ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ 19 ಟೆಸ್ಟ್ ಪಾಸಿಟಿವಿಟಿಯಲ್ಲಿ ಹೆಚ್ಚಳಗೊಳ್ಳುತ್ತಿದ್ದು, ಈ ಬಗ್ಗೆ ತೀವ್ರ ಜಾಗ್ರತೆ ಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಜಿಲ್ಲೆಯಲ್ಲಿ ಪ್ರಸ್ತುತ ಸರಾಸರಿ 100 ಮಂದಿ ಕೋವಿಡ್ 19 ಪರೀಕ್ಷೆಗೆ ಒಳಗಾಗುವ ವೇಳೆ 5 ಮಂದಿಗೆ ಸೋಂಕು ಖಚಿತಗೊಳ್ಳುತ್ತಿದೆ. ಈ ಸಮಖ್ಯೆ ಕಡಿಮೆಯಾಗದೇ ಇದ್ದಲ್ಲಿ ಜಿಲ್ಲೆಯಲ್ಲಿ ಕೋವಿಡ್ ಸೋಂಕು ವ್ಯಾಪಕಗೊಳ್ಳುವ ಭೀತಿಯಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಆರೋಗ್ಯ ಇಲಾಖೆ ತಿಳಿಸುವ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದವರು ತಿಳಿಸಿದರು.
ಕಟ್ಟುನಿಟ್ಟುಗಳು:
ಮದುವೆ, ಮರಣ ಸಮಾರಂಭಗಳು, ಜಾತ್ರೆ, ಸಾಮೂಹಿಕ ಪ್ರಾರ್ಥನೆ, ಧಾರ್ಮಿಕ ಸಮಾರಮಭಗಳು ಇತ್ಯಾದಿಗಳಲ್ಲಿ ಜನಸಂಖ್ಯೆ ಗರಿಷ್ಠ ಮಟ್ಟದಲ್ಲಿ ಕಡಿಮೆಗೊಳಿಸಬೇಕು. ಭಾಗವಹಿಸುವವರು ಬಾಯಿ, ಮೂಗು ಭದ್ರವಾಗಿ ಮುಚ್ಚುವಂತೆ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಪಾಲಿಸಬೇಕು. ಆಗಾಗ ನೀರು, ಸಾಬೂನು ಬಳಸಿ ಕೈತೊಳೆಯಬೇಕು ಯಾ ಸಾಟೈಸರ್ ಬಳಸಬೇಕು.
ಚುನಾವಣೆ ಪ್ರಚಾರಕ್ಕೆ ಮನೆ ಮನೆ ಸಂದರ್ಶಿಸುವ ವೇಳೆ ಅಭ್ಯರ್ಥಿಯ ಜೊತೆ ಗರಿಷ್ಠ 5 ಮಂದಿ ಮಾತ್ರ ಇರಬೇಕು. ಸೂಕ್ತ ರೀತಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಯಾವ ಕಾರಣಕ್ಕೂ ಹಿರಿಯರನ್ನು, ಗಂಭೀರ ರೋಗಿಗಳ ಬಳಗೆ ತೆರಳಕೂಡದು.
ಕಾಸರಗೊಡು ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಮೃತಪಟ್ಟವರಲ್ಲಿ ಶೇ 95 ಮಂದಿ 60 ವರ್ಷಕ್ಕಿಂತ ಅಧಿಕ ವಯೋಮಾನದಚವರು, 45 ರಿಂದ 59 ವರೆಗಿನ ವಯೋಮಾನದ ಗಂಭೀರ ರೋಗಿಗಳು ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಗುಂಪಿಗೆ ಸೇರುವ ಮಂದಿ ವಾಕ್ಸಿನೇಷನ್ ಪಡೆಯಬೇಕು.
ವಿದೇಶದಿಂದ, ಇನ್ನಿತರ ರಾಜ್ಯಗಳಿಂದ ಆಗಮಿಸಿದವರು ಕೋವಿಡ್ ಯಾ ಇತರ ರೋಗಬಾಧೆಯಿರುವವರು ಕೋವಿಡ್ ತಪಾಸಣೆಗೆ ಒಳಗಾಗಬೇಕು.






