ಕಾಸರಗೋಡು: ತನ್ನ ಇಬ್ಬರು ಮಕ್ಕಳನ್ನು ಕೊಲೆಗೈದು ತಂದೆ ನೇಣಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಹೊಸದುರ್ಗದಲ್ಲಿ ನಡೆದಿದೆ. ಚೆರ್ವತ್ತೂರ್ ಮಡಿಕುನ್ನು ನಿವಾಸಿ ರೂಪೇಶ್(38), ಇವರ ಮಕ್ಕಳಾದ ವೈದೇಹಿ(10)ಹಾಗೂ ಶಿವನಂದ್(6)ಮೃತಪಟ್ಟವರು. ಮಕ್ಕಳನ್ನು ಕೊಲೆಗೈದ ನಂತರ ತಾನು ನೇಣಿಗೆ ಶರಣಾಗಿರಬೇಕೆಂದು ಸಂಶಯಿಸಲಾಗಿದೆ.
ರೂಪೇಶ್ ಹಾಗೂ ಪತ್ನಿ ಸವಿತಾ ಮಧ್ಯೆ ಕೆಲಸಮಯದಿಂದ ವಿರಸವುಂಟಾಗಿದ್ದು, ಇದರಿಂದ ಸವಿತಾ ಹಾಗೂ ಇಬ್ಬರು ಮಕ್ಕಳು ಬೇರೆಯಾಗಿ ವಾಸಿಸುತ್ತಿದ್ದರು. ಆದರೆ, ರೂಪೇಶ್ ಮಕ್ಕಳನ್ನು ಆಗಾಗ ಮನೆಗೆ ಕರೆದುಕೊಂಡು ಬರುತ್ತಿದ್ದನು. ಚೆರ್ವತ್ತೂರು ಮಡಿಕುನ್ನುವಿನಲ್ಲಿ ಹೊಸ ಮನೆ ನಿರ್ಮಿಸಲಾಗುತ್ತಿದ್ದು, ಇಲ್ಲಿ ಕೃತ್ಯವೆಸಗಲಾಗಿದೆ. ವೈದೇಹಿ ಪಿಲಿಕ್ಕೋಡ್ ಜಿಯುಪಿ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿನಿ ಹಾಗೂ ಶಿವನಂದ್ ಒಂದನೇ ತರಗತಿ ವಿದ್ಯಾರ್ಥಿಯಾಗಿದ್ದನು.
ಮಂಗಳವಾರ ವೈದೇಹಿಯ ಜನ್ಮದಿನವಾಗಿದ್ದು, ಈ ನಿಟ್ಟಿನಲ್ಲಿ ಮಕ್ಕಳನ್ನು ನಡಿಕುನ್ನುವಿನ ತನ್ನ ತರವಾಡು ಮನೆಗೆ ಕರೆತಂದು, ಅಲ್ಲಿಂದ ಹೊಸ ಮನೆ ನಿರ್ಮಾಣವಾಗುತ್ತಿರುವಲ್ಲಿಗೆ ತೆರಳಿದ್ದರು. ರೂಪೇಶ್ ಮತ್ತು ಮಕ್ಕಳು ಸವಿತಾಳ ಮನೆಗೆ ತೆರಳಿರಬೇಕೆಂದು ತರವಾಡು ಮನೆಯವರು ಊಹಿಸಿದ್ದರು. ಈ ಮಧ್ಯೆ ಬುಧವಾರ ರೂಪೇಶ್ ಮೃತದೇಹ ಹೊಸ ಮನೆಯ ಸಿಟೌಟ್‍ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಮಕ್ಕಳಿಬ್ಬರ ಮೃತದೇಹ ಕೊಠಡಿಯೊಳಗೆ ಕಂಡುಬಂದಿತ್ತು. ಚಂದೇರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಿ ರಾಜೀವ್ ಸ್ಥಳಕ್ಕೆ ಭೇಟಿ ನೀಡಿದರು.





