ಲಕ್ನೋ: ದೇಶಾದ್ಯಂತ ಸುದ್ದಿಯಾಗಿರುವ ಉತ್ತರ ಪ್ರದೇಶದ ಹಾಥ್ರಸ್ ಅತ್ಯಾಚಾರ ಪ್ರಕರಣದಲ್ಲಿ ಸಾವನ್ನಪ್ಪಿದ ಯುವತಿಯ ಮನೆಗೆ ಭೇಟಿ ಮಾಡಲು ಯತ್ನಿಸಿದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಮಾರ್ಗಮಧ್ಯೆಯೇ ಉ.ಪ್ರ. ಪೊಲೀಸರು ತಡೆದು ವಶಕ್ಕೆ ಪಡೆದ ಘಟನೆ ನಡೆದಿದೆ. ಕಾಂಗ್ರೆಸ್ ನಾಯಕರನ್ನು ಡೀಟೈನ್ ಮಾಡಿ ಜೀಪ್ನಲ್ಲಿ ಕರೆದೊಯ್ದ ಪೊಲೀಸರು ಗೆಸ್ಟ್ ಹೌಸ್ವೊಂದರಲ್ಲಿ ಇರಿಸಿದ್ದರು. ಸ್ವಲ್ಪ ಹೊತ್ತಿನ ನಂತರ ಅವರಿಬ್ಬರನ್ನು ದೆಹಲಿಗೆ ವಾಪಸ್ ಕರೆದುಕೊಂಡು ಹೋಗಲಾಗಿದೆ. ಉತ್ತರ ಪ್ರದೇಶ ಪೊಲೀಸರು ತಮ್ಮನ್ನು ತಡೆಯಲು ಬಂದಾಗ ಆದ ನೂಕಾಟದ ವೇಳೆ ರಾಹುಲ್ ಗಾಂಧಿ ಕೆಳಗೆ ಬಿದ್ದ ಘಟನೆಯೂ ನಡೆಯಿತು.
ಇದೇ ವೇಳೆ, ಹಾಥ್ರಸ್ ರೇಪ್ ಸಂತ್ರಸ್ತೆಯ ಪೋಷಕರನ್ನು ಭೇಟಿ ಮಾಡಲು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಗೆ ಅವಕಾಶ ನೀಡದ್ದಕ್ಕೆ ಕಾಂಗ್ರೆಸ್ ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ. ಇದನ್ನು ಆಕ್ಷೇಪಿಸಿ ಉತ್ತರ ಪ್ರದೇಶ ರಾಜ್ಯಾದ್ಯಂತ ತತ್ಕ್ಷಣದಿಂದಲೇ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. “ನಮ್ಮ ನಾಯಕರ ಜೊತೆ ಪೊಲೀಸರು ತೋರಿದ ಇಂಥ ವರ್ತೆನಯನ್ನು ಕಾಂಗ್ರೆಸ್ ಕಾರ್ಯಕರ್ತರು ಸಹಿಸುವುದಿಲ್ಲ. ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಈಗಿನಿಂದಲೇ ಧರಣಿ ನಡೆಸಲು ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ ನಿರ್ಧರಿಸಿದೆ” ಎಂದು ಕಾಂಗ್ರೆಸ್ ನಾಯಕ ಸಿದ್ಧಾರ್ಥ್ ಪ್ರಿಯ್ ಶ್ರೀವಾಸ್ತವ ಹೇಳಿದ್ದಾರೆ. ಈ ಸಂಬಂಧ ಅವರು ಈಗಾಗಲೇ ಈ ರಾಜ್ಯದ ಎಲ್ಲಾ ಜಿಲ್ಲೆ ಮತ್ತು ನಗರದ ಕಾಂಗ್ರೆಸ್ ಘಟಕಗಳಿಗೆ ಪತ್ರ ಬರೆದು ನಿವೇದಿಸಿದ್ದಾರೆ.
