ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್ ಅವರ ಆಡಳಿತ ಭಾರತ- ಅಮೆರಿಕ ಸಂಬಂಧವನ್ನು ಗಟ್ಟಿಗೊಳಿಸುವುದಕ್ಕೆ ಆದ್ಯತೆ ನೀಡಲಿದ್ದು, ಭಾರತದ ದೀರ್ಘಕಾಲದ ಕನಸಾಗಿರುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವಕ್ಕೆ ಬೈಡನ್ ಬೆಂಬಲ ನೀಡುವ ಸಾಧ್ಯತೆ ಇದೆ.
ಭಯೋತ್ಪಾದನೆ ನಿರ್ಮೂಲನೆಗೆ ಸಹಕಾರ, ಹವಾಮಾನ ಬದಲಾವಣೆ, ಆರೋಗ್ಯ ಹಾಗೂ ವ್ಯಾಪಾರ ವಿಷಯಗಳಲ್ಲಿ ಭಾರತಕ್ಕೆ ಅಮೆರಿಕದ ನೂತನ ಸರ್ಕಾರ ಬೆಂಬಲ ನೀಡಲಿದೆ ಎಂದು ಬೈಡನ್ ನ ಚುನಾವಣಾ ಪ್ರಚಾರ ತಂಡ ಪ್ರಕಟಿಸಿರುವ ನೀತಿ ಪತ್ರದ ಮೂಲಕ ತಿಳಿದುಬಂದಿದೆ.
ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಬೈಡನ್, ಅಮೆರಿಕ- ಭಾರತದ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ತಮ್ಮ 14 ವರ್ಷಗಳ ಕನಸನ್ನು ನನಸು ಮಾಡುವ ಕ್ರಮಗಳನ್ನು ಕೈಗೊಳ್ಳಲಿದ್ದಾರೆ.
2020 ರಲ್ಲಿ ಭಾರತ-ಅಮೆರಿಕ ಎರಡೂ ವಿಶ್ವದ ಅತ್ಯಂತ ಆಪ್ತ ರಾಷ್ಟ್ರಗಳಾಗುವುದು ನನ್ನ ಕನಸು, ಅದು ಸಾಧ್ಯವಾದರೆ ಇಡೀ ವಿಶ್ವ ಸುರಕ್ಷಿತವಾಗಿರಲಿದೆ ಎಂದು 2006 ರಲ್ಲೇ ಅಮೆರಿಕಾದಲ್ಲಿದ್ದ ಭಾರತೀಯ ಪತ್ರಿಕೆ (ಈಗ ಮುಚ್ಚಲ್ಪಟ್ಟಿದೆ) ನೀಡಿದ್ದ ಸಂದರ್ಶನದಲ್ಲಿ ಬೈಡನ್ ಹೇಳಿದ್ದರು.
ಈಗ 2020 ರಲ್ಲಿರುವ ಸವಾಲುಗಳು ಬೈಡನ್ ಗೆ ತಮ್ಮ ಕನಸನ್ನು ನನಸು ಮಾಡುವುದಕ್ಕೆ ಅಡ್ಡಿಯಾಗಬಹುದಾದರೂ 20, ಜನವರಿ 2021 ರಿಂದ ಪ್ರಾರಂಭವಾಗುವ ತಮ್ಮ ಅಧ್ಯಕ್ಷೀಯ ಅವಧಿ ಮುಕ್ತಾಯಗೊಳ್ಳುವುದಕ್ಕೂ ಮುನ್ನ ಅದನ್ನು ಸಾಧಿಸುವ ವಿಶ್ವಾಸವಿದೆ.
ಭಾರತಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನ ನೀಡುವುದಕ್ಕೆ ಬೆಂಬಲಿಸುವುದು ಬೈಡನ್ ಆದ್ಯತೆಯ ಪಟ್ಟಿಯಲ್ಲಿದ್ದು, ಭಾರತಕ್ಕೆ ಇದು ಅತ್ಯಂತ ಸಕಾರಾತ್ಮಕ ವಿಷಯವಾಗಿದೆ.


