ನವದೆಹಲಿ: ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾನೂನು ವಿರೋಧಿಸಿ ರಾಜಧಾನಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದ್ದು, ಟ್ರಾಕ್ಟರ್ ರ್ಯಾಲಿ ಬೆನ್ನಲ್ಲೇ ಇದೀಗ ರೈತರು 'ಮಾರ್ಚ್ ಟು ಪಾರ್ಲಿಮೆಂಟ್' ಘೋಷಣೆ ಮಾಡಿದ್ದಾರೆ.
ಗಣರಾಜ್ಯೋತ್ಸವ ದಿನದಂದು ರೈತರು ಟ್ರ್ಯಾಕ್ಟರ್ ರ್ಯಾಲಿ ಆಯೋಜಿಸಿದ ಬೆನ್ನಲ್ಲೇ ಇತ್ತ ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಬಜೆಟ್ ದಿನವೇ ತಮ್ಮ ಪ್ರತಿಭಟನೆಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲು ರೈತರು ನಿರ್ಧರಿಸಿದ್ದಾರೆ. ಅದರಂತೆ ಬಜೆಟ್ ದಿನದಂದು ರೈತರು ಸಂಸತ್ ನತ್ತ ಮೆರವಣಿಗೆ (ಮಾರ್ಚ್ ಟು ಪಾರ್ಲಿಮೆಂಟ್) ಘೋಷಣೆ ಮಾಡಿದ್ದಾರೆ.
ಈ ಕುರಿತಂತೆ ಸೋಮವಾರ ಕ್ರಾಂತಿಕಾರಿ ಕಿಸಾನ್ ಯೂನಿಯನ್ ((KKS) ಸಂಘದ ದರ್ಶನ್ ಪಾಲ್ ಅವರು ಮಾಹಿತಿ ನೀಡಿದ್ದು, ಮುಂಬರುವ ಫೆಬ್ರವರಿ 1ರಂದು ಅಂದರೆ ಬಜೆಟ್ ಮಂಡನೆ ದಿನವೇ ಸಂಸತ್ ನತ್ತ ರೈತರು ಮೆರವಣಿಗೆ ನಡೆಸಲಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ. ಕೇಂದ್ರ ಸರ್ಕಾರ ತನ್ನ ಕೃಷಿ ಕಾನೂನುಗಳನ್ನು ಹಿಂಪಡೆಯುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ. ಫೆಬ್ರವರಿ 1ರಂದು ನಾವು ಮಾರ್ಚ್ ಟು ಪಾರ್ಲಿಮೆಂಟ್ ನಡೆಸಲಿದ್ದೇವೆ. ದೇಶದ ವಿವಿಧ ಭಾಗಗಳಿಂದ ರೈತರು ಕಾಲ್ನಡಿಗೆಯಲ್ಲಿ ಆಗಮಿಸಲಿದ್ದು ಎಲ್ಲರೂ ಸಂಸತ್ ನತ್ತ ಕಾಲ್ನಡಿಗೆಯಲ್ಲೇ ಸಾಗಲಿದ್ದೇವೆ ಎಂದು ಹೇಳಿದ್ದಾರೆ. ಇದೇ ವೇಳೆ ಟ್ರಾಕ್ಟರ್ ರ್ಯಾಲಿ ಕುರಿತು ಮಾತನಾಡಿದ ದರ್ಶನ್ ಪಾಲ್ ಅವರು, ಪ್ರಸ್ತುತ ನಮ್ಮ ಗಮನ ಮತ್ತು ಪ್ರಾಮುಖ್ಯತೆ ಟ್ರಾಕ್ಟರ್ ರ್ಯಾಲಿ ಮೇಲಿದೆ. ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಸಲುವಾಗಿ ಮತ್ತು ರೈತರ ಸಮಸ್ಯೆ ಕುರಿತು ದೇಶದ ಗಮನ ಸೆಳೆಯುವ ನಿಟ್ಟಿನಲ್ಲಿ ಟ್ರಾಕ್ಟರ್ ರ್ಯಾಲಿ ಮಹತ್ವದ್ದಾಗಿದೆ. ಅಂತೆಯೇ ರೈತರ ಪ್ರತಿಭಟನೆ ಕೇವಲ ದೆಹಲಿ, ಹರ್ಯಾಣ ಮತ್ತು ಪಂಜಾಬ್ ಗೆ ಮಾತ್ರ ಸೀಮಿತವಾಗಿಲ್ಲ. ದೇಶಾದ್ಯಂತ ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ ಎಂಬುದನ್ನು ಸಾಬೀತು ಮಾಡಲು ಈ ರ್ಯಾಲಿ ಮುಖ್ಯವಾಗಲಿದೆ. ಟ್ರಾಕ್ಟರ್ ರ್ಯಾಲಿಯಲ್ಲಿ ಪಾಲ್ಗೊಳ್ಳುವ ರೈತರು ಮತ್ತೆ ಹಿಂದಿರುಗಿ ಹೋಗುವುದಿಲ್ಲ. ಅವರು ಇಲ್ಲೇ ನಮ್ಮ ಹೋರಾಟಕ್ಕೆ ಕೈ ಜೋಡಿಸಲಿದ್ದಾರೆ. ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ರೈತರು ಇಲ್ಲಿಯೇ ಇರಲಿದ್ದಾರೆ ಎಂದು ಹೇಳಿದರು.
ಅಂತೆಯೇ ನಮ್ಮ ಯಾವುದೇ ಪ್ರತಿಭಟನೆ ಶಾಂತಿಯುತವಾಗಿರಲಿದೆ. ಇಲ್ಲಿ ಹಿಂಸೆಗೆ ಜಾಗವಿಲ್ಲ. ಶಾಂತಿಯುತ ಹೋರಾಟದಿಂದಲೇ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದ್ದೇವೆ. ಈ ವರೆಗಿನ ಎಲ್ಲ ಹೋರಾಟಗಳೂ ಬಹುತೇಕ ಶಾಂತಿಯುತವಾಗಿಯೇ ಇದೆ. ಮುಂದೆಯೂ ಕೂಡ ಶಾಂತಿಯುತವಾಗಿರಲಿದೆ ಎಂದು ಅವರು ಹೇಳಿದರು.
ಬಿಗಿ ಭದ್ರತೆ, ಶಸ್ತ್ರ ಸಜ್ಜಿತ ಪೆÇಲೀಸ್ ಸರ್ಪಗಾವಲು:
ನಾಳೆ ನಡೆಯಲಿರುವ ಟ್ರಾಕ್ಟರ್ ರ್ಯಾಲಿಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ದೆಹಲಿಯ ಸಿಂಗು, ಟಿಕ್ರಿ, ಘಾಜಿಪುರ್ (ಉತ್ತರ ಪ್ರದೇಶ) ಬಿಗಿ ಪೆÇಲೀಸ್ ಭದ್ರತೆ ಒದಗಿಸಲಾಗಿದೆ. ದೆಹಲಿಯ ಗಡಿಗಳಾದ್ಯಂತ ಶಸ್ತ್ರಸಜ್ಜಿತ ಪೆÇಲೀಸರ ಸರ್ಪಗಾವಲು ಹಾಕಲಾಗಿದೆ. ಸಾವಿರಾರು ಪೆÇಲೀಸರು ದೆಹಲಿಯಾದ್ಯಂತ ಕರ್ತವ್ಯ ನಿರ್ವಹಣೆ ಮಾಡಲಿದ್ದಾರೆ.




