ನವದೆಹಲಿ: ದೇಶದಲ್ಲಿ ಕೊರೋನಾ ಅಬ್ಬರ ತೀವ್ರವಾಗುತ್ತಿದ್ದು, ಶುಕ್ರವಾರ ಬೆಳಿಗ್ಗೆ 8ರವರೆಗಿನ 24 ತಾಸುಗಳು ಅವಧಿಯಲ್ಲಿ ಬರೋಬ್ಬರಿ 39,726 ಮಂದಿಯಲ್ಲಿ ಸೋಂಕು ಕಂಡು ಬಂದಿದೆ. ಒಂದೇ ದಿನ ಇಷ್ಟು ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವುದು 103 ದಿನಗಳ ಬಳಿಕ ಇದೇ ಮೊದಲಾಗಿದೆ.
ದೇಶದಲ್ಲಿಂದು 39,726 ಹೊಸ ಕೇಸ್ ಪತ್ತೆಯಾಗುವುದರೊಂದಿಗೆ, ಒಟ್ಟು ಸೋಂಕಿತರ ಸಂಖ್ಯೆ 1,15,14,331ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಇದೇ ವೇಳೆ ಕೊರೋನಾಗೆ ಕಳೆದ 24 ತಾಸುಗಳ ಅವಧಿಯಲ್ಲಿ 154 ಮಂದಿ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 1,59,370ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಕೊರೋನಾ ಸೋಂಕಿನ ಹೆಚ್ಚಳ 9ನೇ ದಿನವೂ ಮುಂದುವರೆದಿದೆ. ಡಿ.6 ರಂದು 36,011 ಮಂದಿಯಲ್ಲಿ ಸೋಂಕು ಕಂಡು ಬಂದಿತ್ತು. ಅದಾದ ಬಳಿಕ ಮತ್ತೊಮ್ಮೆ ಸೋಂಕಿತರ ಸಂಖ್ಯೆ 35 ಸಾವಿರದ ಗಡಿಯನ್ನು ದಾಟಿದೆ. ಬುಧವಾರ 28,903 ಸೋಂಕಿತರು ಕಂಡು ಬಂದಿದ್ದರು, ಗುರುವಾರ 35,871 ಮಂದಿ ಸೋಂಕಿತು ಕಂಡು ಬಂದಿದ್ದರು. ಶುಕ್ರವಾರ ಅದಕ್ಕಿಂದ ಹೆಚ್ಚಿನ ಮಂದಿಯಲ್ಲಿ ಸೋಂಕು ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
ದೇಶದಲ್ಲಿ ಸಕ್ರಿಯ ಪ್ರಕರಣ ಸಂಖ್ಯೆ ಇದೀಗ 2,71,282ಕ್ಕೆ ಏರಿಕೆಯಾಗಿದೆ. ಹಿಂದೆಲ್ಲಾ ಶೇ.97, ಶೇ.98ರವರೆಗೆ ಚೇತರಿಕೆ ಪ್ರಮಾಣ ಇದೀಗ ಶೇ.96.41ಕ್ಕೆ ಕುಸಿದಿದೆ.
ಭಾರತದಲ್ಲಿ ಒಂದೇ ದಿನ 10,57,383 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೂ ದೇಶದಲ್ಲಿ 23,13,70,546 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.
ಭಾರತದಲ್ಲಿ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಟ್ ಮತ್ತು ಕೋವ್ಯಾಕ್ಸಿನ್ ಕೊರೋನಾ ಲಸಿಕೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದು, ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್'ಗೆ ಲಸಿಕೆಯ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ.
ಇದರಂತೆ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 3,93,39,817 ಮಂದಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.


