HEALTH TIPS

ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಸಿರಿಚಂದನ ಕನ್ನಡ ಯುವಬಳಗದ ವತಿಯಿಂದ ಯಕ್ಷಗಾನ ನಾಟ್ಯ ತರಬೇತಿ ಶಿಬಿರಕ್ಕೆ ಚಾಲನೆ-ಯಕ್ಷಗಾನವು ಸಾಹಿತ್ಯ ಮತ್ತು ಕಲೆಯ ನಡುವಿನ ಸೇತುವೆ - ಯೋಗೀಶ್ ರಾವ್ ಚಿಗುರುಪಾದೆ

.

       ಕುಂಬಳೆ:  “ಯಕ್ಷಗಾನವು ಸಾಹಿತ್ಯ ಮತ್ತು ಕಲೆಯ ನಡುವೆ ಸೇತುವೆಯಂತೆ ವರ್ತಿಸುತ್ತದೆ. ಸಮಗ್ರ ಯಕ್ಷಗಾನ ಕಲಿಕೆಯ ಮೊದಲ ಹೆಜ್ಜೆ ಯಕ್ಷಗಾನÀ ಶಿಬಿರ. ಇದು ಯಕ್ಷಗಾನದ ಸಮಗ್ರ ಅಧ್ಯಯನಕ್ಕೆ ನಾಂದಿಯಾಗಲಿದೆ” ಎಂಬುದಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಸದಸ್ಯ ಯೋಗೀಶ್‍ರಾವ್ ಚಿಗುರುಪಾದೆ ಅಭಿಪ್ರಾಯಪಟ್ಟರು.   

       ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಪ್ರಾಯೋಜಕತ್ವದಲ್ಲಿ ಸಿರಿಚಂದನ ಕನ್ನಡ ಯುವ ಬಳಗ(ರಿ.) ಕಾಸರಗೋಡು ಇದರ ನೇತೃತ್ವದಲ್ಲಿ ಗಣೇಶ ಮಂದಿರ ನಾಯ್ಕಾಪು ಇಲ್ಲಿ ನಡೆದ ಯಕ್ಷಗಾನ ನಾಟ್ಯ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯಕ್ಷಗಾನವು ಬಹು ವಿಶಾಲವಾದ ಕ್ಷೇತ್ರ. ಅದರ ಹಿಮ್ಮೇಳ ಮುಮ್ಮೇಳಗಳ ಕಲಿಕೆಗೆ ಹಲವು ಆಯಾಮಗಳಿವೆ. ಆಸಕ್ತಿಯೊಂದೇ ಕಲಿಕೆಗೆ ಪ್ರೇರಣೆ ಮತ್ತದು ನಮ್ಮ ಬೆಳವಣಿಗೆಗೆ ಮೂಲ. ಯಕ್ಷಗಾನಗಳ ನಡುವಿನ ಭಿನ್ನತೆಯನ್ನು ಗುರುತಿಸುವದಕ್ಕೆ ಆ ಬಗೆಗಿನ ಸಮಗ್ರ ಜ್ಞಾನದ ಅಗತ್ಯವಿದೆ. ಶಿಬಿರ ಇದಕ್ಕೆ ಪ್ರೇರಣೆಯಾಗಬಹುದು ಎಂದವರು ನುಡಿದರು. ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳೂ ಶಿಬಿರದಲ್ಲಿ ಭಾಗವಹಿಸುತ್ತಿರುವುದು ಬಹಳ ಸಂತಸದ ವಿಷಯ. ಈ ಕಾರಣಕ್ಕೆ ಈ ಶಿಬಿರಕ್ಕೆ ಮಹತ್ವವಿದೆ ಎಂದವರು ಈ ಸಂದರ್ಭದಲ್ಲಿ ನುಡಿದರು.

      ಕರ್ನಾಟಕ ಯಕ್ಷಗಾನ ಅಕಾಡಮಿಯ ಇನ್ನೋರ್ವ ಸದಸ್ಯ ದಾಮೋದರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ “ಕಾಸರಗೋಡಿನ ಮಣ್ಣು ಯಕ್ಷಗಾನ ಕ್ಷೇತ್ರಕ್ಕೆ ಹಲವು ಕಲಾವಿದರನ್ನು ನೀಡಿದೆ. ವ್ಯಕ್ತಿತ್ವದ ರೂಪೀಕರಣಕ್ಕೆ ಕಲೆಯು ಸಹಾಯಕವಾಗಬಲ್ಲುದು. ಯಕ್ಷಗಾನ ಕಲಿಕೆಯು ಜೀವನದ ವಿಕಾಸಕ್ಕೆ ಕಾರಣಾಗುತ್ತದೆ. ಯಕ್ಷಗಾನದ ಬಗೆಗಿನ ಸ್ವಯಂ ಅರಿವನ್ನು ಮೂಡಿಸುವುದಕ್ಕೆ ಶಿಬಿರ ಸಹಕಾರಿಯಾಗಬಲ್ಲುದು” ಎಂದರು. 

