ಕಾಸರಗೋಡು: ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯ ಚೆರ್ಕಳದಿಂದ ಚರ್ಲಡ್ಕ ವರೆಗಿನ ಕಾಮಗಾರಿ ಕೊನೆಗೂ ಆರಂಭಗೊಂಡಿದೆ. ಈ ಮೂಲಕ ರಸ್ತೆ ಅಭಿವೃದ್ಧಿಗಾಗಿ ಕ್ರಿಯಾಸಮಿತಿ ನಡೆಸುತ್ತಿರುವ ಹೋರಾಟ ಫಲಕಂಡಿದೆ. ರಸ್ತೆಯಲ್ಲಿ ಪ್ರಥಮ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಚೆರ್ಕಳದಿಂದ ಅಡ್ಕಸ್ಥಳವರೆಗಿನ ಕಾಮಗಾರಿಯಲ್ಲಿ, ಅಡ್ಕಸ್ಥಳದಿಂದ ಚರ್ಲಡ್ಕ ವರೆಗೆ ಮೊದಲ ಹಂತದ ಡಾಂಬರೀಕರಣ ನಡೆದಿದ್ದರೂ, ಇಲ್ಲಿಂದ ಮುಂದೆ ಚೆರ್ಕಳ ವರೆಗಿನ ಸುಮಾರು ಏಳು ಕಿ.ಮೀ ರಸ್ತೆಗೆ ಅಭಿವೃದ್ಧಿ ಭಾಗ್ಯ ಕೂಡಿ ಬಂದಿರಲಿಲ್ಲ. ಅಡ್ಕಸ್ಥಳದಿಂದ ಉಕ್ಕಿನಡ್ಕ ವರೆಗೆ ಒಬ್ಬರಿಗೆ ಹಾಗೂ ಇಲ್ಲಿಂದ ಮುಂದೆ ಚೆರ್ಕಳ ವರೆಗೆ ಇನ್ನೊಬ್ಬರಿಗೆ ಟೆಂಡರ್ ವಹಿಸಿಕೊಡಲಾಗಿದೆ. ಉಕ್ಕಿನಡ್ಕದಿಂದ ಚೆರ್ಕಳ ವರೆಗೆ ನೀಡಿರುವ ಟೆಂಡರ್‍ನಲ್ಲಿ್ಕುಕ್ಕಿನಡ್ಕದಿಂದ ಚರ್ಲಡ್ಕ ವರೆಗೆ ಮಾತ್ರ ಪ್ರಥಮ ಹಂತದ ಡಾಂಬರೀಕರಣ ನಡೆಸಲಾಗಿದೆ. ಇಲ್ಲಿಂದ ಮುಂದೆ ಚೆರ್ಕಳ ವರೆಗೆ ರಸ್ತೆ ಸಂಪೂರ್ಣ ಶಿಥಿಲಗೊಂಡು ವಾಹನ ಚಾಲಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಚೆರ್ಕಳ-ಕಲ್ಲಡ್ಕ ರಸ್ತೆ ಅಡ್ಕಸ್ಥಳ ಗಡಿ ವರೆಗೆ 30ಕಿ.ಮೀ ಉದ್ದವಿದ್ದು, ಚರ್ಲಡ್ಕದಿಂದ ನೆಲ್ಲಿಕಟ್ಟೆ, ಎದುರ್ತೋಡು, ಎಡನೀರು, ಮಾಸ್ತಿಕುಂಡು ಪ್ರದೇಶದಲ್ಲಿ ರಸ್ತೆ ಹೇಳ ಹೆಸರಿಲ್ಲದಂತೆ ಹಾನಿಗೀಡಾಗಿದೆ. ಸುಮಾರು 20ವರ್ಷದ ಹಿಂದೆ ಪ್ರಸಕ್ತ ರಸ್ತೆಗೆ ಮೆಕ್ಕಡಾಂ ಡಾಂಬರೀಕರಣ ನಡೆದಿದ್ದು, ನಂತರ ಅಲ್ಲಲ್ಲಿ ತೇಪೆ ಹಚ್ಚುವ ಕೆಲಸವಷ್ಟೇ ನಡೆದಿತ್ತು. ಕಳೆದ ಕೆಲವು ವರ್ಷಗಳಿಂದ ಅಂತಾರಾಜ್ಯ ಸಂಪರ್ಕದ ಚೆರ್ಕಳ-ಕಲ್ಲಡ್ಕ ರಸ್ತೆ ಅತ್ಯಂತ ಶಿಥಿಲಾವಸ್ಥೆ ತಲುಪಿತ್ತು.
