ಕೊಚ್ಚಿ: ಪ್ರಯಾಣಿಕರಿಗೆ ಕೊಚ್ಚಿ ಮೆಟ್ರೋ ರೈಲುಗಳಲ್ಲಿ ಬೈಸಿಕಲ್ ಸಾಗಿಸಲು ಅವಕಾಶವಿದೆ. ಪ್ರಯಾಣಿಕರು ತಮ್ಮ ಸೈಕಲ್‍ಗಳನ್ನು ರೈಲಿನಲ್ಲಿ ಉಚಿತವಾಗಿ ಕೊಂಡೊಯ್ಯಲು ಅವಕಾಶ ನೀಡಲಾಗಿದೆ. ಮೊದಲ ಹಂತದಲ್ಲಿ ಆರು ನಿಲ್ದಾಣಗಳಲ್ಲಿ ಸೈಕ್ಲಿಂಗ್ ಸೌಲಭ್ಯ ಲಭ್ಯವಿರುತ್ತದೆ.
ನಗರದಲ್ಲಿ ಬೈಸಿಕಲ್ ಬಳಕೆ ಹೆಚ್ಚುತ್ತಿರುವ ಕಾರಣ ಕೆಎಂಆರ್ ಎಲ್ ಈ ನಿರ್ಧಾರ ಪ್ರಕಟಿಸಿದೆ. ಮೋಟಾರು ವಾಹನಗಳ ಬಳಕೆ ಕಡಿಮೆಗೊಳಿಸುವ ಮತ್ತು ಕೇಂದ್ರೀಕೃತ ಸಾರಿಗೆಯನ್ನು ಉತ್ತೇಜಿಸಲು ಕೆಎಂಆರ್ ಎಲ್ ಜಾರಿಗೆ ತರುತ್ತಿರುವ ಹಲವಾರು ಉಪಕ್ರಮಗಳ ಜೊತೆಗೆ ಇದೀಗ ಸೈಕಲ್ ಕೊಂಡೊಯ್ಯುವ ಹೊಸ ಯೋಜನೆಯೂ ಪ್ರಮುಖವಾಗಿ ಮೂಡಿಬಂದಿದೆ. ಚಂಗಂಬಳ ಪಾರ್ಕ್, ಪಲರಿವಟ್ಟಂ, ಟೌನ್ ಹಾಲ್, ಎರ್ನಾಕುಳಂ ದಕ್ಷಿಣ, ಮಹಾರಾಜ ಮತ್ತು ಇಳಂಕುಲಂ ನಿಲ್ದಾಣಗಳಲ್ಲಿ ಸೈಕಲ್‍ಗಳನ್ನು ಮೆಟ್ರೋದೊಳಗೆ ಕೊಂಡೊಯ್ಯಬಹುದು.
ಕೆಎಂಆರ್ ಎಲ್ ಎಂಡಿ ಅಲ್ಕೇಶ್ ಕುಮಾರ್ ಮಿಶ್ರಾ ಮಾತನಾಡಿ, ಆರೋಗ್ಯಕರ ಜೀವನಶೈಲಿ ಮತ್ತು ಸೈಕ್ಲಿಂಗ್ ನ್ನು ಉತ್ತೇಜಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ ಎಂದಿರುವರು.
ನಿಲ್ದಾಣಗಳಲ್ಲಿನ ಲಿಫ್ಟ್ ವ್ಯವಸ್ಥೆಯನ್ನು ಬೈಸಿಕಲ್ ನ್ನು ಪ್ಲಾಟ್‍ಫಾರ್ಮ್‍ಗೆ ಒಯ್ಯಲು ಬಳಸಬಹುದು. ಬೈಸಿಕಲ್ ನ್ನು ರೈಲಿನ ಮುಂಭಾಗ ಮತ್ತು ಹಿಂಭಾಗದ ಬಾಗಿಲುಗಳ ಮೂಲಕ ತಂದು ಅಲ್ಲಿ ನಿಲುಗಡೆಗೊಳಿಸಬಹುದು. ನಿಲ್ದಾಣಕ್ಕೆ ಬರುವಾಗಲೂ ತೆರಳುವಾಗಲೂ ಲಿಫ್ಟ್ ನ್ನು ಬಳಸಬಹುದು.
ಕಳಮಾಶ್ಚೇರಿ ಮೆಟ್ರೋ ನಿಲ್ದಾಣ ಮತ್ತು ಜಿಲ್ಲಾ ಕೇಂದ್ರವಾದ ಕಕ್ಕನಾಡವನ್ನು ಸಂಪರ್ಕಿಸುವ ಮೂಲಕ ಕೆಎಂಆರ್ ಎಲ್ ಫೀಡರ್ ಸೇವೆಯನ್ನು ಮಂಗಳವಾರ ಪ್ರಾರಂಭಿಸಲಾಯಿತು. ಈ ಸೇವೆಯು ಸಾರ್ವಜನಿಕರಿಗೆ ಮತ್ತು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳಿಗೆ ಅನುಕೂಲವಾಗಲಿದೆ ಎಂದು ಮೆಟ್ರೋದ ಅಧಿಕಾರಿಗಳು ತಿಳಿಸಿದ್ದಾರೆ.