      “ಜಾತಿ, ಮತ, ಲಿಂಗ, ಸ್ಥಾನ ಮಾನಗಳ ಭೇದವಿಲ್ಲದೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಶಿಬಿರವೊಂದನ್ನು ಹಮ್ಮಿಕೊಂಡಿರುವ ಪ್ರಾಧ್ಯಾಪಕ ಡಾ ರತ್ನಾಕರ ಮಲ್ಲಮೂಲೆ ಹಾಗೂ ಸಿರಿಚಂದನ ಕನ್ನಡ ಯುವಬಳಗದ ಯುವಕರ ಯುವತಿಯರ ಕಾರ್ಯ ಶ್ಲಾಘನೀಯ. ಇಂತಹ ಉತ್ತಮ ಕಾರ್ಯಗಳು ಕಾಸರಗೋಡಿನ ಕನ್ನಡದ ಕಂಪು ಗಡಿಗಳಾಚೆಗೆ ಪಸರಿಸುವುದಕ್ಕೆ ಕಾರಣವಾಗುತ್ತವೆ” ಎಂದು ಅಭಿಪ್ರಾಯಪಟ್ಟರು.

     ಶಿಬಿರದ ಸಂಯೋಜಕ ಕಾರ್ತಿಕ್ ಪಡ್ರೆ ಪ್ರಾಸ್ತಾವಿಕವಾಗಿ ಮಾತನಾಡುತ್ತಾ “ಯಕ್ಷಗಾನ ಮತ್ತು ಕನ್ನಡಕ್ಕೆ ಬಹಳ ಹತ್ತಿರವಾದ ನಂಟಿದೆ. ಕಾಸರಗೋಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಯಕ್ಷಗಾನಕ್ಕೆ ಮಹತ್ವದ ಸ್ಥಾನವಿದೆ. ಸಿರಿಚಂದನ ಕನ್ನಡ ಯುವಬಳಗವು ಕಾಸರಗೋಡಿನಲ್ಲಿ  ಕನ್ನಡದ ಉಳಿವಿಗಾಗಿ ತನ್ನದೇ ಆದ ರೀತಿಯಲ್ಲಿ ಶ್ರಮಿಸುತ್ತಿದೆ. ಆ ನಿಟ್ಟಿನಲ್ಲಿ ಶಿಬಿರ ನಡೆಸುವ ಅವಕಾಶ ದೊರೆತದ್ದನ್ನು ಸಮರ್ಪಕವಾಗಿಯೇ ಬಳಗವು ಬಳಸಿಕೊಳ್ಳುತ್ತದೆ ಎಂದು ನುಡಿದರು. ಯುವಬಳಗದ ಮಾರ್ಗದರ್ಶಕ ಹಾಗೂ ಸರಕಾರಿ ಕಾಲೇಜು ಕಾಸರಗೋಡು ಇಲ್ಲಿನ ಪ್ರಾಧ್ಯಾಪಕ  ಡಾ.ರತ್ನಾಕರ ಮಲ್ಲಮೂಲೆ ಉಪಸ್ಥಿತರಿದ್ದು ಮಾತನಾಡಿ “ಯಕ್ಷಗಾನ ಗುರು ದಿವಾಣ ಶಿವಶಂಕರ ಭಟ್ ಅವರ ನೇತೃತ್ವದಲ್ಲಿ ಕೋವಿಡ್ ಮಾನದಂಡಗಳನ್ನು ಅನುಸರಿಸಿ ಶಿಸ್ತುಬದ್ಧವಾಗಿ ಯಕ್ಷಗಾನ ನಾಟ್ಯಶಿಬಿರವು ನಡೆಯಲಿದೆ” ಎಂದರು.

    ಶಿಬಿರದ ಸಹಾಯಕ ಸಚಿನ್ ಶೆಟ್ಟಿ ಕುದ್ರೆಪ್ಪಾಡಿ ಶುಭಹಾರೈಸಿದರು. ಬಳಗದ ಜತೆ ಕಾರ್ಯದರ್ಶಿ ಸೌಮ್ಯಾ ಪ್ರಸಾದ್ ಸ್ವಾಗತಿಸಿ ಉಪಾಧ್ಯಕ್ಷ ಪ್ರಶಾಂತ್ ಹೊಳ್ಳ ವಂದಿಸಿದರು. ಸದಸ್ಯರಾದ ಸುನಿತಾ ಮಯ್ಯ, ದಿವ್ಯ ಕೆ ಪ್ರಾರ್ಥನೆ ಹಾಡಿದರು. ಅನುರಾಧ ಕಲ್ಲಂಗೋಡ್ಲು ಕಾರ್ಯಕ್ರಮ ನಿರೂಪಿಸಿದರು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries