ಕೊಚ್ಚಿ: ಲೈಫ್ ಮಿಷನ್ ಒಪ್ಪಂದದಲ್ಲಿ ಅಕ್ರಮಗಳಿವೆ ಎಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಇರುವ ಮಧ್ಯಂತರ ತಡೆ ತೆಗೆದುಹಾಕಬೇಕೆಂದು ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಉಚ್ಚ ನ್ಯಾಯಾಲಯ ಮಂಗಳವಾರ ತಿರಸ್ಕರಿಸಿದೆ. ಸಿಬಿಐ ತನಿಖೆಯ ವಿರುದ್ಧ ಸರ್ಕಾರ ಸಲ್ಲಿಸಿದ ಪ್ರಕರಣದಲ್ಲಿ ಸಿಬಿಐ ಅಫಿಡವಿಟ್ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಈ ಅರ್ಜಿಯನ್ನು ವಜಾಗೊಳಿಸಲಾಗಿದೆ.
ಇಷ್ಟು ದಿನ ಕೌಂಟರ್ ಅಫಿಡವಿಟ್ ನೀಡದೆ ಪ್ರಕರಣವನ್ನು ಮೊದಲೇ ಪರಿಗಣಿಸಬೇಕೆಂಬ ಮನವಿಗೆ ಫಿರ್ಯಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಇದನ್ನು ಅಂಗೀಕರಿಸಿದ ನ್ಯಾಯಾಲಯ ಸಿಬಿಐನ ಮನವಿಯನ್ನು ವಜಾಗೊಳಿಸಿತು. ಕೌಂಟರ್ ಅಫಿಡವಿಟ್ ಸಲ್ಲಿಸಿದ ಬಳಿಕ ಸಿಬಿಐಗೆ ಮತ್ತೆ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಾಲಯ ಹೇಳಿದೆ.
ಶೀಘ್ರವಾಗಿ ಕೌಂಟರ್ ಅಫಿಡವಿಟ್ ಸಲ್ಲಿಸಲಾಗುವುದು ಮತ್ತು ಸಲ್ಲಿಸಲಾಗುವ ಅರ್ಜಿಯನ್ನು ಪರಿಶೀಲನೆಗಾಗಿ ದೆಹಲಿಗೆ ಕಳುಹಿಸಲಾಗಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ. ಈ ಪ್ರಕರಣದಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಹಾಜರಾಗಲಿದ್ದಾರೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ. ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರ ಸಮಯವನ್ನು ಪರಿಗಣಿಸಿ ಪ್ರಕರಣವನ್ನು ಇನ್ನೊಂದು ದಿನಕ್ಕೆ ಪಟ್ಟಿ ಮಾಡುವಂತೆ ನ್ಯಾಯಾಲಯವು ನಿರ್ದೇಶಿಸಿತು. ತನಿಖೆಯ ಸಾಮಾನ್ಯ ವ್ಯವಸ್ಥೆಯನ್ನು ಉಲ್ಲಂಘಿಸಿರುವ ಸಿಬಿಐ ನ್ಯಾಯಾಲಯಕ್ಕೆ ಮತ್ತೆ ಆಗಮಿಸಿರುವುದು ಪ್ರಚಾರ ಪಡೆಯುವ ತಂತ್ರಗಾರಿಕೆಯಿಂದ ಎಂದು ಸರ್ಕಾರಿ ವಕೀಲರು ಈ ಸಂದರ್ಭ ಟೀಕಿಸಿದರು. ಇದು ಸರ್ಕಾರಿ ಸಂಸ್ಥೆಯಾಗಿರುವುದರಿಂದ ರೀತಿ-ರಿವಾಜುಗಳಲ್ಲಿ ವಿಳಂಬವಾಗಲಿದೆ ಎಂದು ಸಿಬಿಐ ಉತ್ತರಿಸಿದೆ. ಯುನಿಟೆಕ್ ಎಂಡಿ ಸಂತೋಷ್ ಈಪನ್ ಕೂಡ ಈ ಪ್ರಕರಣವನ್ನು ಆದಷ್ಟು ಬೇಗ ಪರಿಗಣಿಸುವಂತೆ ಕೋರಿ ನ್ಯಾಯಾಲಯವನ್ನು ಸಂಪರ್ಕಿಸಿದ್ದರು.





