ಅಬುಧಾಬಿ: ಸೂರ್ಯಕುಮಾರ್ ಯಾದವ್ (79*ರನ್, 47 ಎಸೆತ, 11 ಬೌಂಡರಿ, 2 ಸಿಕ್ಸರ್) ಸಮಯೋಚಿತ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಸಂಘಟಿತ ಪರಿಶ್ರಮದ ನೆರವಿನಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್-13ರಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ರೋಹಿತ್ ಶರ್ಮ ಬಳಗ ಮಂಗಳವಾರ ನಡೆದ ಟೂರ್ನಿಯ ತನ್ನ 6ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ವಿರುದ್ಧ 57 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿತು.
ಶೇಕ್ ಜಯೆದ್ ಕ್ರೀಡಾಂಗಣದಲ್ಲಿ ಟೂರ್ನಿಯ 20ನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಮುಂಬೈ ತಂಡ 4 ವಿಕೆಟ್‌ಗೆ 193 ರನ್ ಪೇರಿಸಿತು. ಉತ್ತಮ ಆರಂಭದ ಬಳಿಕ ಮಧ್ಯಮ ಓವರ್‌ಗಳಲ್ಲಿ ಕುಸಿದ ಮುಂಬೈ, ಸ್ಲಾಗ್ ಓವರ್‌ಗಳಲ್ಲಿ ಮತ್ತೆ ಬಿರುಸಿನ ಆಟವಾಡಿ 200ರ ಸನಿಹ ತಲುಪಿತು. ಪ್ರತಿಯಾಗಿ ರಾಜಸ್ಥಾನ ರಾಯಲ್ಸ್ ತಂಡ ಜೋಸ್ ಬಟ್ಲರ್ (70 ರನ್, 44 ಎಸೆತ, 4 ಬೌಂಡರಿ, 5 ಸಿಕ್ಸರ್) ಪ್ರತಿರೋಧದ ನಡುವೆಯೂ, ವೇಗಿಗಳಾದ ಜಸ್‌ಪ್ರೀತ್ ಬುಮ್ರಾ (20ಕ್ಕೆ 4), ಟ್ರೆಂಟ್ ಬೌಲ್ಟ್ (26ಕ್ಕೆ 2) ದಾಳಿಗೆ ನಲುಗಿ 18.1 ಓವರ್‌ಗಳಲ್ಲಿ 136 ರನ್‌ಗೆ ಆಲೌಟ್ ಆಯಿತು.
ಕುಸಿದ ರಾಜಸ್ಥಾನ ರಾಯಲ್ಸ್
ಮುಂಬೈ ತಂಡ ಕೊನೇ 3 ಓವರ್‌ಗಳಲ್ಲಿ 51 ರನ್ ದೋಚಿದರೆ, ರಾಯಲ್ಸ್ ಇನಿಂಗ್ಸ್‌ನ ಮೊದಲ 3 ಓವರ್ (12 ರನ್‌ಗೆ 3 ವಿಕೆಟ್) ಇದಕ್ಕೆ ವ್ಯತಿರಿಕ್ತವಾಗಿತ್ತು. ಯುವ ಆರಂಭಿಕ ಯಶಸ್ವಿ ಜೈಸ್ವಾಲ್ ಮತ್ತೊಮ್ಮೆ ಸಿಕ್ಕ ಅವಕಾಶದಲ್ಲಿ ಖಾತೆ ತೆರೆಯಲು ಕೂಡ ಯಶಸ್ವಿಯಾಗದೆ ಎರಡೇ ಎಸೆತಗಳಲ್ಲಿ ಬೌಲ್ಟ್‌ಗೆ ವಿಕೆಟ್ ಒಪ್ಪಿಸಿದರು. ಮರು ಓವರ್‌ನಲ್ಲಿ ನಾಯಕ ಸ್ಟೀವನ್ ಸ್ಮಿತ್ (6) ಬುಮ್ರಾ ಎಸೆತದಲ್ಲಿ ಕೀಪರ್‌ಗೆ ಕ್ಯಾಚ್ ನೀಡಿದರು. ಬಳಿಕ ಬಂದ ಸಂಜು ಸ್ಯಾಮ್ಸನ್ ಕೂಡ ಖಾತೆ ತೆರೆಯದೆ ನಿರ್ಗಮಿಸುವುದರೊಂದಿಗೆ ರಾಯಲ್ಸ್ ತತ್ತರಿಸಿತು. ಬಟ್ಲರ್ ಒಂದೆಡೆ ಸಿಡಿದರೂ, ಅವರಿಗೆ ಸಮರ್ಥ ಸಾಥ್ ಸಿಗಲಿಲ್ಲ. ಇನಿಂಗ್ಸ್‌ನ 14ನೇ ಓವರ್‌ನಲ್ಲಿ ಪ್ಯಾಟಿನ್‌ಸನ್‌ಗೆ ಬಟ್ಲರ್ ವಿಕೆಟ್ ಒಪ್ಪಿಸಿದಾಗ ರಾಯಲ್ಸ್ ಸೋಲು ಖಚಿತಗೊಂಡಿತು.
