HEALTH TIPS

ಗಡಿಯಲ್ಲಿ ಸೇನೆಯೂ ನಿಂತಿರುತ್ತೆ, ಮಾತುಕತೆಯೂ ಮುಂದುವರಿಯುತ್ತೆ: ರಾಜನಾಥ್ ಸಿಂಗ್

        ನವದೆಹಲಿ: ದೇಶದ ಸಾರ್ವಭೌಮತೆ ಮತ್ತು ಏಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸೇನೆಯ ಪರಿಶ್ರಮವನ್ನು ಶ್ಲಾಘಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪೂರ್ವ ಲಡಾಖ್‌ನಲ್ಲಿ ಭಾರತೀಯ ಸೈನಿಕರು ದೃಢವಾಗಿ ನಿಂತಿರುತ್ತಾರೆ. ಚೀನಾದೊಂದಿಗಿನ ಮಾತುಕತೆಗಳೂ ಮುಂದುವರಿಯಲಿವೆ ಎಂದು ಹೇಳಿದರು.


       ಸೇನೆಯ ಹಿರಿಯ ಕಮಾಂಡರ್‌ ಸಮಾವೇಶದಲ್ಲಿ ಬುಧವಾರ ಮಾತನಾಡಿದ ಅವರು, 'ಸೇನೆಯು ನಮ್ಮ ದೇಶದ ಅತ್ಯಂತ ವಿಶ್ವಾಸಾರ್ಹ ಮತ್ತು ಸ್ಫೂರ್ತಿದಾಯಕ ಸಂಸ್ಥೆಯಾಗಿದೆ. ಹವಾಮಾನ ವೈಪರಿತ್ಯದ ನಡುವೆಯೂ ಶತ್ರುಸೇನೆಯ ಉಪಟಳಗಳ ವಿರುದ್ಧ ಹೋರಾಡುತ್ತಿರುವ ನಮ್ಮ ಸೈನಿಕರಿಗೆ ಅತ್ಯುತ್ತಮ ಶಸ್ತ್ರಾಸ್ತ್ರಗಳು, ಉಪಕರಣಗಳು ಮತ್ತು ಅಗತ್ಯ ವಸ್ತ್ರಗಳನ್ನು ನೀಡುವುದು ರಾಷ್ಟ್ರೀಯ ಕರ್ತವ್ಯವಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.

      'ಸೈನಿಕರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಹಣಕಾಸಿನ ಅಡೆತಡೆಯಿಲ್ಲ. ಎಲ್ಲ ಕ್ಷೇತ್ರಗಳಲ್ಲಿಯೂ ನಮ್ಮ ಸೈನಿಕರು ಮೇಲುಗೈ ಸಾಧಿಸುವಂತೆ ಮಾಡಲು ಸರ್ಕಾರ ಲಭ್ಯವಿರುವ ಎಲ್ಲ ಅವಕಾಶಗಳನ್ನೂ ಬಳಸಿಕೊಳ್ಳಲಿದೆ' ಎಂದರು.

      'ಪ್ರಸ್ತುತ ಸಂದರ್ಭದಲ್ಲಿ ಎದುರಾಗಿರುವ ಸವಾಲುಗಳನ್ನು ಎದುರಿಸಲು ಸೇನೆ ತೆಗೆದುಕೊಂಡಿರುವ ನಿರ್ಧಾರಗಳು ಮತ್ತು ಅದರ ಕಾರ್ಯಾಚರಣೆ ಸನ್ನದ್ಧತೆಯ ಬಗ್ಗೆ ನನಗೆ ಹೆಮ್ಮೆಯಿದೆ' ಎಂದು ರಾಜನಾಥ್‌ ಸಿಂಗ್ ಹೇಳಿದರು.

       ಇಂಟಿಗ್ರೇಟೆಡ್ ಬ್ಯಾಟಲ್ ಗ್ರೂಪ್ಸ್‌, ಇಂಟಿಗ್ರೇಟೆಡ್ ಥಿಯೇಟರ್ ಕಮಾಂಡ್ ಮತ್ತು ಇಂಟಿಗ್ರೇಟೆಡ್ ಏರ್ ಡಿಫೆನ್ಸ್ ಕಮಾಂಡ್‌ಗಳ ಅಗತ್ಯದ ಬಗ್ಗೆ ರಾಜನಾಥ್ ಸಿಂಗ್‌ ಒತ್ತಿ ಹೇಳಿದರು. ಭಾರತದ ಸಶಸ್ತ್ರ ಪಡೆಗಳು ಮುಂದಿನ ದಿನಗಳಲ್ಲಿ ಸವಾಲು ಎದುರಿಸುವ ವಿಚಾರದಲ್ಲಿ ಇವು ಮಹತ್ವದ ಪಾತ್ರ ನಿರ್ವಹಿಸುತ್ತವೆ ಎಂದರು.

     ಗಾಲ್ವಾನ್ ಕಣಿವೆ, ಕಾಶ್ಮೀರ ಮತ್ತು ಈಶಾನ್ಯ ಭಾರತದಲ್ಲಿ ಮಾತೃಭೂಮಿಯ ರಕ್ಷಣೆಗಾಗಿ ಹುತಾತ್ಮರಾದ ಯೋಧರನ್ನು ಸಚಿವರು ಸ್ಮರಿಸಿದರು.

       ಉತ್ತರದ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನೆಲೆಸಿದೆ. ಒಂದೆಡೆ ನಮ್ಮ ಸೈನಿಕರು ದೃಢವಾಗಿ ನಿಂತಿದ್ದಾರೆ, ಮತ್ತೊಂದೆಡೆ ಶಾಂತಿ ಮಾತುಕತೆಗಳು ಮುಂದುವರಿಯುತ್ತಿವೆ ಎಂದು ಅವರು ನುಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries