ಬದಿಯಡ್ಕ: ದೇವತಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಭಗವಂತನ ಪೂರ್ಣಾನುಗ್ರಹ ಇದ್ದರೆ ಮಾತ್ರ ಸಾಧ್ಯ. ಪ್ರತಿಫಲಾಪೇಕ್ಷೆಯಿಲ್ಲದೆ ಶುದ್ಧ ಮನಸ್ಸಿನೊಂದಿಗೆ ಇಳಿದ ಕಾರ್ಯಗಳಿಗೆ ವಿಘ್ನಗಳು ಬಂದೊದಗುವುದಿಲ್ಲ. ಧಾರ್ಮಿಕ ಶ್ರದ್ಧಾ ಕೇಂದ್ರಗಳು ಸಮಾಜಮುಖೀ ಚಿಂತನೆಯೊಂದಿಗೆ ಮುಂದುವರಿದರೆ ನಾಡು ಅಭಿವೃದ್ಧಿ ಪಥದತ್ತ ಸಾಗುತ್ತದೆ ಎಂದು ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣು ಭಟ್ ಹೇಳಿದರು.
ಅಗಲ್ಪಾಡಿ ಜಯನಗರ ಮಾರ್ಪನಡ್ಕ ಶ್ರೀ ಗೋಪಾಲಕೃಷ್ಣ ಭಜನ ಮಂದಿರದ ನಿರ್ಮಾಣಗೊಳ್ಳುತ್ತಿರುವ ಸಭಾಭವನ ಹಾಗೂ ಭೋಜನ ಶಾಲೆಯ ಕಾಮಗಾರಿಯನ್ನು ವೀಕ್ಷಿಸಿ, ಶ್ರೀ ಮಂದಿರದ ಗೌರವ ಸಲಹೆಗಾರರ ವಿಶೇಷ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿ ಮಲಯಾಳ ಮಾಧ್ಯಮದಲ್ಲಿ ರಚಿಸಿದ ಮನವಿ ಪತ್ರವನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಅಹರ್ನಿಶಿಯಾಗಿ ಶ್ರೀಮಂದಿರದಲ್ಲಿ ಸೇವೆಸಲ್ಲಿಸುತ್ತಿರುವ ಬಾಬು ಮಣಿಯಾಣಿ ಜಯನಗರ, ಕುಂಞÂರಾಮ ಮಣಿಯಾಣಿ ಪದ್ಮಾರು ಅವರನ್ನು ಗೌರವಿಸಲಾಯಿತು. ಗೌರವ ಸಲಹೆಗಾರರ ಸಮಿತಿಯ ಅಧ್ಯಕ್ಷ ತಲೇಕ ಸುಬ್ರಹ್ಮಣ್ಯ ಭಟ್ ಅಧ್ಯಕ್ಷತೆಯನ್ನು ವಹಿಸಿದ್ದರು. ನಿವೃತ್ತ ಅಧ್ಯಾಪಿಕೆ ವಸಂತಿ ಅಗಲ್ಪಾಡಿ 1 ಲಕ್ಷ ರೂಪಾಯಿ, ರಾಧಾಕೃಷ್ಣ ನಾರಂಪಾಡಿ, ನಾರಾಯಣ ಮಣಿಯಾಣಿ 25 ಸಾವಿರ ದೇಣಿಗೆಯನ್ನು ನೀಡಿದರು. ಪ್ರೊ.ಎ.ಶ್ರೀನಾಥ್, ನಾರಾಯಣ ಮಣಿಯಾಣಿ ಕಾಟುಕುಕ್ಕೆ, ಹರಿನಾರಾಯಣ ಮಾಸ್ತರ್ ಶಿರಂತಡ್ಕ, ಮಂದಿರದ ವಿವಿಧ ಸಮಿತಿಗಳ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು. ಶ್ರೀ ಮಂದಿರದ ಅಧ್ಯಕ್ಷ ಬಾಬು ಮಾಸ್ತರ್ ಅಗಲ್ಪಾಡಿ ಸ್ವಾಗತಿಸಿ, ರಾಮಚಂದ್ರ ಭಟ್ ಉಪ್ಪಂಗಳ ವಂದಿಸಿದರು. ರಾಜೇಶ್ ಮಾಸ್ತರ್ ಅಗಲ್ಪಾಡಿ ನಿರೂಪಿಸಿದರು.


