ಕಾಸರಗೋಡು: ಪ್ರಪಂಚದಲ್ಲೇ ಅತಿ ಕಡಿಮೆ ಕೋವಿಡ್ ಸಂಬಂಧ ಮೃತಪಟ್ಟವರ ಸಂಖ್ಯೆ ಕಾಸರಗೋಡು ಜಿಲ್ಲೆಯಲ್ಲಿದೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ನಿನ್ನೆ ತಿಳಿಸಿರುವರು.
ಜಿಲ್ಲೆಯ ಕೋವಿಡ್ 19 ಪ್ರತಿರೋಧ ಮತ್ತು ಆರೋಗ್ಯ ವಲಯದ ನಿರ್ಮಾಣ ಚಟುವಟಿಕೆಗಳ ಅವಲೋಖನ ನಡೆಸುವ ನಿಟ್ಟಿನಲ್ಲಿ ಸೋಮವಾರ ಕಾಞಂಗಾಡಿನ ಎನ್.ಎಚ್.ಎಂ.ಕಚೇರಿಯಲ್ಲಿ ನಡೆದ ಸಭೆಯ ನಂತರ ಅವರು ಮಾತನಾಡಿದರು.
ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸಂಬಮಧ ಮೃತಪಟ್ಟವರ ಸಂಖ್ಯೆ 0.34 ಆಗಿದ್ದು, ಇದು ಜಾಗತಿಕ ಮಟ್ಟದ ಗಣನೆಯಲ್ಲಿ ಅತ್ಯಂತ ಕಡಿಮೆಯಾಗಿದೆ ಎಂದವರು ತಿಳಿಸಿದರು. ಇದಕ್ಕೆ ಕ್ರಮಬದ್ಧವಾದ ಪ್ರತಿರೋಧ ಚಟುವಟಿಕೆ ನಡೆಸಿರುವುದೇ ಕಾರಣ ಎಂದವರು ಶ್ಲಾಘಿಸಿದರು.
ಲಾಕ್ ಡೌನ್ ಅವಧಿಯಲ್ಲಿ ಸಮರ್ಪಕ ರೀತಿಯ ಕ್ವಾರೆಂಟೈನ್ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದೆ. ಲಾಕ್ ಡೌನ್ ನಂತರ ರಾಜ್ಯದಲ್ಲಿ ಕೋವಿಡ್ ನಿಯಂತ್ರಣದಲ್ಲಿ ಕಾಸರಗೋಡು ಜಿಲ್ಲೆ ಮುಂಚೂಣಿಯಲ್ಲಿದೆ. 23 ಸಾವಿರಕ್ಕೂ ಅಧಿಕ ಮಮದಿ ಕೋವಿಡ್ ರೋಗಿಗಳು ಚಿಕಿತ್ಸೆಗಾಗಿ ಇಲ್ಲಿನ ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಇವರಲ್ಲಿ ಬಹುತೇಕ ಮಂದಿ ಗುಣಮುಖರಾಗಿದ್ದಾರೆ. ಇಗ 872 ಮಂದಿ ಆಸ್ಪತ್ರೆಗಳಲ್ಲಿ ಮತ್ತು ಸ್ವಗೃಹಗಳಲ್ಲಿ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ನೂರಕ್ಕೂ ಅಧಿಕ ಹುದ್ದೆಗಳು:
ಆರೋಗ್ಯ ವಲಯದಲ್ಲಿ ಅನೇಕ ಹುದ್ದೆಗಳ ಸೃಷ್ಟಿಯಾಗಿದೆ. ಪೂರ್ಣರೂಪದಲ್ಲಿ ನಿರ್ಮಾಣ ಗೊಳ್ಳದೇ ಇದ್ದರೂ, ಉಕ್ಕಿನಡ್ಕದ ಕಾಸರಗೋಡು ಮೆಡಿಕಲ್ ಕಾಲೇಜು ಮತ್ತು ಜಿಲ್ಲಾ, ಜನರಲ್ ಆಸ್ಪತ್ರೆಗಳು ಸಹಿತ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆಗೆ ನಿಡಿರುವ ಕೊಡುಗೆ ಅನನ್ಯವಾದುದು. ಕಾಸರಗೊಡು ಮೆಡಿಕಲ್ ಕಾಲೇಜಿನಲ್ಲಿ ನೂರಕ್ಕೂ ಅಧಿಕ ಹುದ್ದೆಗಳು ಸೃಷ್ಟಿಯಾಗಿವೆ. ಟಾಟಾ ಕೋವಿಡ್ ಆಸ್ಪತ್ರೆಯಲ್ಲಿ 190ಕ್ಕೂ ಅಧಿಕ ನೌಕರಿಗಳ ಸೃಷ್ಟಿಯಾಗಿದೆ. ಆಸ್ಪತ್ರೆಗಳ ಕಟ್ಟಡ, ಸೌಲಭ್ಯಗಳ ಒದಗಿಸುವಿಕೆ ಇತ್ಯಾದಿಗಳು ಅಭೀವೃದ್ಧಿಗೆ ಪೂರಕವಾಗಿವೆ ಎಂದರು.
