೂ.ಗಳ ವೆಚ್ಚದಲ್ಲಿ ಫೈಬರ್ ಪ್ರತಿಮೆಯನ್ನು ನಿರ್ಮಿಸಿದರು. ಇದು ವಿವಾದಕ್ಕೆ ನಾಂದಿ ಹಾಡಿತು. ಜನವರಿ 30 ರಂದು ಫೈಬರ್ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ ಎಂದು ತನಗೆ ತಿಳಿದಿಲ್ಲ ಎಂದು ಸಚಿವ ಇ ಚಂದ್ರಶೇಖರನ್ ಬಹಿರಂಗವಾಗಿ ಹೇಳಿದಾಗ ವಿವಾದ ಭುಗಿಲೆದ್ದಿತು.
ಕೋವಿಡ್ ನಿಯಂತ್ರಣದಿಂದ ನಿರ್ಮಾಣಕ್ಕೆ ಅಡ್ಡಿ:
ಕಳೆದ ಆಗಸ್ಟ್‍ನಲ್ಲಿ ಪ್ರತಿಮೆ ನಿರ್ಮಿಸುವುದಾಗಿ ಶಿಲ್ಪಿ ಸಮಿತಿಗೆ ಭರವಸೆ ನೀಡಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಲಾಕ್ ಡೌನ್‍ನಿಂದಾಗಿ ಅಗತ್ಯ ಕಚ್ಚಾವಸ್ತುಗಳ ಸರಬರಾಜು ವಿಳಂಬದಿಂದ ಅದೂ ಸಾಕಾರಗೊಂಡಿಲ್ಲ. ಆದರೆ, ಗಾಂಧಿ ಜಯಂತಿಯ ವೇಳೆಗಾಗುವಾಗ ಪ್ರತಿಮೆಯನ್ನು ನಿರ್ಮಿಸಲು ನಿರ್ಧರಿಸಲಾಯಿತು, ಆದರೆ ಕೋವಿಡ್‍ನಿಂದಾಗಿ ಶಿಲ್ಪಿಗಳು ಕ್ವಾರಂಟೈನ್ ಗೆ ಹೋಗಬೇಕಾಗಿ ಬಂದದ್ದರಿಂದ ಪ್ರತಿಮೆಯ ಸ್ಥಾಪನೆ ವಿಳಂಬವಾಯಿತು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಅವರು ಗಾಂಧಿ ಜಯಂತಿಯಂದು ವಿದ್ಯಾನಗರ ಕಲೆಕ್ಟರೇಟ್ ಮುಂದೆ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ಪ್ರತಿಮೆಯನ್ನು ಈ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಶಿಲ್ಪಿ ಉಣ್ಣಿ ಕಾನಾಯಿ ಸಮರಸಸುದ್ದಿಗೆ ಹೇಳಿರುವರು.








