HEALTH TIPS

ಆಧಾರ್ ಜೋಡಿಸದ್ದಕ್ಕೆ 3 ಕೋಟಿ ಪಡಿತರ ಚೀಟಿ ರದ್ದು: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

         ನವದೆಹಲಿ: ಪಡಿತರ ಸಂಖ್ಯೆಯೊಂದಿಗೆ ಆಧಾರ್ ಸಂಖ್ಯೆ ಸಂಯೋಜಿಸಿಲ್ಲ ಎಂಬ ಕಾರಣಕ್ಕೆ 3 ಕೋಟಿ ಪಡಿತರ ಕಾರ್ಡ್'ಗಳನ್ನು ರದ್ದು ಮಾಡಿರುವುದು ಅತ್ಯಂತ ಗಂಭೀರ ವಿಚಾರ ಎಂದಿರುವ ಸುಪ್ರೀಂ ಕೋರ್ಟ್ ಈ ಬಗ್ಗೆ ಮಾಹಿತಿ ನೀಡುವಂತೆ ಕೇಂದ್ರ ಹಾಗೂ ಎಲ್ಲಾ ರಾಜ್ಯ ಸರ್ಕಾರಗಳಿಗೆ ನೋಟಿಸ್ ನೀಡಿದೆ.

       ಪಡಿತರ ಚೀಟಿ ರದ್ದಾಗಿದ್ದರಿಂದ ಆಹಾರ ದೊರೆಯದೇ ಹಸಿವಿನಿಂದ ಮೃತಪಟ್ಟಿದ್ದಾಳೆ ಎನ್ನಲಾದ ಜಾರ್ಖಂಡ್‌ನ 11 ವರ್ಷದ ಬಾಲಕಿಯ ತಾಯಿ ಕೊಯ್ಲಿ ದೇವಿ ಅವರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬ್ಡೆ ನೇತೃತ್ವದ ಪೀಠ ಈ ನೋಟಿಸ್‌ ಜಾರಿ ಮಾಡಿದೆ.

        ಇದು ಕೇವಲ ವಿರೋಧದ ವಿಚಾರವಲ್ಲ. ಇದೊಂದು ಅತ್ಯಂತ ಗಂಭೀರ ವಿಚಾರ. 2017ರಿಂದ ಬಾಕಿ ಇರುವ ಈ ಪ್ರಕರಣ ಅತ್ಯಂತ ಗಂಭೀರವಾಗಿದ್ದು, ನಾವು ವಿಚಾರಣೆ ಆರಂಭಿಸುತ್ತೇವೆ. ಈ ಸಂಬಂಧ ನಾಲ್ಕು ವಾರಗಳೊಳಗೆ ಪ್ರತಿಕ್ರಿಯೆ ನೀಡಬೇಕು. ಅಲ್ಲದೆ, ಈ ಮೇಲ್ಮನವಿಯನ್ನು ವ್ಯತಿರಿಕ್ತವಾಗಿ ಪರಿಗಣಿಸಬಾರದು. ರದ ಅಭಿಪ್ರಾಯವನ್ನೂ ಆಲಿಸಿದ ಬಳಿಕ ಈ ಬಗ್ಗೆ ವಿಸ್ತೃತ ವಿಚಾರಣೆ ನಡೆಸುವುದಾಗಿ ಹೇಳಿದೆ.

       ಆಧಾರ್‌ ಜೋಡಣೆ ಆಗಿಲ್ಲ ಎಂಬ ನೆಪ ಮುಂದಿರಿಸಿ ಕೇಂದ್ರ ಸರ್ಕಾರ ಅಂದಾಜು 3 ಕೋಟಿಯಷ್ಟು ಹಾಗೂ ಆಯಾ ರಾಜ್ಯ ಸರ್ಕಾರಗಳು ತಲಾ 10ರಿಂದ 15 ಲಕ್ಷದಷ್ಟು ಪಡಿತರ ಚೀಟಿಗಳನ್ನು ರದ್ದುಪಡಿಸಿವೆ ಎಂದು ಅರ್ಜಿದಾರರ ಪರ ವಕೀಲ ಕಾಲಿನ್‌ ಗೊನ್ಸಾಲ್ವೀಸ್‌ ತಿಳಿಸಿದ್ದಾರೆ.