23 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಬಡ್ತಿ:
ಮುಂದಿನ ಹಂತದಲ್ಲಿ ಕಾಸರಗೋಡು ಜಿಲ್ಲೆಯ 23 ಪ್ರಾಥಮಿಕ ಆರೋಗ್ಯ ಕೇಂದ್ರಗಳೂ ಕುಟುಂಬ ಆರೋಗ್ಯ ಕೇಂದ್ರಗಳಾಗಿ ಬಡ್ತಿ ಪಡೆಯಲಿವೆ. ಕಾಸರಗೋಡು ಮೆಡಿಕಲ್ ಕಾಲೇಜಿನ ನಿರ್ಮಾಣ ತ್ವರಿತಗೊಳಿಸಲಾಗುವುದು. ಮಂಗಲ್ಪಾಡಿ, ಬೇಡಗಂ ತಾಲೂಖು ಆಸ್ಪತ್ರೆಗಳ ಮಾಸ್ಟರ್ ಪ್ಲಾನ್ ಸಿದ್ಧಗೊಂಡಿವೆ. ಮಂಗಲ್ಪಾಡಿಯಲ್ಲಿ ಡಯಾಲಿಸಿಸ್ ಯೂನಿಟ್ ಆರಂಭಗೊಂಡಿದೆ. ತ್ರಿಕರಿಪುರ, ನೀಲೇಶ್ವರ ತಾಲೂಕು ಆಸ್ಪತ್ರೆಗಳ ನಿರ್ಮಾಣ ಮುಂದುವರಿಯುತ್ತಿದೆ ಎಂದು ತಿಳಿಸಿದರು.
ಕೇಂದ್ರೀಯ ವಿವಿಯಲ್ಲಿ ಹೆಚ್ಚುವರಿ ಒಂದು ಆರ್.ಟಿ.ಸಿಪಿ.ಆರ್. ಲ್ಯಾಬ್:
ಕಾಸರಗೊಡು ಜಿಲ್ಲೆಯಲ್ಲಿ ಕೋವಿಡ್ ತಪಾಸಣೆಗಾಗಿ ಕೇಂದ್ರೀಯ ವಿವಿ ಉತ್ತಮೆ ಬೆಂಬಲ ನೀಡುತ್ತಿದೆ ಎಂದು ತಿಳಿಸಿದ ಸಚಿವೆ ಕೆ.ಕೆ.ಶೈಲಜಾ ಟೀಚರ್ ಅಲ್ಲಿ ಹೆಚ್ಚುವರಿ ಒಂದು ಆರ್.ಟಿ.ಪಿ.ಸಿ.ಆರ್ ಲ್ಯಾಬ್ ಆರಂಭಿಸುವ ಕ್ರಮ ನಡೆಯುತ್ತಿದೆ ಎಂದರು.
ಇಲ್ಲಿನ ಚಟುವಟಿಕೆಗಳಿಗೆ ಸಂಬಂಧಿಸಿ ಬಯೋಕೆಮೆಸ್ಟ್ರಿ ಆಂಡ್ ಪಾಲಿಕ್ಯೂಲರ್ ಬಯಾಲಜಿ ಸಹಾಯಕ ಪ್ರಾಚಾರ್ಯ ಡಾ.ರಾಜೇಂದ್ರ ಪಿಲಾಂಕಟ್ಟೆ ಮತ್ತು ಬಳಗಕ್ಕೆ ಸಚಿವೆ ಅಭಿನಂದನೆ ನಡೆಸಿದರು.
