ನವದೆಹಲಿ: ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, ಮಾರ್ಚ್ 8 ರಂದು ದೇಶದಲ್ಲಿ ಬರೋಬ್ಬರಿ 20 ಲಕ್ಷ ಮಂದಿಗೆ ಕೊರೋನಾ ಲಸಿಕೆ ನೀಡಲಾಗಿದ್ದು, ಇದುವರೆಗೆ ಒಂದು ದಿನದಲ್ಲಿ ಲಸಿಕೆ ಪಡೆದವರ ಅತಿ ಹೆಚ್ಚು ಸಂಖ್ಯೆಯಾಗಿದೆ.
ದೇಶಾದ್ಯಂತ ಈವರೆಗೆ 2 ಕೋಟಿ 30 ಲಕ್ಷಕ್ಕೂ ಅಧಿಕ ಮಂದಿಗೆ ಕೋವಿಡ್ 19 ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.
ಕಳೆದ 24 ಗಂಟೆಯಲ್ಲಿ ಬರೋಬ್ಬರಿ 20 ಲಕ್ಷ ಮಂದಿಗೆ ಕೋವಿಡ್ ಲಸಿಕೆ ಹಾಕಲಾಗಿದ್ದು, 20,19,723 ಡೋಸ್ ಲಸಿಕೆಯನ್ನು ನೀಡಲಾಗಿದೆ.
"ದೇಶಾದ್ಯಂತದ ಕಳೆದ ಜನವರಿ 16ರಿಂದ ಪ್ರಾರಂಭವಾದ ಕೋವಿಡ್-19 ವ್ಯಾಕ್ಸಿನೇಷನ್ ಡ್ರೈವ್‌ನಲ್ಲಿ ಭಾರತ ಮಹತ್ವದ ಸಾಧನೆ ಮಾಡಿದ್ದು, ಒಂದೇ ದಿನದಲ್ಲಿ 2 ದಶಲಕ್ಷಕ್ಕೂ ಹೆಚ್ಚಿನ ಲಸಿಕೆ ನೀಡಲಾಯಿತು" ಎಂದು ಸಚಿವಾಲಯ ತಿಳಿಸಿದೆ.
ಈ ಮಧ್ಯೆ, ಮಹಾರಾಷ್ಟ್ರ, ಕೇರಳ, ಪಂಜಾಬ್, ತಮಿಳುನಾಡು, ಗುಜರಾತ್ ಮತ್ತು ಕರ್ನಾಟಕದಲ್ಲಿ ಮತ್ತೆ ದೈನಂದಿನ ಕೋವಿಡ್-19 ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇಂದು ದೇಶದಲ್ಲಿ 15,388 ಹೊಸ ಪ್ರಕರಣಗಳು ವರದಿಯಾಗಿವೆ.





