HEALTH TIPS

ಸಂಭ್ರಮ, ಸಡಗರದಿಂದ ಎಡನೀರಿನ ನೂತನ ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಪೀಠಾರೋಹಣ ಸಂಪನ್ನ

 

           ಕಾಸರಗೋಡು: ಜಗದ್ಗುರು ಶ್ರೀ ಆದಿ ಶಂಕರಾಚಾರ್ಯ ತೋಟಕಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ನೂತನ ಪೀಠಾಧಿಪತಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಪೀಠಾರೋಹಣ ವೇದ ಮಂತ್ರ ಘೋಷಗಳೊಂದಿಗೆ ಬುಧವಾರ ಸಂಭ್ರಮ, ಸಡಗರದಿಂದ ಕೋವಿಡ್ ಮಾನದಂಡದಂತೆ ನಡೆಯಿತು. 

           ಪೀಠಾರೋಹಣಕ್ಕೆ ಮುನ್ನ ಬೆಳಗ್ಗೆ ಗಣಪತಿ ಹವನ, ಚಂಡಿಕಾ ಹೋಮ, ಪಟ್ಟದ ದೇವರಿಗೆ ಪೂಜೆ, ವಿವಿಧ ಅಭಿಷೇಕ ಪೂಜೆಗಳು ಜರಗಿತು.  ಕಳೆದ ಸೋಮವಾರ ಕಾಂಚಿ ಜಗದ್ಗುರು ಪೀಠದಲ್ಲಿ ನಡೆದ ಸಮಾರಂಭದಲ್ಲಿ ಭಾರತಿ ವಿಜಯೇಂದ್ರ ಸರಸ್ವತಿಗಳು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರಿಗೆ ವಿದ್ಯುಕ್ತವಾಗಿ ಸನ್ಯಾಸ ದೀಕ್ಷೆ ನೀಡಿದ್ದರು. ಶುಭ ಮುಹೂರ್ತದಲ್ಲಿ ವಿವಿಧ ಅಭಿಷೇಕಗಳ ಬಳಿಕ ಚಿನ್ನದ ಕಿರೀಟ ಧಾರಣೆಯೊಂದಿಗೆ ಪೀಠಾರೋಹಣ ನಡೆಯಿತು.  

         ಪೀಠಾರೋಹಣಗೈದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ, ಪೇಜಾವರ ಮಠ ಸಹಿತ ವಿವಿಧ ಮಠ ಸಂಸ್ಥಾನಗಳ ವತಿಯಿಂದ ಪಟ್ಟದ ಗೌರವಗಳು ಸಮರ್ಪಣೆಯಾದವು.

      ಕರ್ನಾಟಕ ಸರ್ಕಾರದ ಪರವಾಗಿ ಹಿಂದು ಧಾರ್ಮಿಕ ಸಂಸ್ಥೆಗಳು ಹಾಗು ಧರ್ಮಾದಾಯ ದತ್ತಿ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ರಾಜ್ಯ ಸರ್ಕಾರದ ಪರವಾಗಿ ಭಕ್ತಿ ಗೌರವ ಸಹಿತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಶುಭ ಸಂದೇಶವನ್ನು ಅರ್ಪಿಸಿದರು. ಕೇಂದ್ರ ಸರ್ಕಾರದ ಪರವಾಗಿ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ಸಚಿವ ಡಿ.ವಿ.ಸದಾನಂದ ಗೌಡ, ಸಂಸದೀಯ ವ್ಯವಹಾರ ಮತ್ತು ಗಣಿ ಖಾತೆ ಸಚಿವ ಪ್ರಹ್ಲಾದ್ ಜೋಷಿ  ಅವರು ಕಳುಹಿಸಿದ ಶುಭ ಸಂದೇಶ ಪತ್ರಗಳನ್ನೂ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಹಸ್ತಾಂತರಿಸಿದರು. 

       ಕಾರ್ಯಕ್ರಮದಲ್ಲಿ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವದಿಸಿದರು. 

