ಲಖನೌ: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮ ಮಂದಿರದ ಸಂಕೀರ್ಣವನ್ನು ವಿಸ್ತರಿಸುವ ಸಲುವಾಗಿ ಅಯೋಧ್ಯೆಯ 70 ಎಕರೆ ರಾಮ ಜನ್ಮಭೂಮಿ ಆವರಣದ ಪಕ್ಕದಲ್ಲಿರುವ 676.85 ಚದರ ಮೀಟರ್ ಭೂಮಿಯನ್ನು ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಂಗಳವಾರ ಖರೀದಿಸಿದೆ.
ಸಂಕೀರ್ಣ ಪ್ರದೇಶವನ್ನು 107 ಎಕರೆಗೆ ವಿಸ್ತರಿಸಲು 676.85 ಚದರ ಮೀಟರ್ ಭೂಮಿಯನ್ನು ಟ್ರಸ್ಟ್ 1 ಕೋಟಿ ರೂ.ಗೆ ಖರೀದಿಸಿದೆ. ದೇವಾಲಯದ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ರಾಮ ಮಂದಿರ ಪಕ್ಕದ ಭೂಮಿಯ ಮಾಲೀಕ ಸ್ವಾಮಿ ದೀಪ್ ನಾರಾಯಣ್ ಅವರಿಂದ 1 ಕೋಟಿ ರೂ.ಗೆ ಖರೀದಿಸಿದ್ದು, ಮಂಗಳವಾರ ನೋಂದಣಿ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.
ಬಿಜೆಪಿಯ ಗೋಸಿಂಗಂಜ್ ಶಾಸಕ ಐಪಿ ತಿವಾರಿ ಮತ್ತು ದೇವಾಲಯ ಟ್ರಸ್ಟ್ ಸದಸ್ಯ, ಆರ್ ಎಸ್ ಎಸ್ ಅಯೋಧ್ಯೆ ಪ್ರಚಾರಕ್ ಡಾ.ಅನಿಲ್ ಮಿಶ್ರಾ ಅವರು ಭೂ ಖರೀದಿ ಒಪ್ಪಂದಕ್ಕೆ ಮತ್ತು ನೋಂದಾವಣೆ ಪತ್ರಗಳಿಗೆ ಸಾಕ್ಷಿಗಳಾಗಿ ಸಹಿ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಶಾದ್ಯಂತ ಹಮ್ಮಿಕೊಂಡಿದ್ದ ನಿಧಿ ಸಂಗ್ರಹ ಅಭಿಯಾನ ಶನಿವಾರ ಅಂತ್ಯಗೊಂಡಿದ್ದು, ನಿರೀಕ್ಷೆಗೂ ಮೀರಿ ಬರೋಬ್ಬರಿ 2100 ಕೋಟಿ ರೂಪಾಯಿ ಸಂಗ್ರಹವಾಗಿದೆ. ಈಗ ಅಯೋಧ್ಯೆಯ ರಾಮ ಮಂದಿರ ಟ್ರಸ್ಟ್ ಈಗ ಜಾಗತಿಕವಾಗಿಯೂ ನಿಧಿ ಸಮರ್ಪಣ ಅಭಿಯಾನಕ್ಕೆ ಚಾಲನೆ ನೀಡುವ ಚಿಂತನೆ ನಡೆಸಿದೆ.






