ಕಾಸರಗೋಡು: ಪ್ರತಿಭಟನೆ ತೀವ್ರಗೊಳ್ಳುತ್ತಿರುವ ಮುನ್ಸೂಚನೆ ಅರಿತು ಮಂಗಳೂರಿಗೆ ಕೆಎಸ್‍ಆರ್‍ಟಿಸಿ ಬಸ್ ಸೇವೆ ಪ್ರಾರಂಭಿಸಲು ಜಿಲ್ಲಾಡಳಿತ ಅಂತಿಮವಾಗಿ ಹಸಿರು ನಿಶಾನೆ ತೋರಿಸಿದೆ. ಕಳೆದ ಮಾರ್ಚ್ 22 ರಿಂದ ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಬಸ್ ಸೇವೆ ಇಂದು ಮತ್ತೆ ಪುನರಾರಂಭಗೊಳ್ಳಲಿದೆ. ಪ್ರಸ್ತುತ, ಪ್ರತಿದಿನ 19 ಬಸ್ಸುಗಳನ್ನು ಓಡಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈಗಿನ ನಿರ್ಧಾರದಂತೆ ಕೇರಳ ಬಸ್‍ಗಳನ್ನು ಬೆಳಿಗ್ಗೆ 6 ರಿಂದ ರಾತ್ರಿ 8 ರವರೆಗೆ ಮತ್ತು ಕರ್ನಾಟಕ ಬಸ್‍ಗಳನ್ನು ಬೆಳಿಗ್ಗೆ 8 ರಿಂದ ರಾತ್ರಿ 10 ರವರೆಗೆ ಸಂಚರಿಸಲು ಅನುವು ನೀಡಲಾಗಿದೆ. ಬಳಿಕ ಪ್ರತಿ ಎರಡು ಗಂಟೆಗಳಿಗೊಮ್ಮೆ ಪರ್ಯಾಯವಾಗಿ ಸಂಚಾರ ನಡೆಸಲಿದೆ. ಆದರೆ, ಕರ್ನಾಟಕದ ಪುತ್ತೂರು, ಸುಳ್ಯಗಳಿಗೆ ಬಸ್ ಸಂಚಾರ ಪುನರಾರಂಭಿಸುವ ಬಗ್ಗೆ ಅಧಿಕಾರಿಗಳು ಇನ್ನೂ ನಿರ್ಧಾರವನ್ನು ಪ್ರಕಟಿಸಿಲ್ಲ.
ಕಾಲೇಜು ಪ್ರಾರಂಭದ ಹಿನ್ನೆಲೆಯಲ್ಲಿ ಈ ನಿರ್ಧಾರ!:
ಕರ್ನಾಟಕದ ಕಾಲೇಜುಗಳು ಮತ್ತು ಶಾಲೆಗಳನ್ನು ಸೋಮವಾರ ಮತ್ತೆ ತೆರೆಯುತ್ತಿರುವುದರಿಂದ ಜಿಲ್ಲೆಯಲ್ಲಿ ಬಸ್ ಆರಂಭಿಸುವಂತೆ ತೀವ್ರ ಒತ್ತಡಗಳು ಕೇಳಿಬಂದವು. ಅಂತರರಾಜ್ಯ ಪ್ರಯಾಣ ನಿಷೇಧವನ್ನು ತೆಗೆದುಹಾಕುವಂತೆ ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ, ಕಾಸರಗೋಡಿನಿಂದ ಮಂಗಳೂರು ಬಸ್‍ಗಳು ತಲಪ್ಪಾಡಿಗೆ ಮಾತ್ರ ಚಲಿಸುತ್ತಿದ್ದವು. ಮಂಗಳೂರಿನಿಂದ ಕರ್ನಾಟಕ ರಸ್ತೆ ಸಾರಿಗೆ ಪ್ರಾಧಿಕಾರದ ಬಸ್ಸುಗಳು ಸಹ ರಾಜ್ಯ ಗಡಿಯಿಂದ ಹಿಂದಿರುಗುತ್ತಿದ್ದವು.