      ವಿಶ್ವ ಹಿಂದೂ ಪರಿಷತ್ತಿನ ಪರವಾಗಿ ರಾಷ್ಟ್ರೀಯ ಉಪಾಧ್ಯಕ್ಷ ಜೀವೇಶ್ವರ ಮಿಶ್ರ ಅವರು ಕಳುಹಿಸಿದ ಸಂದೇಶವನ್ನು ಪೇಜಾವರ ಮಠದ ದಿವಾನ ಎಂ.ರಘುರಾಮಾಚಾರ್ಯರು ಸಲ್ಲಿಸಿದರು. ಪೇಜಾವರ ಮಠದ ಸಿಇಒ ಸುಬ್ರಹ್ಮಣ್ಯ ಭಟ್, ಎಸ್.ವಿ.ಭಟ್, ವಾಸುದೇವ ಭಟ್ ಪೆರಂಪಳ್ಳಿ ಜೊತೆಯಲ್ಲಿದ್ದರು. ತೃಶೂರು ಮೂಲ ಮಠದ ಪ್ರತಿನಿಧಿಯಾಗಿ ಪರಮೇಶ್ವರ ಬ್ರಹ್ಮಾನಂದ ತೀರ್ಥ ಸ್ವಾಮೀಜಿ ಪಾಲ್ಗೊಂಡಿದ್ದರು. 


         ಕಾಸರಗೋಡು ಚಿನ್ಮಯ ಮಿಷನ್‍ನ ಶ್ರೀ ವಿವಿಕ್ತಾನಂದ ಸರಸ್ವತಿ ಸ್ವಾಮೀಜಿ, ಕಟೀಲು ಶ್ರೀ ಕ್ಷೇತ್ರದ ಶ್ರೀ ಕಮಲಾದೇವಿ ಆಸ್ರ, ಶ್ರೀ ಹರಿನಾರಾಯಣ ಆಸ್ರ, ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ದ.ಕ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಪೀಠಾರೋಹಣ ಸಮಿತಿಯ ಗೌರವಾಧ್ಯಕ್ಷ ಡಾ.ಟಿ.ಶ್ಯಾಮ್ ಭಟ್, ಕೊಲ್ಲೂರು ದೇವಸ್ಥಾನದ ನರಸಿಂಹ ಅಡಿಗ, ಬಾಳೆ ಕುದ್ರು ಮಠ ಪ್ರತಿನಿಧಿಗಳು, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಕರ್ನಾಟಕ ಬ್ಯಾಂಕ್ ಮುಖಸ್ಥರಾದ ಮಹಾಬಲೇಶ್ವರ ಭಟ್, ಪೀಠಾರೋಹಣ ಸಮಿತಿ ಕಾರ್ಯಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಸಹಿತ ವಿವಿಧ ಕ್ಷೇತ್ರಗಳ ಗಣ್ಯರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು. 

         ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಅನಂತಪುರ ಶ್ರೀ ಅನಂತಪದ್ಮನಾಭ ದೇವಸ್ಥಾನ, ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ, ಅಜ್ಜಾವರ ಮಹಿಷ ಮರ್ದಿನಿ ದೇವಸ್ಥಾನ, ಅಗಲ್ಪಾಡಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನ, ಬಾಳೆಕುದ್ರು ಮಠ, ಕಾಂಚಿ ಮಠ ಮೊದಲಾದೆಡೆಗಳ ಪ್ರಸಾದದೊಂದಿಗೆ ಗೌರವಾರ್ಪಣೆ ನಡೆಯಿತು. ಇದೇ ಸಂದರ್ಭದಲ್ಲಿ ಅಷ್ಟಾವಧಾನ ಸೇವೆ ಜರಗಿತು. ಬ್ರಹ್ಮಶ್ರೀ ಹಿರಣ್ಯ ವೆಂಕಟೇಶ್ ಭಟ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಮಧ್ಯಾಹ್ನ ಅನ್ನ ಪ್ರಸಾದ ವಿತರಣೆ, ಧಾರ್ಮಿಕ ಸಭೆ, ಗುರುವಂದನೆ ಜರಗಿತು.