ಡಿಕಾಕ್-ರೋಹಿತ್ ಭದ್ರ ಬುನಾದಿ
ಕಳೆದ ಪಂದ್ಯದ ಉತ್ತಮ ಲಯ ಮುಂದುವರಿಸಿದ ಕ್ವಿಂಟನ್ ಡಿಕಾಕ್ (23 ರನ್, 15 ಎಸೆತ, 3 ಬೌಂಡರಿ, 1 ಸಿಕ್ಸರ್) ಮತ್ತು ನಾಯಕ ರೋಹಿತ್ ಶರ್ಮ (35 ರನ್, 23 ಎಸೆತ, 2 ಬೌಂಡರಿ, 3 ಸಿಕ್ಸರ್) ಪವರ್‌ಪ್ಲೇ ಓವರ್‌ಗಳ ಲಾಭವೆತ್ತಿ ಮೊದಲ ವಿಕೆಟ್‌ಗೆ 29 ಎಸೆತಗಳಲ್ಲೇ 49 ರನ್ ಕೂಡಿಹಾಕಿದರು. ಆಗ ಡಿಕಾಕ್‌ಗೆ ಡಗೌಟ್ ದಾರಿ ತೋರಿದ ಕಾರ್ತಿಕ್ ತ್ಯಾಗಿ ಐಪಿಎಲ್‌ನಲ್ಲಿ ಚೊಚ್ಚಲ ವಿಕೆಟ್ ಸಂಪಾದಿಸಿದರು. ನಂತರ ಕಣಕ್ಕಿಳಿದ ಸೂರ್ಯಕುಮಾರ್, ರೋಹಿತ್ ಜತೆ 39 ರನ್ ಕೂಡಿಹಾಕಿದಾಗ ಶ್ರೇಯಸ್ ಗೋಪಾಲ್ ಡಬಲ್ ಶಾಕ್ ನೀಡಿದರು. ಒಂದೆಡೆ ಸೂರ್ಯಕುಮಾರ್ ಭದ್ರವಾಗಿ ನಿಂತಿದ್ದರೂ, ಮತ್ತೊಂದೆಡೆ ವಿಕೆಟ್ ಬೀಳುತ್ತಿದ್ದ ಕಾರಣ ಮುಂಬೈ ರನ್‌ಗತಿ ಕುಸಿತ ಕಂಡಿತು. ಬಡ್ತಿ ಪಡೆದು ಬಂದ ಕೃನಾಲ್ ಪಾಂಡ್ಯ 17 ಎಸೆತಗಳಲ್ಲಿ 12 ರನ್ ಗಳಿಸಿ ಪರದಾಡಿದರು. 14ರಿಂದ 17ನೇ ಓವರ್ ನಡುವೆ 4 ಓವರ್‌ಗಳಲ್ಲಿ 27 ರನ್‌ಗಳಷ್ಟೇ ದಾಖಲಾದವು.