ರಾಜ್ಯಕ್ಕೆ ಬ್ರಿಟನ್ ನಿಂದ ಆಗಮಿಸುವ ಮಂದಿಗಾಗಿ ಸಕ್ರೀನಿಂಗ್ ಸೌಲಭ್ಯ ಒದಗಿಸಲಾಗಿದೆ. ಈ ಮೂಲಕ ಹತ್ತು ಮಂದಿಯಲ್ಲಿ ಸಓಂಕು ಪತ್ತೆಯಾಗಿದೆ. ಆದರೆ ಇದು ರೂಪಾಂತರಗೊಂಡ ಕೋವಿಡ್ ಬಧೆ ಎಂಬುದು ಇನ್ನೂ ಖಚಿತವಾಗಿಲ್ಲ ಎಂದವರು ನುಡಿದರು.
ಆಚರಣೆಗಳಿಗೆ ಇನ್ನೂ ಸಮಯಬಂದಿಲ್ಲ!:
ಕೋವಿಡ್ ಸೋಂಕು ಬಾಧೆ ಮುಕ್ತಾಯಗೊಂಡಿದೆ ಎಂದು ತಿಳಿದು ಉತ್ಸವ ಆಚರಣೆಗಳಿಗೆ ತೊಡಗುವ ಸಮಯ ಇನ್ನೂ ಬಂದಿಲ್ಲ ಎಂದು ಸಚಿವೆ ಕೆ.ಕೆ.ಶೈಲಜಾ ಟೀಚರ್ ಅಭಿಪ್ರಾಯಪಟ್ಟರು.
ಲಸಿಕೆ ಲಭಿಸಿ ಅದರ ಪ್ರತಿರೋಧ ಲಭ್ಯತೆಗೆ ತಿಂಗಳುಗಳೇ ಬೇಕಾಗಬಹುದು. ಅಲ್ಲಿಯ ತನಕ ಯಾವುದೇ ಉತ್ಸವ ಆಚರಣೆಗಳನ್ನು ನಡೆಸಕೂಡದು. ಮಾಸ್ಕ್, ಸಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಇತ್ಯಾದಿ ಅನಿವಾರ್ಯ. ಈ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಅವರ ಬಳಗೆ ಮತ್ತು ಆರೋಗ್ಯ ಕಾರ್ಯಕರ್ತರು ನಡೆಸಿರುವ ಚಟುವಟಿಕೆಗಳು ಶ್ಲಾಘನೀಯ ಎಂದರು.
ಅವಲೋಕನ ಸಭೆಯಲ್ಲಿ ಜಿಲ್ಲಾ ವೈದ್ಯಧಿಕಾರಿ (ಆರೋಗ್ಯ) ಡಾ.ಎ.ವಿ.ರಾಮದಾಸ್, ಜಿಲ್ಲಾ ವೈದ್ಯಾಧಿಕಾರಿ(ಹೋಮಿಯೋ) ಡಾ.ರಾಮಸುಬ್ರಹ್ಮಣ್ಯನ್, ಟಾಟಾ ಕೋವಿಡ್ ಆಸ್ಪತ್ರೆಯ ಆರ್.ಎಂ.ಒ. ಡಾ.ಶರಣ್ಯಾ, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ಎ.ಟಿ.ಮನೋಜ್, ಆರೋಗ್ಯ ಕೇರಳಂ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ರಾಮನ್ ಸ್ವಾತಿ ವಾಮನ್, ಜನರಲ್ ಆಸ್ಪತ್ರೆ ವರಿಷ್ಠಾಧಿಕಾರಿ ಡಾ.ಕೆ.ಕೆ.ರಾಜಾರಾಮ, ಜಿಲ್ಲಾ ಆಸ್ಪತ್ರೆ ವರಿಷ್ಠಾಧಿಕಾರಿ ಡಾ.ಕೆ.ವಿ.ಪ್ರಕಾಶ್, ಕೋವಿಡ್ ನೋಡೆಲ್ ಅಧಿಕಾರಿಗಳು, ಆಸ್ಪತ್ರೆಗಳ ವರಿಷ್ಠಾಧಿಕಾರಿಗಳು, ವೈದ್ಯಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.