ಚೆರ್ಕಳದಿಂದ ಅಡ್ಕಸ್ಥಳ ವರೆಗಿನ 30 ಕಿ.ಮೀ ದೂರದ ರಸ್ತೆಯನ್ನು ಅಗಲಗೊಳಿಸಿ, ಮೆಕ್ಕಡಾಂ ಡಾಂಬರೀಕರಣ ನಡೆಸುವ ನಿಟ್ಟಿನಲ್ಲಿ 67.15ಕೋಟಿ ರೂ. ವೆಚ್ಚಮಾಡಲಾಗುತ್ತಿದೆ. ಚೆರ್ಕಳದಿಂದ ಉಕ್ಕಿನಡ್ಕ ವರೆಗಿನ 20ಕಿ.ಮೀ ರಸ್ತೆ ಹಾಗೂ ಉಕ್ಕಿನಡ್ಕದಿಂದ ಅಡ್ಕಸ್ಥಳ ವರೆಗಿನ ಹತ್ತು ಕಿ.ಮೀ ರಸ್ತೆ ಅಭಿವೃದ್ಧಿಗೆ ಎರಡು ಪ್ರತ್ಯೇಕ ಟೆಂಡರ್ ನಡೆಸಲಾಗಿತ್ತು. ಎರಡು ಕಾಮಗಾರಿಗೆ ಏಕ ಕಾಲಕ್ಕೆ ಟೆಂಡರ್ ನಡೆದಿದ್ದರೂ, ಚೆರ್ಕಳದಿಂದ ಚರ್ಲಡ್ಕ ವರೆಗಿನ ಕಾಮಗಾರಿ ಆರಂಭಗೊಂಡಿರಲಿಲ್ಲ. ಇದರಿಂದ ಅಸಮಧಾನಗೊಂಡ ನಾಗರಿಕರು ನೆಲ್ಲಿಕಟ್ಟೆಯಲ್ಲಿ ಕ್ರಿಯಾಸಮಿತಿ ರಚಿಸಿ ಅನಿರ್ಧಿಷ್ಟಾವಧಿ ಮುಷ್ಕರ ಹೂಡಿದ್ದರು.
ಅಭಿಮತ:
ಟೆಂಡರ್ ಪ್ರಕ್ರಿಯೆ ನಡೆದಿದ್ದರೂ, ಕಾಮಗಾರಿ ಆರಂಭಿಸದಿರುವುದು ನಾಡಿನ ಜನತೆಗೆ ಎಸಗಿದ ವಂಚನೆಯಾಗಿದ್ದು, ಇದನ್ನು ಖಂಡಿಸಿ ನಾಗರಿಕರೆಲ್ಲರೂ ಒಟ್ಟಾಗಿ ಕ್ರಿಯಾಸಮಿತಿ ರಚಿಸಿ ನಡೆಸಿದ ಹೋರಾಟದ ಫಲವಾಗಿ ಕಾಮಗಾರಿ ಆರಂಭಗೊಂಡಿದೆ. ಕಾಮಗಾರಿ ಶೀಘ್ರ ಪೂರ್ತಿಗೊಳಿಸುವ ಭರವಸೆಯನ್ನು ಕ್ರಿಯಾಸಮಿತಿ ಹೊಂದಿದೆ.
ಮಾಹಿನ್ ಕೇಲೋಟ್,
ಕ್ರಿಯಾಸಮಿತಿ ಪದಾಧಿಕಾರಿ