ಸೂರ್ಯ-ಹಾರ್ದಿಕ್ ಸ್ಫೋಟಕ ಆಟ
ಮಧ್ಯಮ ಕ್ರಮಾಂಕದ ಕುಸಿತದಿಂದಾಗಿ 160-170ರ ಮೊತ್ತಕ್ಕೆ ತೃಪ್ತಿಪಡುವತ್ತ ಸಾಗಿದ್ದ ಮುಂಬೈ ತಂಡ, ಸೂರ್ಯಕುಮಾರ್ ಮತ್ತು ಹಾರ್ದಿಕ್ ಪಾಂಡ್ಯ (30*ರನ್, 19 ಎಸೆತ, 2 ಬೌಂಡರಿ, 1 ಸಿಕ್ಸರ್) ಜೋಡಿ ಕೊನೇ 3 ಓವರ್‌ಗಳಲ್ಲಿ ಆಡಿದ ಸ್ಫೋಟಕ ಆಟದಿಂದ ಬೃಹತ್ ಮೊತ್ತ ಪೇರಿಸುವಲ್ಲಿ ಸಲವಾಯಿತು. ಇವರಿಬ್ಬರು ಟಾಮ್ ಕರ‌್ರನ್, ಜ್ರೋಾ ಆರ್ಚರ್ ಮತ್ತು ಅಂಕಿತ್ ರಜಪೂತ್ ಎಸೆದ ಪಂದ್ಯದ 18, 19 ಮತ್ತು 20ನೇ ಓವರ್‌ನಲ್ಲಿ ಕ್ರಮವಾಗಿ 19, 15 ಮತ್ತು 17 ರನ್ ಕಸಿದರು. ಇದರಿಂದ ಮುಂಬೈ ಕೊನೇ 3 ಓವರ್‌ಗಳಲ್ಲಿ 51 ರನ್ ಕಸಿಯಿತು. ಸೂರ್ಯ-ಹಾರ್ದಿಕ್ ಜೋಡಿ ಮುರಿಯದ 5ನೇ ವಿಕೆಟ್‌ಗೆ 38 ಎಸೆತಗಳಲ್ಲಿ 76 ರನ್ ದೋಚಿತು.
ಶ್ರೇಯಸ್‌ಗೆ ತಪ್ಪಿದ ಹ್ಯಾಟ್ರಿಕ್
ಕನ್ನಡಿಗ ಶ್ರೇಯಸ್ ಗೋಪಾಲ್ ಐಪಿಎಲ್‌ನಲ್ಲಿ 2ನೇ ಬಾರಿ ಹ್ಯಾಟ್ರಿಕ್ ಸಾಧನೆ ಮಾಡುವುದನ್ನು ತಪ್ಪಿಸಿಕೊಂಡರು. ಶ್ರೇಯಸ್ ಎಸೆದ ಇನಿಂಗ್ಸ್‌ನ ಮೊದಲೆರಡು ಎಸೆತಗಳಲ್ಲಿ ಕ್ರಮವಾಗಿ ರೋಹಿತ್ ಶರ್ಮ ಲಾಂಗ್‌ಆನ್‌ನಲ್ಲಿ ರಾಹುಲ್ ತೆವಾಟಿಯಾಗೆ ಕ್ಯಾಚ್ ನೀಡಿದರೆ, ಇಶಾನ್ ಕಿಶನ್ ಎಕ್ಸ್‌ಟ್ರಾ ಕವರ್‌ನಲ್ಲಿ ಸ್ಯಾಮ್ಸನ್ ಹಿಡಿದ ಕ್ಯಾಚ್‌ಗೆ ಔಟಾದರು. 3ನೇ ಎಸೆತವನ್ನು ಡಿೆಂಡ್ ಮಾಡಿದ ಸೂರ್ಯಕುಮಾರ್, ಶ್ರೇಯಸ್‌ಗೆ ಹ್ಯಾಟ್ರಿಕ್ ವಿಕೆಟ್ ಸಿಗದಂತೆ ಎಚ್ಚರಿಕೆ ವಹಿಸಿದರು.
ಉತ್ತಪ್ಪ ಔಟ್, ತ್ಯಾಗಿ ಪದಾರ್ಪಣೆ
ಮುಂಬೈ ತಂಡ ಸತತ 5ನೇ ಪಂದ್ಯದಲ್ಲೂ ಬದಲಾವಣೆ ಕಾಣದಿದ್ದರೆ, ರಾಜಸ್ಥಾನ ತಂಡ 3 ಬದಲಾವಣೆಯೊಂದಿಗೆ ಕಣಕ್ಕಿಳಿಯಿತು. ವೈಲ್ಯ ಕಾಣುತ್ತಿದ್ದ ಅನುಭವಿ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ, ವೇಗಿ ಜೈದೇವ್ ಉನಾದ್ಕತ್ ಮತ್ತು ರಿಯಾನ್ ಪರಾಗ್ ತಂಡದಿಂದ ಹೊರಬಿದ್ದರು. ಯಶಸ್ವಿ ಜೈಸ್ವಾಲ್ ಮತ್ತು ಅಂಕಿತ್ ರಜಪೂತ್ ತಂಡಕ್ಕೆ ಮರಳಿದರೆ, 19 ವರ್ಷದ ಮಧ್ಯಮ ವೇಗಿ ಕಾರ್ತಿಕ್ ತ್ಯಾಗಿ ಐಪಿಎಲ್‌ಗೆ ಪದಾರ್ಪಣೆ ಮಾಡುವ ಅವಕಾಶ ಪಡೆದರು.





