ನವದೆಹಲಿ: ಕೇಂದ್ರದ ಆಧಾರ್ ಯೋಜನೆಯನ್ನು ಸಂವಿಧಾನಾತ್ಮಕವಾಗಿ ಮಾನ್ಯವೆಂದು ಎತ್ತಿಹಿಡಿದಿರುವ 2018 ರ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಆದರೆ ಬ್ಯಾಂಕ್ ಖಾತೆಗಳು, ಮೊಬೈಲ್ ಫೋನ್ ಮತ್ತು ಶಾಲಾ ಪ್ರವೇಶಕ್ಕಾಗಿ ಅದರ ಲಿಂಕ್ ಸೇರಿದಂತೆ ಕೆಲವು ನಿಬಂಧನೆಗಳನ್ನು ಅದು ತೆಗೆದುಹಾಕಿದೆ.
ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ನೇತೃತ್ವದ ಐವರು ಸದಸ್ಯರ ಸಂವಿಧಾನ ಪೀಠವು 4: 1 ರ ಬಹುಮತದಿಂದ ಸುಪ್ರೀಂ ಕೋರ್ಟ್‌ನ ಸೆಪ್ಟೆಂಬರ್ 26, 2018 ರ ತೀರ್ಪಿನ ವಿರುದ್ಧದ ಮರುಪರಿಶೀಲನೆ ನಾ ಅರ್ಜಿಯನ್ನು ತಿರಸ್ಕರಿಸಿತು.
ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಬಹುಮತದ ತೀರ್ಪಿನ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಆಧಾರ್ ಮಸೂದೆಯನ್ನು ಹಣಕಾಸು ಮಸೂದೆ ಎಂದು ಪ್ರಮಾಣೀಕರಿಸಲಾಯಿತು, ಇದು ರಾಜ್ಯಸಭೆಯಲ್ಲಿ ಬಹುಮತದ ಒಪ್ಪಿಗೆಯನ್ನು ಪಡೆಯದೆಯೂ ಜಾರಿಗೆ ತರಲುಸರ್ಕಾರಕ್ಕೆ ಅನುವು ಮಾಡಿಕೊಟ್ಟಿತು. ಈ ಕುರಿತು ಮಸೂದೆಯ ಪ್ರಮಾಣೀಕರಣಕ್ಕೆ ಸಂಬಂಧಿಸಿ ಹಿರಿಯ ನ್ಯಾಯಪೀಠ ನಿರ್ಧರಿಸುವವರೆಗೆ ಪರಿಶೀಲನಾ ಅರ್ಜಿಗಳು ಬಾಕಿ ಉಳಿಯಲಿದೆ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ.
ಪ್ರಸ್ತುತ ಪರಿಶೀಲನಾ ಅರ್ಜಿಗಳನ್ನು ಸೆಪ್ಟೆಂಬರ್ 26, 2018 ರ ಅಂತಿಮ ತೀರ್ಪು ಮತ್ತು ಆದೇಶದ ವಿರುದ್ಧ ಸಲ್ಲಿಸಲಾಗಿತ್ತು. ಪರಿಶೀಲನಾ ಅರ್ಜಿಗಳನ್ನು ಮತ್ತು ಅದರ ಬೆಂಬಲಿತ ಆಧಾರವನ್ನು ನಾವು ಪರಿಶೀಲಿಸಿದ್ದೇವೆ. ನಮ್ಮ ಅಭಿಪ್ರಾಯದಲ್ಲಿ, ಸೆಪ್ಟೆಂಬರ್ 26, 2018 ರ ತೀರ್ಪು ಮತ್ತು ಆದೇಶವನ್ನು ಪರಿಶೀಲಿಸಲು ಯಾವುದೇ ಕಾರಣಗಳಿಲ್ಲಎಂದು ಜನವರಿ 11 ರ ಬಹುಮತದ ಆದೇಶ ಹೇಳಿದೆ.




