ನವದೆಹಲಿ: ಕಳೆದ ವರ್ಷದ ಎಪ್ರಿಲ್ ತಿಂಗಳಿನಿಂದ ಈ ವರ್ಷದ ಫೆಬ್ರವರಿ ತನಕ ದೇಶದಲ್ಲಿ ಸುಮಾರು 10,000ಕ್ಕೂ ಅಧಿಕ ಕಂಪೆನಿಗಳು ಬಂದ್ ಆಗಿವೆ ಎಂದು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ. ಕಳೆದ ವರ್ಷ ದೇಶದಲ್ಲಿ ವ್ಯಾಪಕವಾಗಿದ್ದ ಕೋವಿಡ್ ಸಾಂಕ್ರಾಮಿಕ ಹಾಗೂ ಅದನ್ನು ತಡೆಗಟ್ಟಲು ಹೇರಲ್ಪಟ್ಟಿದ್ದ ಅನಿರೀಕ್ಷಿತ ಲಾಕ್ ಡೌನ್‍ನಿಂದಾಗಿ ಎದುರಾದ ಆರ್ಥಿಕ ಸಂಕಷ್ಟವೇ ಈ ಕಂಪೆನಿಗಳು ಖಾಯಂ ಆಗಿ ಮುಚ್ಚಲು ಕಾರಣವೆಂದು ಅಂದಾಜಿಸಲಾಗಿದೆ.
ಕಂಪೆನೀಸ್ ಆಯಕ್ಟ್ 2013 ಇದರ ಸೆಕ್ಷನ್ 248(2) ಅನ್ವಯ 10,113 ಕಂಪೆನಿಗಳ ಹೆಸರುಗಳನ್ನು ಕೈಬಿಡಲಾಗಿರುವುದು ಲಭ್ಯ ದಾಖಲೆಗಳಿಂದ ತಿಳಿಯುತ್ತವೆ. ಸೆಕ್ಷನ್ 248(2) ಅಡಿಯಲ್ಲಿ ಕಂಪೆನಿಗಳು ತಾವಾಗಿಯೇ ಮುಚ್ಚಿವೆ ಹಾಗೂ ಇತರ ಯಾವುದೇ ಪ್ರಾಧಿಕಾರ ಕೈಗೊಂಡ ಕ್ರಮದಿಂದ ಮುಚ್ಚಿಲ್ಲ ಎಂಬುದು ತಿಳಿಯುತ್ತದೆ.
ಆದರೆ ಯಾವ ಕಂಪೆನಿಗಳು ಮುಚ್ಚಿವೆ ಎಂಬ ಕುರಿತು ಸಚಿವಾಲಯ ದಾಖಲೆಗಳನ್ನು ಇಟ್ಟುಕೊಳ್ಳುವುದಿಲ್ಲವಾದರೂ 2020-21ರ ಅವಧಿಯಲ್ಲಿ 10,113 ಕಂಪೆನಿಗಳು ಹೆಸರುಗಳನ್ನು ತೆಗೆದು ಹಾಕಲಾಗಿದೆ ಎಂದು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕುರ್ ಸೋಮವಾರ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಈ ಕಂಪೆನಿಗಳ ಪೈಕಿ ದಿಲ್ಲಿಯ 2,394 ಕಂಪೆನಿಗಳು ದಿಲ್ಲಿಯಲ್ಲಿ ಮುಚ್ಚಿದ್ದರೆ, ಉತ್ತರ ಪ್ರದೇಶದ 1936, ಮಹಾರಾಷ್ಟ್ರದ 1,279 ಹಾಗೂ ತಮಿಳುನಾಡಿನ 1,322 ಕಂಪೆನಿಗಳು ಮುಚ್ಚಿವೆ. ಈ ಅವಧಿಯಲ್ಲಿ ಕರ್ನಾಟಕದಲ್ಲಿ 836 ಕಂಪೆನಿಗಳು ಮುಚ್ಚಿದ್ದರೆ ಚಂಡಿಗಢದಲ್ಲಿ 501 ಕಂಪೆನಿಗಳು, ರಾಜಸ್ಥಾನದಲ್ಲಿ 479, ತೆಲಂಗಾಣದಲ್ಲಿ 404, ಕೇರಳದಲ್ಲಿ 307, ಜಾರ್ಖಂಡ್‍ನಲ್ಲಿ 137, ಮಧ್ಯಪ್ರದೇಶದಲ್ಲಿ 11 ಹಾಗೂ ಬಿಹಾರದಲ್ಲಿ 104 ಕಂಪೆನಿಗಳು ಮುಚ್ಚಿದ್ದವು ಎಂದು ತಿಳಿದು ಬಂದಿದೆ.