ಉತ್ತರ ಪ್ರದೇಶ ಹಾಥ್ರಸ್ ಜಿಲ್ಲೆಯ ಗ್ರಾಮವೊಂದರಲ್ಲಿ ಸೆ. 14ರಂದು 20 ವರ್ಷದ ದಲಿತ ಯುವತಿಯನ್ನು ನಾಲ್ವರು ವ್ಯಕ್ತಿಗಳು ಅತ್ಯಾಚಾರ ಎಸಗಿದ ಆರೋಪ ಇದೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ಆಕೆಯ ಮೇಲೆ ಈ ನಾಲ್ವರು ಪರಿಚಿತರು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದ್ದರು. ಈಕೆಯ ನಾಲಗೆ ಕತ್ತರಿಸಿತ್ತು. ಕೈ ಕಾಲು ಸ್ವಾಧೀನ ಕಳೆದುಕೊಂಡು ಕೆಲ ದಿನಗಳ ಜೀವನ್ಮರಣ ಹೋರಾಟದ ಬಳಿಕ ಈಕೆ ಅಸುನೀಗಿದ್ದಳು. ಈ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹಾಗೆಯೇ, ಸಾವನ್ನಪ್ಪಿದ ಆ ಯುವತಿಯ ಮೃತದೇಹವನ್ನು ಪೊಲೀಸರು ಬಲವಂತವಾಗಿ ರಾತ್ರೋರಾತ್ರಿ ಅಂತ್ಯಕ್ರಿಯೆ ಮಾಡಿದ್ದೂ ಸಾಕಷ್ಟು ಟೀಕೆಗೆ ಕಾರಣವಾಗಿದೆ. ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಸಾಲು ಸಾಲು ಅಪರಾಧ ಪ್ರಕರಣಗಳಿಂದಲೂ ಯೋಗಿ ಆದಿತ್ಯನಾಥ್ ಸರ್ಕಾರದ ಬಗ್ಗೆ ದೇಶಾದ್ಯಂತ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹಾಥ್ರಸ್ ಅತ್ಯಾಚಾರ ಸಂತ್ರಸ್ತೆಯ ಅಂತ್ಯಕ್ರಿಯೆಯನ್ನು ರಾಮಾಯಣದ ಸೀತೆಯ ಅಗ್ನಿಪರೀಕ್ಷೆಗೆ ಹೋಲಿಕೆ ಮಾಡಿದ್ದಾರೆ.“ಇಂಥ ಅಪರಾಧ ನಡೆದಾಗ ನಮ್ಮ ರಾಜ್ಯದಲ್ಲಿಯಂತೆ 72 ಗಂಟೆಯಲ್ಲಿ ಕ್ರಮ ತೆಗೆದುಕೊಳ್ಳಬೇಕು. ಆದರೆ, ದಲಿತ ಮಹಿಳೆ ಸತ್ತಾಗ ಆರೋಪಿಗಳ ವಿರುದ್ಧ ಕ್ರಮ ಜರುಗಿಸುವುದನ್ನು ಬಿಟ್ಟು ಸತ್ತ ದಿನವೇ ಆಕೆಯ ಅಂತ್ಯಕ್ರಿಯೆ ಮಾಡುತ್ತಾರೆ ಎಂದರೆ ಅಲ್ಲಿ ಎಂಥ ಆಡಳಿತ ಇರಬೇಕು ಅಲ್ಲಿ” ಎಂದು ದೀದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಹಾಥ್ರಸ್ ಅತ್ಯಾಚಾರದಂಥ ಘಟನೆಗಳು ತಮ್ಮ ರಾಜ್ಯದಲ್ಲಿ ಸಂಭವಿಸಲು ಬಿಡುವುದಿಲ್ಲ ಎಂದಿದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯ ಅಗುವುದನ್ನು ಸಹಿಸುವುದಿಲ್ಲ. ಹಾಥ್ರಸ್ ಪ್ರಕರಣಗಳಂಥವು ನಡೆದರೆ ಜನರು ಸ್ವಲ್ಪ ದಿನ ಚರ್ಚೆ ಮಾಡಿ ಮರೆತುಬಿಡುತ್ತಾರೆ. ಆದರೆ, ಮಹಾರಾಷ್ಟ್ರದಲ್ಲಿ ಇಂಥದ್ದಕ್ಕೆ ಅವಕಾಶವನ್ನೇ ನೀಡುವುದಿಲ್ಲ ಎಂದು ಮಹಾ ಸಿಎಂ ಇವತ್ತು ಹೇಳಿದ್ದಾರೆ.





