ಬದಿಯಡ್ಕ: ನಮ್ಮ ಸಂಸ್ಕøತಿಯನ್ನು ಉಳಿಸುವ ಕಾರ್ಯ ನಮ್ಮಿಂದಲೇ ಆಗಬೇಕು ಎಂದು ನಿವೃತ್ತ ಉಪ ಜಿಲ್ಲಾ ಶಿಕ್ಷಣಾಧಿಕಾರಿ ಕೈಲಾಸಮೂರ್ತಿ ಹೇಳಿದರು. ಕಳೆದ ವರ್ಷ ನಿವೃತ್ತರಾದ ಶಿಕ್ಷಕರಿಗೆ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ವತಿಯಿಂದ ಗೌರವಾರ್ಪಣೆಯ 2 ನೇ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮವು ಉಪಜಿಲ್ಲಾ ಮಟ್ಟದಲ್ಲಿ ನಡೆಯುತ್ತಿದ್ದು, 2 ನೇ ಹಂತದ ಕಾರ್ಯಕ್ರಮವನ್ನು ಎನ್‍ಎಚ್‍ಎಸ್‍ಎಸ್ ಪೆರಡಾಲ ಶಾಲೆಯಲ್ಲಿ ನಡೆಸಲಾಯಿತು.
ನಿವೃತ್ತ ಶಿಕ್ಷಕರಾದ ರಾಮಕೃಷ್ಣ ಭಟ್(ಎಎಲ್‍ಪಿ ಶಾಲೆ ಕಿಳಿಂಗಾರು), ಸೀತಾಲಕ್ಷ್ಮಿ ಪಿ (ಎಕೆಎಂಎಂಎಯುಪಿ ಶಾಲೆ ಪೈಕ), ಈಶ್ವರ ಭಟ್(ಎಎಲ್‍ಪಿ ಶಾಲೆ ಬೆಳಿಂಜ) ಹಾಗೂ ಶಂಕರ ರಾಜ್(ಜಿಎಚ್‍ಎಸ್‍ಎಸ್ ಆದೂರು) ಭಾಗವಹಿಸಿ, ಗೌರವ ಸ್ವೀಕರಿಸಿದರು.
ಒಂದರಿಂದ ಹತ್ತರ ವರೆಗೆ ಕನ್ನಡ ಮಾಧ್ಯಮದಲ್ಲೇ ಕಲಿತು ಉತ್ತಮ ಸಾಧನೆ ಮಾಡಿದ ಡಾ.ಸುಭಾಷ್ ಪಟ್ಟಾಜೆ(ಕಣ್ಣೂರು ವಿವಿ ಡಾಕ್ಟರೇಟ್ ಪದವಿ) ಹಾಗೂ ಅರ್ಪಿತಾ ಕೆ(ಮೈಸೂರು ವಿವಿಯ ಎಂ.ಎಸ್ಸಿ. ಪದವಿಯಲ್ಲಿ 5ಚಿನ್ನದ ಪದಕ) ಅವರಿಗೆ ಗೌರವ ಸಹಿತ ಅಭಿನಂದನೆ ಸಲ್ಲಿಸಲಾಯಿತು.
ವಿಶೇಷವಾಗಿ ಬಲೀಂದ್ರ ಪರ್ಬ ಆಚರಣೆಯನ್ನು ಜೊತೆಗೂಡಿಸಲಾಗಿತ್ತು. ಆಕರ್ಷಕವಾಗಿ ಬಲೀಂದ್ರ ಪ್ರತಿಕೃತಿ ರಚಿಸಿ, ಹಣತೆ ದೀಪಗಳಿಂದ ವೇದಿಕೆ ಅಲಂಕರಿಸಲಾಗಿತ್ತು.
ಕೇಂದ್ರ ಸಮಿತಿ ಅಧ್ಯಕ್ಷ ರವೀಂದ್ರನಾಥ್ ಕೆ.ಆರ್. ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಮಿತಿ ಸದಸ್ಯೆ ಪ್ರಭಾವತಿ ಕೆದಿಲಾಯ ಪುಂಡೂರು, ಉಪಜಿಲ್ಲಾ ಘಟಕದ ಉಪಾಧ್ಯಕ್ಷ ಪ್ರಶಾಂತ್ ಕುಮಾರ್ ಶುಭಹಾರೈಸಿದರು. ದೀಕ್ಷಿತ ಹಾಗೂ ಸುಪ್ರಿಯಾ ಪ್ರಾರ್ಥಿಸಿದರು. ರಾಜೇಶ್ ಉಬ್ರಂಗಳ ಸ್ವಾಗತಿಸಿದರು. ಶರತ್ ಕುಮಾರ್ ಮತ್ತು ಸುರೇಖ ಪರಿಚಯ ಪತ್ರ ವಾಚಿಸಿದರು. ಈಶ್ವರ ಕೆ. ವಂದಿಸಿದರು. ಶ್ರೀಶಕುಮರ್ ಪಂಜಿತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.