ಕಾಸರಗೋಡಿನಿಂದ ಮಂಗಳೂರಿಗೆ ಪ್ರತಿದಿನ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳು ಸೇರಿದಂತೆ 2 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಗಡಿಯಲ್ಲಿ ಬಸ್‍ಗಳನ್ನು ಬದಲಾಯಿಸಬೇಕಾಗುತ್ತಿದೆ. ರೋಗಿಗಳು ಕೂಡ ತುಂಬಾ ತೊಂದರೆಗೀಡಾಗುತ್ತಿರುವರು. ಇದೇ ವೇಳೆ ಕರ್ನಾಟಕ ಸಾರಿಗೆ ಅಧಿಕಾರಿಗಳು ಕೇರಳಕ್ಕೆ ಸೇವೆಯನ್ನು ಪುನರ್ ಆರಂಭಿಸಲು ಹಲವಾರು ಬಾರಿ ಜಿಲ್ಲಾ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಆದರೆ ಅವರು ಅದನ್ನು ವಿವಿಧ ಕಾರಣಗಳಿಗಾಗಿ ನಿಷೇಧಿಸಿದ್ದರು. ಮಂಗಳೂರಿನಲ್ಲಿ ಜಿಲ್ಲೆಯ ನೂರಾರು ವಿದ್ಯಾರ್ಥಿಗಳುವ್ಯಾಸಂಗಗೈಯ್ಯುತ್ತಿದ್ದು ಬಸ್ ಸಂಚಾರ ಆರಂಭ ಅತೀ ಅನಿವಾರ್ಯ. ರೈಲು ಸೇವೆ ಪ್ರಾರಂಭವಾಗದ ಕಾರಣ ವಿದ್ಯಾರ್ಥಿಗಳು ಕೆಎಸ್‍ಆರ್‍ಟಿಸಿಯನ್ನು ಅವಲಂಬಿಸಿದ್ದಾರೆ.
ವಿಳಂಬ ನಿರ್ಧಾರ:
ಸಾರಿಗೆ ಕಾರ್ಯದರ್ಶಿಯ ಹೇಳಿಕೆಯಂತೆ ಅಂತರ್ ರಾಜ್ಯ ವಾಹನ ಸಂಚಾರಕ್ಕೆ ವಿಶೇಷ ಅನುಮತಿ ಅಗತ್ಯವಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಯಾವುದೇ ನಿಬಂಧನೆಗಳು ಸಲ್ಲ ಮತ್ತು ಅಂತರ್-ರಾಜ್ಯ ಒಪ್ಪಂದವು ಜಾರಿಯಲ್ಲಿರುವುದರಿಂದ ಸೇವೆಯನ್ನು ಪುನರಾರಂಭಿಸಲು ಸರ್ಕಾರದ ಅನುಮತಿ ಅಗತ್ಯ ಇಲ್ಲವೆಂಬುದು ಸಾರಿಗೆ ಕಾರ್ಯದರ್ಶಿಯ ಪ್ರತಿಕ್ರಿಯೆ ಹೊರಬಿದ್ದ ಬಳಿಕ ಜಿಲ್ಲಾಡಳಿತ ಗತ್ಯಂತರವಿಲ್ಲದೆ ತನ್ನ ನಿರ್ಧಾರ ಬದಲಿಸಿದೆ ಎನ್ನಲಾಗಿದೆ. ಬುಧವಾರ ನಡೆದ ಕರೋನಾ ಕೋರ್ ಸಮಿತಿಯ ನಿರ್ಧಾರಕ್ಕೆ ಅನುಗುಣವಾಗಿ ಹೊಸ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಸಾರಿಗೆ ಅಧಿಕಾರಿ ವಿ ಮನೋಜ್ ಕುಮಾರ್ ತಿಳಿಸಿದ್ದಾರೆ. ಪ್ರಸ್ತುತ ತಲಪ್ಪಾಡಿಯಿಂದ ಪ್ರತಿ 10 ನಿಮಿಷಕ್ಕೆ ಬೆಳಿಗ್ಗೆ 6 ರಿಂದ ಸಂಜೆ 7 ರವರೆಗೆ 19 ಬಸ್ಸುಗಳು ಚಲಿಸುತ್ತವೆ. ಕೋವಿಡ್‍ನ ಮೊದಲು ಕೆಎಸ್‍ಆರ್‍ಟಿಸಿ ಮೂರು ಬಸ್‍ಗಳ ಅಂತರದಲ್ಲಿ 36 ಬಸ್‍ಗಳನ್ನು ಓಡಿಸುತ್ತಿದ್ದವು ಎಂದು ಅವರು ವಿವರಿಸಿದರು. ಈ ಮಾರ್ಗದಲ್ಲಿ ಪ್ರತಿ ಒಂದು ಬಸ್‍ನ ದೈನಂದಿನ ಆದಾಯ ಸುಮಾರು 25 ಸಾವಿರ ರೂ. ಆಗಿದ್ದು ಅದನ್ನು ಕಳೆದ ಒಂದೂವರೆ ತಿಂಗಳಲ್ಲಿ ಕಳೆದುಕೊಂಡದ್ದು ಇಲಾಖೆಯ, ಜಿಲ್ಲಾಡಳಿತದ ಅನಾಸ್ಥೆಯಿಂದ ಎಂದರೆ ತಪ್ಪಾಗದು.





