ಕುಂಬಳೆ: ಶತ್ರು ರಾಷ್ಟ್ರದ ಎದುರು ಧೀರೋದಾತ್ತನಾಗಿ ಹೋರಾಡಿ ರಾಷ್ಟ್ರದ ರಕ್ಷಣೆಗೆ ಜೀವತೇದ ಮೇಜರ್ ಸಂದೀಪ್ ಉಣ್ಣಿಕೃಷ್ಣನ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ಸೋಮವಾರ ಸಂಜೆ ಸೀತಾಂಗೋಳಿಯ ಮೇಜರ್ ಸಂದೀಪ್ ಉಣ್ಣಿಕೃಷ್ಣನ್ ಸ್ಮಾರಕ ಭವನದಲ್ಲಿ ಸಂತೋಷ್ ಆಟ್ರ್ಸ್-ಸ್ಪೋಟ್ರ್ಸ್ ಕ್ಲಬ್ ಆಶ್ರಯದಲ್ಲಿ ನಡೆಯಿತು.
ನಿವೃತ್ತ ಪೋಲೀಸ್ ಅಧಿಕಾರಿ ರಾಘವ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮೋಂಬತ್ತಿ ಬೆಳಗಿ, ಕೇಕ್ ಕತ್ತರಿಸಿ ಶುಭಹಾರೈಸಿದರು. ಈ ಸಂದರ್ಭ ಮೇಜರ್ ಸಂದೀಪ್ ಅವರ ಕಾರ್ಯಚಟುವಟಿಕೆಗಳ ಬಗ್ಗೆ ಮಾತನಾಡಿ, ಇಂದಿನ ಯುವ ತಲೆಮಾರಿಗೆ ಸಂದೀಪ್ ಅವರಂತಹ ಧೀರ ರಾಷ್ಟ್ರ ಸೇವಕರು ಎಂದಿಗೂ ಮಾದರಿಯಾಗಬೇಕು. ಪ್ರತಿಯೊಬ್ಬರ ಧಮನಿಯಲ್ಲೂ ರಾಷ್ಟ್ರದ ಬಗೆಗಿನ ಕಾಳಜಿ, ತಾಯ್ನೆಲದ ಅಚಲ ಪ್ರೇಮ ಮೈವೆತ್ತಿರಬೇಕು ಎಂದು ತಿಳಿಸಿದರು.
ಕ್ಲಬ್ ನ ಅಧ್ಯಕ್ಷ ನ್ಯಾಯವಾದಿ ಥೋಮಸ್ ಡಿಸೋಜ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಯ್ನೆಲದ ಋಣವನ್ನು ತೀರಿಸುವ ಹೊಣೆ ಪ್ರತಿಯೊಬ್ಬ ಭಾರತೀಯನ ಆದ್ಯತೆಯಾಗಿದ್ದು, ಆದರ್ಶಪ್ರಾಯರಾಗಿ ಯಶಸ್ವೀ ಬದುಕು ಪ್ರತಿಯೊಬ್ಬರ ಧ್ಯೇಯವಾಗಿರಬೇಕು. ಸಂದೀಪ್ ಉಣ್ಣಿಕೃಷ್ಣನ್ ಅವರಂತಹ ಕೆಚ್ಚೆದೆಯ ರಾಷ್ಟ್ರಪ್ರೇಮ ಸದಾ ಕೀರ್ತಿಗೆ ಕಾರಣವಾಯಿತು. ಬದುಕನ್ನು ಬಂದಂತೆ ಸ್ವೀಕರಿಸುವುದು ಒಂದು ಮಾರ್ಗವಾದರೆ, ಪ್ರವಾಹಕ್ಕೆ ವಿರುದ್ದವಾಗಿ ಈಜಿ ಗೆಲವು ಸಾಧಿಸುವುದು ಇನ್ನೊಂದು ವಿಧದ ತೃಪ್ತಿಗೆ ಕಾರಣವಾಗುತ್ತದೆ. ಪ್ರತಿಯೊಬ್ಬರ ಆಂತರ್ಯದಲ್ಲಿ ಯೋಧತ್ವ ನೆಲೆಗೊಂಡಷ್ಟು ದೃಢಚಿತ್ತದಿಂದ ಗೆಲುವು ಪಡೆಯಲು ಸಾಧ್ಯ.ಇದು ಸಂದೀಪ್ ಉಣ್ಣಿಕೃಷ್ಣನ್ ನಮಗೆ ತೋರಿಸಿದ ಆದರ್ಶ ಎಂದು ತಿಳಿಸಿದರು.
ಎಸ್.ನಾರಾಯಣ, ಪತ್ರಕರ್ತ ರವಿ.ನಾಯ್ಕಾಪು, ಕ್ಲಬ್ ನ ಕಾರ್ಯದರ್ಶಿ ಮೋಹನ, ಪ್ರಸಾದ್, ಎಸ್.ವಿ.ನಾರಾಯಣ, ಖಜಾಂಜಿ ಪ್ರಸಾದ್,ಪುರುಷೋತ್ತಮ ಭಟ್, ಅರುಣ್ ಉಪಸ್ಥಿತರಿದ್ದು ಶುಭಹಾರೈಸಿದರು. ಸುನಿಲ್ ಕುಮಾರ್ ಸ್ವಾಗತಿಸಿ, ಮಹಾಲಿಂಗ ಕೆ.ವಂದಿಸಿದರು.