ಬುಡಕಟ್ಟು ಜನರೇ ವಾಸಿಸುವಲ್ಲಿ ಬೆರಳಚ್ಚು (ಬಯೋಮೆಟ್ರಿಕ್‌) ಗುರುತಿಸುವ ಹಾಗೂ ಕಣ್ಣಿನ ಗೆರೆ ಗುರುತಿಸುವ ಐರಿಸ್ ಸ್ಕ್ಯಾನರ್‌ಗಳು ಕಾರ್ಯ ನಿರ್ವಹಿಸಿಲ್ಲದ ಉದಾಹರಣೆಗಳೂ ಇವೆ. ಬಯೋಮೆಟ್ರಿಕ್ ದೃಢೀಕರಣ ಮತ್ತು ಆಧಾರ್‌ ಜೋಡಣೆ ಇಲ್ಲದ್ದರಿಂದಲೇ ದೇಶದಾದ್ಯಂತ ಅಂದಾಜು 4 ಕೋಟಿ ಪಡಿತರ ಚೀಟಿಗಳನ್ನು ರದ್ದುಪಡಿಸಿದ್ದಾಗಿ ಕೇಂದ್ರ ಸರ್ಕಾರವೇ ಹೇಳಿಕೊಂಡಿದೆ ಎಂದು ಅವರು ಹೇಳಿದ್ದಾರೆ.

      'ರದ್ದಾಗಿರುವ ಪಡಿತರ ಚೀಟಿಗಳು ನಕಲಿ' ಎಂದು ಕೇಂದ್ರ ಸರ್ಕಾರ ವಿವರಣೆ ನೀಡುತ್ತದೆ. ಆದರೆ, ಅಸಮರ್ಪಕ ಬಯೋಮೆಟ್ರಿಕ್‌ ವ್ಯವಸ್ಥೆ, ಆಧಾರ್ ಕಾರ್ಡ್‌ ದೊರೆಯದಿರುವಿಕೆ, ಗ್ರಾಮೀಣ ಪ್ರದೇಶಗಳಲ್ಲಿನ ಅಸಮರ್ಪಕ ಅಂತರ್ಜಾಲ ವ್ಯವಸ್ಥೆಯಂತಹ ತಾಂತ್ರಿಕ ಕಾರಣಗಳನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಅವರು ದೂರಿದರು.

     ಯಾವುದೇ ರಾಜ್ಯವೂ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಸೆಕ್ಷನ್ 14 ಹಾಗೂ ಸೆಕ್ಷನ್ 15ರ ಅಡಿ ಜಿಲ್ಲಾ ಕುಂದುಕೊರತೆ ಪರಿಹಾರ ಅಧಿಕಾರಿಯನ್ನು ನೇಮಕ ಮಾಡಿಲ್ಲ. ಬೇರೆ ಹುದ್ದೆಯಲ್ಲಿರುವ ಅಧಿಕಾರಿಗಳಿಗೆ ಈ ಕಾರ್ಯದ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ. ಹೆಚ್ಚುವರಿ ಹುದ್ದೆಗೆ ನೇಮಕವಾದ ಬಹುತೇಕ ಅಧಿಕಾರಿಗಳು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಆಹಾರ ವಿತರಣಾ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರಕ್ಕೆ ಕಾರಣರಾದವರೇ ಆಗಿದ್ದಾರೆ ಎಂದೂ ಅರ್ಜಿದಾರರು ಆರೋಪಿಸಿದರು.

       ಗೊನ್ಸಾಲ್ವೀಸ್‌ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್ ಅಮಾನ್‌ ಲೇಖಿ, ಕೇಂದ್ರ ಸರಕಾರ ಪಡಿತರ ಚೀಟಿಗಳನ್ನು ರದ್ದುಗೊಳಿಸಿದೆ ಎಂಬ ಹೇಳಿಕೆ ಸರಿಯಲ್ಲ. ದೇಶದಾದ್ಯಂತ ಜಾರಿಯಲ್ಲಿರುವ ಆಹಾರ ಭದ್ರತಾ ಕಾಯ್ದೆ ಅಡಿ ಜನಸಾಮಾನ್ಯರ ಕುಂದುಕೊರತೆ ನಿವಾರಣಾ ವ್ಯವಸ್ಥೆ ಇದೆ. ಆದರೂ ಸರ್ಕಾರ ಕೈಗೊಂಡ ಕ್ರಮವನ್ನು ತಪ್ಪಾಗಿ ಗ್ರಹಿಸಿ ಈ ಅರ್ಜಿ ಸಲ್ಲಿಸಲಾಗಿದೆ ಎಂದು ವಾದಿಸಿದರು.

        ಬಳಿಕ ಮಾತನಾಡಿದ ನ್ಯಾಯಪೀಠ, ಆಧಾರ್‌ ಕಾರಣದಿಂದ ಪ್ರತಿಕ್ರಿಯೆ ನೀಡುವಂತೆ ನಿಮಗೆ (ಕೇಂದ್ರ ಸರಕಾರ) ಹೇಳುತ್ತಿದ್ದೇವೆ. ಇದು ವಿರೋಧಿ ದಾವೆ ಅಲ್ಲ. ನಾವು ಅಂತಿಮವಾಗಿ ಇದರ ವಿಚಾರಣೆ ನಡೆಸುತ್ತೇವೆ. ನಾಲ್ಕು ವಾರದೊಳಗೆ ಇದಕ್ಕೆ ಉತ್ತರಿಸಬೇಕು ಎಂದು ಸೂಚಿಸಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries