ಕಾಸರಗೋಡು: ಪಡನ್ನಕ್ಕಾಡ್ ನ ಜಿಲ್ಲಾ ಆಯುರ್ವೇದ ಆಸ್ಪತ್ರೆ ಕಟ್ಟಡ ಉದ್ಘಾಟನೆ ಶುಕ್ರವಾರ ಜರುಗಿತು. ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ಅವರು ವೀಡಿಯೋ ಕಾನ್ ಫೆರೆನ್ಸ್ ಮೂಲಕ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಸಚಿವೆ ಆಯುರ್ವೇದ ಆಸ್ಪತ್ರೆಗಳನ್ನು ರೋಗಿ ಸೌಹಾರ್ದ ಮತ್ತು ಅತ್ಯಾಧುನಿಕ ಸೌಲಭ್ಯಗಳ ಸಹಿತ ನವೀಕರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಯಶಸ್ವಿಯಾಗಿದೆ. ಆಸ್ಪತ್ರೆಗಳೆಲ್ಲವನ್ನೂ ಸುಧಾರಿತಗೊಳಿಸುವ ಗುರಿ ಇರಿಸಿಕೊಂಡಿರುವ ಸರಕಾರ ಈ ನಿಟ್ಟಿನಲ್ಲಿ ಆಯುರ್ವೇದ ಚಿಕಿತ್ಸಾಲಯಗಳನ್ನೂ ಅಭಿವೃದ್ಧಿಗೊಳಿಸುತ್ತಿದೆ. ಈ ಸಲುವಾಗಿ ಕಳೆದ 5 ವರ್ಷಗಳಲ್ಲಿ ಕೋಟಿಗಟ್ಟೆಲೆ ಮೊಬಲಗು ವೆಚ್ಚಮಾಡಲಾಗಿದೆ ಎಂದರು.
ರೋಗ ಪ್ರತಿರೋಧ ಸಾಮಥ್ರ್ಯ ಹೆಚ್ಚಳಗೊಳಿಸುವ ಚಿಕಿತ್ಸಾ ವಿಧಾನಗಳ ಮೂಲಕ ಕೋವಿಡ್ ಚಿಕಿತ್ಸೆ ಮತ್ತು ಕೋವಿಡ್ ತದನಂತರದ ಚಿಕಿತ್ಸೆಯಲ್ಲೂ ಆಯುಷ್ ಯೋಜನೆ ಪ್ರಧಾನ ಪಾತ್ರ ವಹಿಸಿದೆ. ಎಂಡೋಸಲ್ಫಾನ್ ಸಂತ್ರಸ್ತರಾಗಿರುವ ಜನನದಿಂದಲೇ ವಿಶೇಷಚೇತನರಾಗಿರುವ ರೋಗಿಗಳಿಗೆ ಆಯುಷ್ ಮೂಲಕ ಜಾರಿಗೊಳಿಸಲಾದ ನಿರ್ವಿಷ ಯೋಜನೆಯೂ ಸಹಕಾರಿಯಾಗಿದೆ. ಜಿಲ್ಲೆಯಲ್ಲಿ ಸಾಂತ್ವನಂ ಮೊಬೈಲ್ ಕ್ಲಿನಿಕ್ ರಾಷ್ಟ್ರೀಯ ಆಯುಷ್ ದೌತ್ಯ ಅಂಗವಾಗಿ ಚಟುವಟಿಕೆ ನಡೆಸುತ್ತಿದೆ ಎಂದವರು ನುಡಿದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಕಾಞಂಗಾಡ್ ನಗರಸಭೆ ಅಧ್ಯಕ್ಷೆ ಸುಜಾತಾ ಕೆ.ವಿ., ನೀಲೇಶ್ವರ ನಗರಸಭೆ ಅಧ್ಯಕ್ಷೆ ಟಿ.ವಿ.ಶಾಂತಾ ಮುಖ್ಯ ಅತಿಥಿಗಳಾಗಿದ್ದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಷಾನವಾಝ್ ಪಾದೂರು, ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ನ್ಯಾಯವಾದಿ ಸರಿತಾ ಎಸ್.ಎನ್., ಕಾಞಂಗಾಡ್ ನಗರಸಭೆ ಉಪಾಧ್ಯಕ್ಷ ಬಿಲ್ ಟೆಕ್ ಅಬ್ದುಲ್ಲ, ಮಾಜಿ ಅಧ್ಯಕ್ಷ ವಿ.ವಿ.ರಮೇಶನ್, ಯೋಜನೆ ಸಮಿತಿ ಸದಸ್ಯೆ ಎಲ್.ಸುಲೈಖಾ, ಭಾರತೀಯ ಚಿಕಿತ್ಸಾ ಇಲಾಖೆ ಜಿಲ್ಲಾ ವೈದ್ಯಾಧಿಕಾರಿ ಡಾ.ಸ್ಟೆಲ್ಲ ಡೇವಿಡ್, ರಾಷ್ಟ್ರೀಯ ಆಯುಷ್ ಮಿಷನ್ ಡಿ.ಪಿ.ಎಂ.ಡಾ.ಅಜಿತ್ ಕುಮಾರ್, ಆಸ್ಪತ್ರೆ ಆಡಳಿತ ಸಮಿತಿ ಸದಸ್ಯ ಕೆ.ಬಾಲಕೃಷ್ಣನ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಶಬರೀಶನ್ ಐಂಙತ್, ಸಿ.ಕೆ.ಬಾಬುರಾಜ್, ಪ್ರಮೋದ್ ಕರುವಳಂ, ಪಿ.ಟಿ.ನಂದಕುಮಾರ್, ಸುರೇಶ್ ಪುದಿಯಡತ್, ಪಿ.ಕಮ್ಮಾರನ್ ಉಪಸ್ಥಿತರಿದ್ದರು.
ಲೋಕೋಪಯೋಗಿ ಕಟ್ಟಡ ವಿಭಾಗ ಸಹಾಯಕ ಕಾರ್ಯಕಾರಿ ಇಂಜಿನಿಯರ್ ಪಿ.ಎಂ.ಯಮುನಾ ವರದಿ ವಾಚಿಸಿದರು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್ ಸ್ವಾಗತಿಸಿದರು. ಜಿಲ್ಲಾ ಆಯುರ್ವೇದ ಆಸ್ಪತ್ರೆ ಪ್ರಭಾರ ಪ್ರಧಾನ ವೈದ್ಯಾಧಿಕಾರಿ ಡಾ.ಇಂದೂ ದಿಲೀಪ್ ವಂದಿಸಿದರು.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ 4 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಪಂಚಾಯತ್ ಗಾಗಿ ಈ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ.