           ಎಡನೀರು ಮಠ : ಸುಮಾರು ಏಳು ಶತಮಾನಗಳಿಗಿಂತಲೂ ಹೆಚ್ಚು ಪ್ರಾಚೀನ ಇತಿಹಾಸವುಳ್ಳ ಶ್ರೀ ಎಡನೀರು ಮಠ ಭಾಗವತ ಪರಂಪರೆಯ ಅಪೂರ್ವ ಧಾರ್ಮಿಕ ಕೇಂದ್ರ. ಕಾಸರಗೋಡು ಜಿಲ್ಲೆಯ ಮಧುವಾಹಿನೀ ನದೀ ತಟದಲ್ಲಿರುವ ಈ ಪುಣ್ಯಸ್ಥಳ ಶ್ರೀ  ಶಂಕರಾಚಾರ್ಯರ ಮುಖ್ಯ ಶಿಷ್ಯರಲ್ಲೊಬ್ಬರಾದ ಶ್ರೀ  ತೋಟಕಾಚಾರ್ಯರ ಪರಂಪರೆಯ ಮಠ. ಅದ್ವೈತ ಪಂಥವನ್ನನುಸರಿಸುವ ಸ್ಮಾರ್ತ-ಭಾಗವತ ಸಂಪ್ರದಾಯದ ಮಠವಾಗಿದೆ. ಶ್ರೀ ಮಠದ ಆರಾಧ್ಯಮೂರ್ತಿ ದೇವರುಗಳೆಂದರೆ ಶೀ ದಕ್ಷಿಣಾಮೂರ್ತಿ ಮತ್ತು ಗೋಪಾಲಕೃಷ್ಣ. 

        ಶ್ರೀ ಎಡನೀರು ಮಠದ ಮೂಲ ಮಠವು ತ್ರಿಚೂರು ಹಾಗೂ ಶಾಖಾ ಮಠವು ತ್ರಿಚಂಬರದಲ್ಲಿದೆ. ಶಿವಳ್ಳಿ ಸಂಪ್ರದಾಯದ ಮಠವಾಗಿದ್ದು ಶ್ರೀ ಮಠದ ಪೀಠಾಧಿಪತಿಗಳಾಗುವ ಸ್ವಾಮಿಗಳವರ ಹೆಸರುಗಳು ನಾಲ್ಕು ಹೆಸರಿನಲ್ಲಿ  ಪುನರಾವರ್ತನೆಯಾಗುವುದು ವಿಶೇಷತೆಯಾಗಿದೆ. 

1. ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರು

2. ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು

3. ಶ್ರೀ ಬಾಲಕೃಷ್ಣಾನಂದ ಭಾರತೀ ಶ್ರೀ ಪಾದಂಗಳವರು

4. ಶ್ರೀ ಈಶ್ವರಾನಂದ ಭಾರತೀ ಶ್ರೀ ಪಾದಂಗಳವರು

            ಶ್ರೀ ಮಠದಲ್ಲಿ ಒಟ್ಟು 13 ಸಮಾದಿಗಳಿವೆ. ಬ್ರಹ್ಮಖ್ಯ ಶ್ರೀ  ಕೇಶವಾನಂದ ಭಾರತೀ ಶ್ರೀ ಪಾದಂಗಳವರು 1960 ರಿಂದ 2020ರ ತನಕ ಪೀಠಾಧಿಪತಿಗಳಾಗಿದ್ದು ದೇಶ ವಿದೇಶಗಳಲ್ಲಿ ಶ್ರೀ ಎಡನೀರು ಮಠವನ್ನು ಅತ್ಯಂತ ಉನ್ನತಿಗೆ ಕೊಂಡೊಯ್ದವರು. ದೇಶದ ನ್ಯಾಯಾಂಗ ಇತಿಹಾಸದಲ್ಲಿ ಶ್ರೀ ಕೇಶವಾನಂದ ಭಾರತೀಯವರ ಹೆಸರು ಚಿರಸ್ಥಾಯಿ. ಮೂಲಭೂತ ಹಕ್ಕುಗಳ ವಿಚಾರವಾಗಿ ಅವರು ಮಂಡಿಸಿದ ಮೊಕದ್ದಮೆ ಇಂದಿಗೂ ಕಾನೂನು ವಿದ್ಯಾರ್ಥಿಗಳ ಒಂದು ಪಠ್ಯವಾಗಿ ಕಲಿಯುತ್ತಿದ್ದಾರೆ. 


(

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries