ನವದೆಹಲಿ: ಕಾರ್ಗಿಲ್ ಯುದ್ಧದಲ್ಲಿ ಭಾರತದ ಸೈನಿಕರ ತ್ಯಾಗ, ಶೌರ್ಯ ಎಂದಿಗೂ ಸ್ಮರಣೀಯ. ರಾಷ್ಟ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಈ ಕಾರ್ಗಿಲ್ ಯುದ್ಧದ ಕಥೆ ತಿಳಿಸುವ ಸಾಕ್ಷ್ಯ ಚಿತ್ರವು ಇದೇ ಗಣರಾಜ್ಯೋತ್ಸವದಂದು ಪ್ರದರ್ಶನಗೊಳ್ಳುತ್ತಿದೆ.
History18ರಲ್ಲಿ "ಆಪರೇಷನ್ ವಿಜಯ್" ಕಥೆಯ 'Kargil: Valour & Victory' ಸಾಕ್ಷ್ಯಚಿತ್ರ ರಾತ್ರಿ 9 ಗಂಟೆಗೆ ಪ್ರಥಮ ಬಾರಿಗೆ ಪ್ರದರ್ಶನಗೊಳ್ಳಲಿದೆ.
ಮೇ 1999ರಲ್ಲಿ ಪಾಕಿಸ್ತಾನದ ಪಡೆಗಳು ಭಾರತೀಯ ಭೂ ಪ್ರದೇಶದೊಳಗೆ ನುಸುಳುವುದರೊಂದಿಗೆ ಪ್ರಾರಂಭವಾದ ಯುದ್ಧ 60 ದಿನಗಳವರೆಗೂ ಮುಂದುವರೆಯಿತು. ಭೀಕರ ಹೋರಾಟದ ನಂತರ, ಭಾರತೀಯ ಸೇನೆ ಆಕ್ರಮಿತ ಪ್ರದೇಶವನ್ನು ಪುನಃ ಹಿಂದಕ್ಕೆ ಪಡೆದುಕೊಳ್ಳುವುದರೊಂದಿಗೆ ಯುದ್ಧ ಕೊನೆಗೊಂಡಿತು. ಸುಮಾರು 30 ಸಾವಿರ ಭಾರತೀಯ ಸೈನಿಕರು ಯುದ್ಧದಲ್ಲಿ ತೊಡಗಿಕೊಂಡಿದ್ದು, 500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. 1,300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಅವರೆಲ್ಲರಿಗೂ ಗೌರವ ಸೂಚಿಸುವ ಸಲುವಾಗಿ ಈ ಸಾಕ್ಷ್ಯಚಿತ್ರ ರೂಪಿಸಲಾಗಿದೆ.
ಯುದ್ಧದಲ್ಲಿ ತೊಡಗಿಕೊಂಡಿದ್ದ ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ, ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್ ಮತ್ತು ಕ್ಯಾಪ್ಟನ್ ವಿಕ್ರಮ್ ಬಾತ್ರ ಅವರಿಗೆ ಅತ್ಯುನ್ನತ ಮಿಲಿಟರಿ ಗೌರವ ಪರಮ ವೀರ ಚಕ್ರ ನೀಡಲಾಯಿತು. ಮಹಾವೀರ ಚಕ್ರವನ್ನು ಕ್ಯಾಪ್ಟನ್ ಅನುಜ್ ನಯ್ಯರ್ ಅವರಿಗೆ ನೀಡಿದರೆ, ಕ್ಯಾಪ್ಟನ್ ಹನೀಫ್ ಉದ್ದೀನ್ ಅವರಿಗೆ ವೀರ ಚಕ್ರ ನೀಡಲಾಯಿತು. ಸಾಕ್ಷ್ಯಚಿತ್ರವು ಈ ಧೈರ್ಯಶಾಲಿಗಳ ಕಥೆ ಹೇಳಲಿದೆ.
"ಆಪರೇಷನ್ ವಿಜಯ್"ನ ಆರಂಭಿಕ ದಿನಗಳಲ್ಲಿನ ಹಿನ್ನಡೆ ಹೊರತಾಗಿಯೂ, ಭಾರತೀಯ ಯುವ ಅಧಿಕಾರಿಗಳು ಧೈರ್ಯ ಮತ್ತು ಯುದ್ಧಕೌಶಲದೊಂದಿಗೆ ಯುದ್ಧ ಮುನ್ನಡೆಸಿದರು. ಯೋಧರ ಮಹತ್ತರ ತ್ಯಾಗ ಭಾರತೀಯ ತ್ರಿವರ್ಣಧ್ವಜ ಮತ್ತೊಮ್ಮೆ ಲಡಾಖ್ ನ ಶಿಖರಗಳ ಮೇಲೆ ಎತ್ತರದಲ್ಲಿ ಹೆಮ್ಮೆಯಿಂದ ಹಾರಲು ಕಾರಣವಾಯಿತು. ಈ ವಿಜಯದ ಕಥೆ ಹೇಳುವ ಸಾಕ್ಷ್ಯ ಚಿತ್ರವು ಇದೇ ಜನವರಿ 26ರಂದು ಮಂಗಳವಾರ ರಾತ್ರಿ 9 ಗಂಟೆಗೆ ಪ್ರದರ್ಶನಗೊಳ್ಳಲಿದೆ.


